“ರಾಜ್ಯಸಭೆ ಟಿಕೆಟ್ ಸಿಗದಿದ್ದಕ್ಕೆ ಸಂಕಟ ಇಲ್ಲ” : ರಮೇಶ್ ಕತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.9- ರಾಜ್ಯಸಭೆಯ ಟಿಕೆಟ್ ಸಿಗದೇ ಇರುವುದಕ್ಕೆ ಯಾವುದೇ ಸಂಕಟ ಅಸಮಾಧಾನ ಇಲ್ಲ ಎಂದು ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರು ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಪಕ್ಷ ಸಾಮಾನ್ಯ ಕಾರ್ಯಕರ್ತರ ಪರವಾಗಿದೆ ಎಂದು ಸಂದೇಶ ರವಾನೆಯಾಗಿದೆ. ಈರಣ್ಣ ಕಡಾಡಿ ಮುಂಬೈ ಕರ್ನಾಟಕ ಭಾಗದವರು. 30 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ರಾಜ್ಯದ ಪರವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯ ಎಂದರು.

ರಾಜ್ಯಸಭೆಗೆ ನನ್ನನ್ನು ಆಯ್ಕೆ ಮಾಡುವುದಾಗಿ ವರಿಷ್ಠರು ಮಾತು ಕೊಟ್ಟಿದ್ದರು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಿದ್ದು ನಿಜ. ಆದರೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ.

ಏನೂ ಮಾಡಲಿಕ್ಕೆ ಆಗುವುದಿಲ್ಲ. ವರಿಷ್ಠರ ಮಾತನ್ನು ಒಪ್ಪಲೇಬೇಕು. ಯಾವ ಯಾವ ಹಂತದಲ್ಲಿ ಏನು ಮಾಡಬೇಕು ಎಂಬುನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದನ್ನು ನಾವು ಒಪ್ಪುತ್ತೇವೆ ಎಂದು ಹೇಳಿದರು. ತಮ್ಮ ಸಹೋದರ ಹಾಗೂ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ತಮ್ಮದೇ ಆದ ಸಾಮಥ್ರ್ಯ, ಅರ್ಹತೆ ಇದೆ. ಅವರು ಒಂದಲ್ಲ ಒಂದು ದಿನ ಈ ರಾಜ್ಯದ ಮಂತ್ರಿಯಾಗುತ್ತಾರೆ.

ಜನಸೇವೆ ಮಾಡುವುದು ನಮ್ಮ ರಕ್ತದಲ್ಲೇ ಇದೆ. ಅದಕ್ಕಾಗಿ ಅಧಿಕಾರವೇ ಬೇಕು ಎಂಬುದಿಲ್ಲ. ಎಂಎಲ್‍ಸಿ ಸ್ಥಾನದ ಆಕಾಂಕ್ಷಿಯೂ ನಾನಲ್ಲ ಎಂದರು.  ಲಾಕ್‍ಡೌನ್ ಮುಗಿಯುವವರೆಗೂ ನಾವು ಭೋಜನ ಕೂಟವನ್ನು ಏರ್ಪಡಿಸುತ್ತಲೇ ಇರುತ್ತೇವೆ, ಹಿಂಡಿ, ಪುಂಡಿ, ಪಲ್ಯ ರೊಟ್ಟಿ ನೀಡುತ್ತೇವೆ. ಅದು ಪ್ರತ್ಯೇಕ ಸಭೆಯಲ್ಲ.

ಅದನ್ನು ಪ್ರತ್ಯೇಕ ಸಭೆ ಎಂದು ಭಾವಿಸಬೇಕಿಲ್ಲ ಎಂದು ಹೇಳಿದರು.  ಪಕ್ಷದಲ್ಲಿ ಬಿ.ಎಲ್.ಸಂತೋಷ್ ಮತ್ತು ಯಡಿಯೂರಪ್ಪನವರು ಹಿರಿಯರು. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದರು.

Facebook Comments