ನಿರ್ಭಯಾ ಬದುಕಿದ್ದರೆ ಹೇಗಿರುತ್ತಿದಳು ಎಂಬುದನ್ನು ತೋರಿಸಿದ ‘ರಂಗನಾಯಕಿ’..!

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರ : ರಂಗನಾಯಕಿ – ರೇಟಿಂಗ್ : 4/5
ನಿರ್ದೇಶಕ : ದಯಾಳ್ ಪದ್ಮನಾಭನ್
ನಿರ್ಮಾಪಕ : ಎಸ್.ವಿ. ನಾರಾಯಣ್
ಕಲಾವಿದರು : ಅದಿತಿ ಪ್ರಭುದೇವ, ತ್ರಿವಿಕ್ರಮ್, ಶ್ರೀನಿ, ಸುಚೇಂದ್ರ ಪ್ರಸಾದ್ ಹಾಗೂ ಮುಂತಾದವರು…

ಹೆಣ್ಣು ಅಬಲೆಯಲ್ಲ… ಸಬಲೆ… ಎಂದು ತೋರಿಸುವ ಪ್ರಯತ್ನವಾಗಿ ಹೊರಹೊಮ್ಮಿರುವ ಚಿತ್ರವೇ ರಂಗನಾಯಕಿ. ಹೆಣ್ಣಿನ ಮೇಲಿನ ದೌರ್ಜನ್ಯ ಕುರಿತು ಜಾಗೃತಿ ಮೂಡಿಸಲು ಕನ್ನಡಿಯಂತೆ ಬಂದಿರುವಂತಹ “ರಂಗನಾಯಕಿ”ಯ ಕಥಾ ಹಂದರವೇ ಸೂಕ್ಷ್ಮತೆಯಿಂದ ಕೂಡಿದೆ.

ಇಡೀ ಸ್ತ್ರೀ ಕುಲವನ್ನು ಬೆಚ್ಚಿ ಬೀಳಿಸದಂತ ನಿರ್ಭಯಾ ಅತ್ಯಾಚಾರ ಪ್ರಕರಣ ಎಂದಿಗೂ ಮರೆಯಲಾಗದು, ಅಂತಹ ಒಂದು ಕಹಿ ಘಟನೆಯ ಅಂಶವನ್ನು ತೆಗೆದುಕೊಂಡ ನಿರ್ದೇಶಕ ದಯಾಳ್ ಪದ್ಮನಾಭನ್ ಒಂದು ವೇಳೆ ನಿರ್ಭಯಾ ಬದುಕಿದ್ದರೆ ತನ್ನ ಜೀವನವನ್ನು ಹೇಗೆ ನಡೆಸುತ್ತಿದ್ದಳು, ಪ್ರಸ್ತುತ ಸಮಾಜದಲ್ಲಿ ಏನೆಲ್ಲ ಎದುರಿಸಬೇಕಾಗುತ್ತಿತ್ತು ಎಂಬುದನ್ನು ಬಹಳ ಸೂಕ್ಷ್ಮವಾಗಿ ತೆರೆಯ ಮೇಲೆ ತರುವ ಪ್ರಯತ್ನವನ್ನು ಈ ರಂಗನಾಯಕಿ ಚಿತ್ರದ ಮೂಲಕ ಮಾಡಿದ್ದಾರೆ.

ಸದಾ ಹಸನ್ಮುಖಿಯಾಗಿ, ಲವಲವಿಕೆಯಿಂದ ತಾನೊಬ್ಬಳು ಅನಾಥೆಯಾಗಿದ್ದರು, ಎಲ್ಲರೊಡನೆ ಬೆರೆತು ಸಂತೋಷದಿಂದ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುವ ಚಿತ್ರದ ನಾಯಕಿ (ರಂಗನಾಯಕಿ) ಅದಿತಿ ಪ್ರಭುದೇವ್ ಶಾಲೆಯೊಂದರಲ್ಲಿ ಮಕ್ಕಳಿಗೆ ಸಂಗೀತ ಶಿಕ್ಷಣಾಭ್ಯಾಸ ಮಾಡಿಕೊಂಡು ತನ್ನ ಬದುಕನ್ನು ನಡೆಸುತ್ತಿರುತ್ತಾಳೆ.

