ರಾಜ್ಯಕ್ಕಾಗಮಿಸಿದ ಎಐಸಿಸಿ ಪ್ರಧಾನಕಾರ್ಯದರ್ಶಿ ಸುರ್ಜೆವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ಮೂರು ದಿನಗಳ ರಾಜ್ಯಪ್ರವಾಸ ಹಾಗೂ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ಇಡಲು ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬೆಂಗಳೂರಿಗೆ ಆಗಮಿಸಿದ್ದಾರೆ.  ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದ ಅವರು, ಸಂಜೆ ಮಂಗಳೂರಿಗೆ ತೆರಳಲಿದ್ದಾರೆ. ನಾಳೆಯಿಂದ ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆ ಕುರಿತಂತೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಸುರ್ಜೆವಾಲಾ ಅವರಿಗೆ ಸಾಥ್ ನೀಡಲಿದ್ದಾರೆ. ಕಾಂಗ್ರೆಸ್‍ನಲ್ಲಿ ಹಲವಾರು ಒಳ ಬೇಗುದಿಗಳಿದ್ದು, ಅದನ್ನು ನಿವಾರಿಸಿ ಐಕ್ಯತೆ ತರುವುದು ಕಾಂಗ್ರೆಸ್ ನಾಯಕರ ಅಜೆಂಡವಾಗಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಇದು ಅನಿವಾರ್ಯವೂ ಕೂಡ.

ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಒಂದು ಸುತ್ತಿನ ಪ್ರವಾಸ ಕೈಗೊಂಡಿದ್ದಾರೆ. ಎರಡನೇ ಸುತ್ತಿನ ಪ್ರವಾಸದ ವೇಳೆ ಸುರ್ಜೆವಾಲಾ ಅವರು ಜತೆಯಾಗಲಿದ್ದು, ಪಕ್ಷ ಸಂಘಟನೆಯ ಕುರಿತು ದೃಢ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಪದಾಧಿಕಾರಿಗಳ ನೇಮಕ, ಜಿಲ್ಲಾ ಸಮಿತಿಗಳ ಬದಲಾವಣೆ ಸೇರಿದಂತೆ ಅನೇಕ ಬೆಳವಣಿಗೆಗಳಿಗೆ ಸುರ್ಜೆವಾಲಾ ಸಾಕ್ಷಿಯಾಗುವ ಸಾಧ್ಯತೆಗಳಿವೆ.

Facebook Comments