ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಯೆಸ್ ಬ್ಯಾಂಕ್‍ನ ಸಂಸ್ಥಾಪಕ ರಾಣಾ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮಾ.8- ದೇಶದ ಪ್ರತಿಷ್ಟಿತ ಬ್ಯಾಂಕ್‍ಗಳಲ್ಲಿ ಒಂದಾದ ಯೆಸ್ ಬ್ಯಾಂಕ್‍ನ ತೀವ್ರ ಆರ್ಥಿಕ ಬಿಕ್ಕಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ಗಂಭೀರ ಆರೋಪ ಎದುರಿಸುತ್ತಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಸತತ ಎರಡು ದಿನಗಳ ನಿರಂತರ ವಿಚಾರಣೆ ಬಳಿಕ ಇಡಿ ಅಧಿಕಾರಗಳು ರಾಣಾ ಕಪೂರ್ ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಅಸಹಕಾರ ನೀಡಿದ್ದು, ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಣಾ ಕಪೂರ್ ಅವರ ಮುಂಬೈ ನಿವಾಸದಲ್ಲಿ ಶುಕ್ರವಾರ ರಾತ್ರಿ ದಾಳಿ ನಡೆಸಿ ಶೋಧ ಕೈಗೊಂಡಿದ್ದ ಇಡಿ ಅಧಿಕಾರಿಗಳು ನಿನ್ನೆಯೂ ದೆಹಲಿ ಮತ್ತು ಮುಂಬೈನ ಕೆಲವು ಕಡೆಗಳಲ್ಲಿ ದಾಳಿ ಮುಂದುವರೆಸಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ರಾಣಾ ಅವರ ಪುತ್ರಿಯರಾದ ರಾಖಿ ಕಪೂರ್ ಟಂಡನ್, ರೋಶ್ನಿ ಕಪೂರ್ ಮತ್ತು ರಾಧಾ ಕರ್ಪೂ ಅವರಿಗೆ ಸೇರಿರುವ ಮನೆಗಳು ಮತ್ತು ಕಚೇರಿಗಳಲ್ಲೂ ಶೋಧ ಕಾರ್ಯ ನಡೆಸಲಾಯಿತು.

ಅಲ್ಲದೆ ನಿನ್ನೆ ರಾಣಾ ಕಪೂರ್ ಅವರನ್ನು ಮುಂಬೈನ ಇಡಿ ಕಚೇರಿಗೆ ಕರೆತಂದು 20 ಗಂಟೆಗಳವರೆಗೆ ವಿಚಾರಣೆಗೆ ಒಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಅವರು ವಿಚಾರಣೆ ವೇಳೆ ಸಹಕಾರ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲïಎ) ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಅಕ್ರಮ ಹಣ ವಹಿವಾಟು ತಡೆ ಕಾಯ್ದೆ (ಪಿಎಂಎಲïಎ) ಅಡಿಯಲ್ಲಿ ಕಪೂರ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ರಾಣಾ ಕಪೂರ್ ದೇಶವನ್ನು ತೊರೆಯದಂತೆ ತಡೆಯಲು ಲುಕ್ ಔಟ್ ನೋಟಿಸ್ ನೀಡಲಾಗಿದೆ.

# ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ:
ಯೆಸ್ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಗ್ರಾಹಕರು ಆತಂಕಗೊಂಡಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ಯೆಸ್ ಬ್ಯಾಂಕ್ ಅನ್ನು ಪಾರು ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ಸೂತ್ರ ವಿಚಿತ್ರ ಮತ್ತು ವಿಲಕ್ಷಣವಾಗಿದೆ ಎಂದು ಟೀಕಿಸಿದ್ದಾರೆ.

Facebook Comments

Sri Raghav

Admin