Thursday, April 25, 2024
Homeರಾಜಕೀಯಕಾಂಗ್ರೆಸ್ ಒಳ ಬೇಗುದಿ ; ಸಿಎಂ-ಡಿಸಿಎಂ ಜೊತೆ ಸುರ್ಜೆವಾಲ ಮೀಟಿಂಗ್

ಕಾಂಗ್ರೆಸ್ ಒಳ ಬೇಗುದಿ ; ಸಿಎಂ-ಡಿಸಿಎಂ ಜೊತೆ ಸುರ್ಜೆವಾಲ ಮೀಟಿಂಗ್

ಬೆಂಗಳೂರು,ನ.1- ಆಪರೇಷನ್ ಕಮಲ ಹಾಗೂ ಪಕ್ಷದ ಒಳ ಬೇಗುದಿಗಳ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕರು ಅಖಾಡಕ್ಕಿಳಿದಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದು, ರಾಜಕೀಯ ಪರಿಸ್ಥಿತಿಗಳ ಮೇಲೆ ತೀವ್ರ ನಿಗಾ ಇಟ್ಟು ಯಾವುದೇ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರ ಹೆಗಲಿಗೆ ಹೊರಿಸಲಾಗಿದೆ.

ಬಿಜೆಪಿ ಒಂದೆಡೆ ಆಪರೇಷನ್ ಕಮಲವನ್ನು ಚಾಲ್ತಿಯಲ್ಲಿಟ್ಟಿದ್ದು, ಹಲವಾರು ಮಂದಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಕೋಟ್ಯಂತರ ಹಣ ಹಾಗೂ ಅಧಿಕಾರದ ಆಮಿಷ ಒಡ್ಡಲಾಗುತ್ತಿದೆ. ಮತ್ತೊಂದೆಡೆ ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದವರು ಒಳಗೊಳಗೆ ಕುದಿಯುತ್ತಿದ್ದಾರೆ. ಈ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 30ಕ್ಕೂ ಹೆಚ್ಚು ಶಾಸಕರ ಜೊತೆ ದೀಪಾವಳಿ ಬಳಿಕ ದುಬೈ ಪ್ರವಾಸ ನಡೆಸಲಿದ್ದಾರೆ ಎಂಬ ವದಂತಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಒಂದು ವೇಳೆ ಸತೀಶ್ ಜಾರಕಿಹೊಳಿ ಪ್ರವಾಸ ಮಾಡಿದ್ದೇ ಆದರೆ ಅದು ಬೇರೆ ರೀತಿಯ ಸಂದೇಶ ರವಾನೆ ಮಾಡುತ್ತದೆ. ಗುಂಪುಗಾರಿಕೆ ಮತ್ತು ಬಣ ರಾಜಕೀಯಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂಬ ಆತಂಕ ಕಾಂಗ್ರೆಸಿಗರನ್ನು ಕಾಡುತ್ತಿದೆ. ಹೀಗಾಗಿ ಸತೀಶ್ ಜಾರಕಿಹೊಳಿಯವರ ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಲು ಸಂಧಾನ ಸಭೆ ನಡೆಸಲು ಮುಖ್ಯಮಂತ್ರಿಯವರಿಗೆ ಹೈಕಮಾಂಡ್ ಸಂದೇಶ ರವಾನಿಸಿದೆ.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

ರಣದೀಪ್ ಸಿಂಗ್ ಸುರ್ಜೆವಾಲ ಅವರ ಚರ್ಚೆ ನಡೆಸಿರುವ ಪ್ರಕಾರ ಯಾವುದೇ ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆಯ ತಂತ್ರ ಅನುಸರಿಸುತ್ತದೆ.

ಇದು ಮಹಾರಾಷ್ಟ್ರ , ಮಧ್ಯಪ್ರದೇಶ ಮಾದರಿಯಲ್ಲಿ ರಾಜಕೀಯ ಬೆಳವಣಿಗೆಗೆ ಕಾರಣವಾಗಬಹುದು. ಅಂಥ ಸಂದರ್ಭ ಬಂದರೆ ಸರ್ಕಾರವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಯಾವುದೇ ತ್ಯಾಗವನ್ನಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂದು ಹೈಕಮಾಂಡ್ ತಾಕೀತು ಮಾಡಿದೆ ಎನ್ನಲಾಗಿದೆ.

ಅಧಿಕಾರ ಹಂಚಿಕೆ ಸೇರಿದಂತೆ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವವರಿಗೆ ಆಯಾ ಮುಖಂಡರು ಕಡಿವಾಣ ಹಾಕಬೇಕು. ಇಲ್ಲವಾದರೆ ಹೈಕಮಾಂಡ್‍ನ ಶಿಸ್ತು ಸಮಿತಿ ಮುಂದಿನ ಕ್ರಮ ಜರುಗಿಸಲಿದೆ.

ಪಕ್ಷದಲ್ಲಿ ಶಿಸ್ತು ಪಾಲನೆಯಾಗದೆ ಇದ್ದರೆ ಚುನಾವಣೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಈ ರೀತಿಯ ಗೊಂದಲಗಳು ಅನಗತ್ಯ. ಹೀಗಾಗಿ ಎಲ್ಲರೂ ತಮ್ಮ ಸೀಮಿತ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ನಿರ್ದೇಶಿತ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಹೈಕಮಾಂಡ್‍ನ ಎಚ್ಚರಿಕೆಯನ್ನು ಸುರ್ಜೆವಾಲ ರಾಜ್ಯ ನಾಯಕರಿಗೆ ತಲುಪಿಸಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News