ರಮೇಶ್ ಜಾರಕಿಹೊಳಿ ಮನವೊಲಿಸುವೆ: ಪರಂ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ.24-ಯಾವ ಕಾರಣಕ್ಕಾಗಿ ರಮೇಶ್ ಜಾರಕಿ ಹೊಳಿ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ ಗೊತ್ತಿಲ್ಲ. ಅವರ ಮನವೊಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈಗಾಗಲೇ ರಮೇಶ್ ಅವರನ್ನು ಸಚಿವರು ಹಾಗೂ ಉಸ್ತುವಾರಿಯನ್ನಾಗಿ ಮಾಡಿದ್ದೆವು. ಕಾರಣಾಂತರಗಳಿಂದ ಸಚಿವ ಸಂಪುಟದಿಂದ ಕೈಬಿಡಬೇಕಾಯಿತು. ಈಗಲೂ ಪಕ್ಷದಲ್ಲಿ ರಾಜಕೀಯವಾಗಿ ಬೇರೆ ಜವಾಬ್ದಾರಿ ಮತ್ತು ಅವಕಾಶಗಳನ್ನು ಕೊಡಬಹುದು. ಅದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದರು.
ಮೈತ್ರಿ ಸರ್ಕಾರ ಸುಭದ್ರವಾಗಿದೆ. ಯಾರು ಬೀಳಿಸಿದರೂ ಅದು ಬೀಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐದು ವರ್ಷ ಯಾರು ಏನೇ ಪ್ರಯತ್ನ ಪಟ್ಟರೂ ನಮ್ಮ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಇದಕ್ಕೆಲ್ಲ ಕಾರಣ ಬಿಜೆಪಿ ಪಕ್ಷದ ಕುತಂತ್ರ ಹಾಗೂ ಬೇಜವಾಬ್ದಾರಿ ಹೇಳಿಕೆಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ. ಅವರ ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ನಮ್ಮ ಶಾಸಕರ ಜೊತೆ ಸಂಪರ್ಕದಲ್ಲಿದ್ದರೆ, ನಾವು ಬಿಜೆಪಿ ಶಾಸಕರ ಜೊತೆ ಸಂಪರ್ಕದಲ್ಲಿದ್ದೇವೆ ಎಂಬ ಅರಿವು ಅವರಿಗಿರಬೇಕು ಎಂದು ತಿರುಗೇಟು ನೀಡಿದರು.

ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ತಮಗೆ ಹಲವಾರು ಹುದ್ದೆಗಳನ್ನು ನಿರ್ವಹಿಸುವ ಶಕ್ತಿ ಇದೆ. ಯಾವಾಗ ಏನು ಮಾಡಬೇಕು, ಯಾವ ಸಂದರ್ಭದಲ್ಲಿ ಯಾರನ್ನು ಪಕ್ಷದತ್ತ ಸೆಳೆಯಬೇಕು ಎಂಬುದೂ ಸೇರಿದಂತೆ ಎಲ್ಲಾ ರಾಜಕೀಯ ತಂತ್ರಗಾರಿಕೆಗಳು ನಮಗೆ ತಿಳಿದಿದೆ. ಇಂತಹ ಸಾಮಾನ್ಯ ವಿಷಯ ಬಿಜೆಪಿಯವರಿಗೆ ತಿಳಿದಿರಬೇಕು ಎಂದು ಕಿಡಿಕಾರಿದರು.

ಲೋಕಸಭೆ ಚುನಾವಣೆ ನಂತರ ಪರಮೇಶ್ವರ್ ಅವರನ್ನು ಎಲ್ಲರೂ ಸೇರಿ ಮೂಲೆ ಗುಂಪು ಮಾಡುತ್ತಾರೆ ಎಂಬ ವಿಚಾರ ಹರಿದಾಡುತ್ತಿದೆ. ಆದರೆ ನಮ್ಮನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ಇವೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಹಿರಿಯ ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಹಂಚಿಕೆ ಮಾಡಲಾಗಿದೆ. ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲು ಅನೇಕ ಕಾರಣಗಳಿದ್ದವು. ಆದರೆ ಉದ್ದೇಶಪೂರ್ವಕವಾಗಿ ಟಿಕೆಟ್ ಕೈತಪ್ಪಲಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಹೈಕಮಾಂಡ್ ಮಟ್ಟದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