ಇದರ ನಡುವೆ ತನ್ನ ಕನಸಿನಲ್ಲಿ ಕಾಣಿಸುವ ಕೆಲವು ನಾಯಿಗಳು ಬೊಗಳುವ ಶಬ್ದ ಅವಳ ಮನಸ್ಸನ್ನು ವಿಚಲಿತಗೊಳಿಸುತ್ತದೆ. ಆದರೂ ಅದನ್ನೆಲ್ಲ ಪಕ್ಕಕ್ಕಿಟ್ಟು ತನ್ನ ನಿತ್ಯ ಬದುಕನ್ನು ನಡೆಸುವ ಈ ಸುಂದರಿಯ ಬಾಳಿನಲ್ಲಿ ತನ್ನ ಶಾಲೆಯ ಶಿಕ್ಷಕನೊಬ್ಬ ತ್ರಿವಿಕ್ರಮ್ ಪ್ರೀತಿಸಿ ಮದುವೆಯಾಗಲು ನಿರ್ಧರಿಸುತ್ತಾನೆ.

ಅದೇ ಶಾಲೆಯಲ್ಲಿ ಮತ್ತೊಬ್ಬ ಶಿಕ್ಷಕ ಶ್ರೀನಿ ಈಕೆಯನ್ನು ಕಾಣದಂತೆ ಪ್ರೀತಿಸುತ್ತಾನೆ. ಇದರ ನಡುವೆ ಅಪಾರ್ಟ್ಮೆಂಟ್ ನಲ್ಲಿ ಇರುವ ಕಾಲೇಜು ವಿದ್ಯಾರ್ಥಿಗಳ ಹಾಗೂ ಅಕ್ಕ ಪಕ್ಕದ ಮನೆಯವರೊಂದಿಗೆ ಬಹಳ ವಿಶ್ವಾಸ, ಪ್ರೀತಿಯಿಂದ ಕಾಲ ಕಳೆಯುವ ನಾಯಕಿಯ ಬದುಕಿನಲ್ಲಿ ಒಂದು ದೊಡ್ಡ ದುರಂತವೇ ಕಾರ್ಮೋಡದಂತೆ ಕವಿಯುತ್ತದೆ.

ಹಕ್ಕಿಯಂತೆ ಹಾರಾಡುತ್ತಿದ್ದ ರಂಗನಾಯಕಿಯ ಮೇಲೆ ಆಗುವ ಅತ್ಯಾಚಾರ ಮುಂದೆ ಅವಳ ಬದುಕಿನ ದಿಕ್ಕನ್ನೇ ಯಾವ ರೀತಿ ಬದಲಿಸುತ್ತದೆ ಎಂಬುದೇ ಚಿತ್ರದ ಮುಖ್ಯ ಎಳೆ. ಚಿತ್ರದ ಓಟ ಆರಂಭಗೊಂಡಾಗ ಬದುಕು ಎಷ್ಟು ಸುಲಲಿತ, ನೆಮ್ಮದಿ, ಸಂತೋಷ ಎಂಬುದು ಕಾಣುತ್ತಿರುವಾಗಲೇ ಮನಸು ತಲ್ಲಣಗೊಳ್ಳುವಂತ ಸಂದರ್ಭ ಎದುರಾಗುತ್ತದೆ.

ಚಿತ್ರದ ಎರಡನೇ ಭಾಗ ನೋಡುಗರನ್ನು ಅಗಾಧವಾದ ಆಲೋಚನೆಗೆ ದೂಡುತ್ತದೆ. ಬಹಳಷ್ಟು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ಈ ರಂಗನಾಯಕಿಯ ಬದುಕಿನಲ್ಲಿ ಏನೆಲ್ಲ ತಿರುವುಗಳು ಎದುರಾಗುತ್ತದೆ , ಆಕೆ ಇದನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸುತ್ತಾಳೆ, ಕೊನೆಗೆ ಈಕೆಗೆ ನ್ಯಾಯ ಸಿಗುತ್ತಾ… ಇಲ್ಲವಾ ಎಂಬುದನ್ನು ತಿಳಿಯಬೇಕಾದರೆ ನೀವು “ರಂಗ ನಾಯಕಿ”ಯನ್ನು ನೋಡಲೇಬೇಕು.

ಬಹಳಷ್ಟು ಪರಿಪಕ್ವ ವಾದಂತೆ ಕಾಣುತ್ತಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಈ ಬಾರಿಯೂ ಕೂಡ ಒಂದು ಅರ್ಥಪೂರ್ಣ, ಜಾಗೃತಿ ಮೂಡಿಸುವ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಹೆಣ್ಣು ಎಂದಿಗೂ ಧೈರ್ಯಗೆಡಬಾರದು, ಏನೇ ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೆಣ್ಣಿಗಿದೆ, ಅತ್ಯಾಚಾರಕ್ಕೆ ಒಳಗಾದವರಿಗೆ ಸಾವು ಒಂದೇ ದಾರಿ ಅಲ್ಲಾ. ಕಾನೂನಾತ್ಮಕವಾಗಿ ಹೆಣ್ಣು ಹೇಗೆ ಹೋರಾಟ ಮಾಡಬಲ್ಲಳು ಎಂಬುದನ್ನು ಎಳೆ ಎಳೆಯಾಗಿ ಚಿತ್ರದ ಮೂಲಕ ತೋರಿಸುವುದರಲ್ಲಿ ಗೆದ್ದಿದ್ದಾರೆ ಎಂದೇ ಹೇಳಬಹುದು.ಚಿತ್ರದ ಮೊದಲ ಭಾಗ ನಿಧಾನಗತಿ ಅನ್ನಿಸಿದರೂ , ಎರಡನೇ ಭಾಗ ಬಹಳ ಸೂಕ್ಷ್ಮತೆಯಿಂದ ಕೂಡಿದ್ದು, ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ.

