ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.25- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಸದ್ಯ ಸಿಡಿ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ಹೊಸದೊಂದು ಬಾಂಬ್ ಸಿಡಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಈವರೆಗೂ ದೃಢಪಟ್ಟಿಲ್ಲವಾದರೂ ರಾಜಕೀಯ ಪಡೆಸಾಲೆಯಲ್ಲಿ ಕೇಳಿಬರುತ್ತಿರುವಂತೆ ಮಹತ್ವದ ಪತ್ರಿಕಾಗೋಷ್ಠಿ ನಡೆಸಲಿರುವ ರಮೇಶ್ ಜಾರಕಿಹೊಳಿ ಪ್ರಮುಖ ತೀರ್ಮಾಣವನ್ನು ಪ್ರಕಟಿಸಲಿದ್ದಾರೆ ಎಂದು ಮಾತು ಜೋರಾಗಿ ಕೇಳಿಬರುತ್ತಿದೆ.

ಇಂದು ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನಲ್ಲಿರುವ ಸುತ್ತೂರು ಶ್ರೀಗಳನ್ನು ಭೇಟಿಯಾದ ಜಾರಕಿಹೊಳಿ ಮಾತುಕತೆ ನಡೆಸಿದ್ದು, ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.ಅವರ ಸಹೋದರ ಲಖೌನ್ ಜಾರಕಿಹೊಳಿ ಮಾತ್ರ ನಾಳೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿರುವುದು ಭಾರೀ ಕುತೂಲಹಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದ ಅವರು ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.

ಪ್ರಸ್ತುತ ಅವರ ಮೇಲೆ ಕೇಳಿಬಂದಿರುವ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇಂಥ ಹಂತದಲ್ಲಿ ಸಂಪುಟಕ್ಕೆ ತೆಗೆದುಕೊಂಡರೆ ಸರ್ಕಾರಕ್ಕೆ ಮುಜುಗರವಾಗುತ್ತದೆ. ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳುತ್ತವೆ ಎಂದು ಫಡ್ನವೀಸ್‍ಗೆ ಸಿಎಂ ಬಿಎಸ್‍ವೈ ಹಾಗೂ ಗೃಹ ಸಚಿವ ಬೊಮ್ಮಾಯಿ ಮನವಿ ಮಾಡಿದ್ದರು.
ನಾನು ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುವೆ. ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ. ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳಬಾರದೆಂದು ಫಡ್ನವೀಸ್ ರಮೇಶ್ ಜಾರಕಿಹೊಳಿಗೆ ಸಲಹೆ ಮಾಡಿದ್ದರು ಎನ್ನಲಾಗಿದೆ.

ಹಠಮಾರಿ ಸ್ವಭಾವದ ರಮೇಶ್ ಜಾರಕಿಹೊಳಿ ಯಾರಿಗೂ ಜಗ್ಗುತ್ತಿಲ್ಲ. ಅಲ್ಲದೆ ಈ ಹಿಂದೆ ತಮ್ಮ ಜೊತೆ ಬಂದ ಮಿತ್ರರ ಜೊತೆಯೂ ಅವರು ಮಾತುಕತೆಯನ್ನು ನಡೆಸಿಲ್ಲ.ಈಗಾಗಲೇ ಸಂಕಲ್ಪ ಮಾಡಿರುವಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂದಿನ ಉಪಚುನಾವಣೆಯಲ್ಲಿ ತಮ್ಮ ಪುತ್ರನನ್ನು ಗೋಕಾಕ್ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಇದಾವುದೂ ಈ ಕ್ಷಣದವರೆಗೂ ದೃಢಪಟ್ಟಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರು ಕೇಳಿದ್ದಕ್ಕೆ ನೋ ರಿಯಾಕ್ಟ್ ಎಂದು ಗರಮ್ಮಾಗಿಯೇ ಹೇಳಿದರು.

Facebook Comments