ಎ.ಟಿ.ಎಂ ಚಿತ್ರವನ್ನು ನಿರ್ಮಿಸಿದಂತ ಎಸ್ .ವಿ. ನಾರಾಯಣ್ ಅವರು ತಮ್ಮ ಎಸ್.ವಿ. ಎಂಟರ್ಟೈನ್ಮೆಂಟ್ಸ್ ಮೂಲಕ ಮತ್ತೊಂದು ಅರ್ಥಪೂರ್ಣ, ಜಾಗೃತಿ ಮೂಡಿಸುವ ಚಿತ್ರವನ್ನು ನಿರ್ಮಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ವಿಭಿನ್ನ ಪಾತ್ರಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಸಿದ್ದ ಎಂದು ತೋರಿಸುವುದರಲ್ಲಿ ಮುಂದಾಗಿರುವ ನಟಿ ಅದಿತಿ ಪ್ರಭುದೇವ್ ಶೋಷಿತ ಮಹಿಳೆಯ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.
ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ಅದಿತಿ ಈ ಚಿತ್ರದಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದಿದ್ದಾರೆ.

ಪದ್ಮಾವತಿ ಧಾರಾವಾಹಿಯಲ್ಲಿ ಗಮನ ಸೆಳೆದಂತೆ ಯುವ ಪ್ರತಿಭೆ ತ್ರಿವಿಕ್ರಮ್ ಶಿಕ್ಷಕನ ಪಾತ್ರದಲ್ಲಿ ಮನೆಯವರ ಮುದ್ದಿನ ಮಗನಾಗಿ, ಗೆಳತಿಯ ಪ್ರಿಯಕರನಾಗಿ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ಮತ್ತೊಬ್ಬ ಪ್ರತಿಭೆ ನಟ, ನಿರ್ದೇಶಕ ಶ್ರೀನಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಪೌರಾಣಿಕ ಪೋಷಾಕಿನಲ್ಲಿ ಗಮನ ಸೆಳೆಯುತ್ತಾರೆ. ಜೊತೆಗೆ ತನ್ನಲ್ಲೊಬ್ಬ ಉತ್ತಮ ಕಲಾವಿದ ಇದ್ದಾನೆ ಎಂದು ತೋರಿಸಿದ್ದಾರೆ.

ಇನ್ನು ವಿಶೇಷವಾಗಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಚೇಂದ್ರ ಪ್ರಸಾದ್ ಕ್ಲೈಮ್ಯಾಕ್ಸ್ ನಲ್ಲಿ ಉತ್ತಮವಾಗಿ ತಮ್ಮ ಪಾತ್ರ ಪೋಷಣೆ ಮಾಡಿದ್ದಾರೆ. ಉಳಿದಂತೆ ಬರುವ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಇನ್ನು ಮಣಿಕಾಂತ್ ಕದ್ರಿ ರವರ ಸಂಗೀತದ ಮೋಡಿ ಗುನುಗುವಂತಿದೆ. ಛಾಯಾಗ್ರಹಕ ರಾಕೇಶ್.ಬಿ. ರ ಕ್ಯಾಮೆರಾ ವರ್ಕ್ ಉತ್ತಮವಾಗಿ ಮೂಡಿಬಂದಿದೆ. ನವೀನ್ ಕೃಷ್ಣ ರ ಸಂಭಾಷಣೆ ಅಷ್ಟೇ ಅಚ್ಚುಕಟ್ಟಾಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತದೆ.

ಒಟ್ಟಾರೆ ಸಮಾಜದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬ ಅಂಶವನ್ನು ಹೇಳಿರುವ ರಂಗನಾಯಕಿ ಚಿತ್ರ ಎಲ್ಲರಿಗೂ ಇಷ್ಟವಾಗಲಿದ್ದು, ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ಈ ಚಿತ್ರವನ್ನು ಒಮ್ಮೆ ನೋಡಲೇಬೇಕು ಅನ್ನಿಸುತ್ತೆ.

Facebook Comments

Sri Raghav

Admin