ಸಿದ್ಧಾರ್ಥ್ ಆಕರ್ಷಕ ಅರ್ಧಶತಕ ಸೆಮೀಸ್‍ನತ್ತ ಕರುಣ್ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಫೆ. 24- ಗಾಂಧಿ ಮೆಮೋರಿಯಲ್ ಸೈನ್ಸ್ ಕ್ರೀಡಾಂಗಣದಲ್ಲಿ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ ಸಿದ್ಧಾರ್ಥ್ (98 ರನ್,10 ಬೌಂಡರಿ, 2 ಸಿಕ್ಸರ್) ಕರ್ನಾಟಕ ತಂಡವನ್ನು ಸೆಮೀಸ್ ಫೈನಲ್‍ಗೇರುವಂತೆ ಮಾಡಿದೆ. ನಾಲ್ಕನೆ ದಿನದಾಟದ ಅಂತ್ಯಕ್ಕೆ 245 ರನ್‍ಗಳಿಸಿದ್ದ ಕರ್ನಾಟಕ ತಂಡದ ಬ್ಯಾಟ್ಸ್‍ಮನ್‍ಗಳಿಗೆ ಜಮ್ಮು ಕಾಶ್ಮೀರದ ಯುವ ಬೌಲರ್ ಅಬೀದ್ ಮುಷ್ತಾಕ್ (6 ವಿಕೆಟ್) ಲಗಾಮು ಹಾಕಿದರೂ ಕರ್ನಾಟಕ 316 ರನ್‍ಗಳ ಗುರಿ ಮುಟ್ಟುವ ಮೂಲಕ ಜಮ್ಮುವಿಗೆ 330 ರನ್‍ಗಳ ಗೆಲುವಿನ ಗುರಿಯನ್ನು ನೀಡಿದೆ.

ನಾಲ್ಕನೇ ದಿನದಾಟದ ಬ್ಯಾಟಿಂಗ್ ಆರಂಭಿಸಿದ ಸಿದ್ದಾರ್ಥ್ ಹಾಗೂ ವಿಕೆಟ್ ಕೀಪರ್ ಆರಂಭದಿಂದಲೂ ಎಚ್ಚರಿಕೆಯ ಆಟ ಆಡಿ 5ನೆ ವಿಕೆಟ್‍ಗೆ 52 ರನ್‍ಗಳ ಉಪಯುಕ್ತ ಕಾಣಿಕೆ ನೀಡಿದರೂ, 98 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಸಿದ್ಧಾರ್ಥ್ ಅಬೀದ್ ಮುಷ್ತಾಕ್ ಬೌಲಿಂಗ್‍ನಲ್ಲಿ ಉಮರ್ ನಜೀರ್‍ಗೆ ಕ್ಯಾಚಿ ನೀಡಿ ಔಟಾದ ಬೆನ್ನಲ್ಲೇ 4 ರನ್ ಗಳಿಸಿದ್ದ ಕೃಷ್ಣಪ್ಪ ಗೌತಮ್‍ರನ್ನು ಮುಷ್ತಾಕ್ ಔಟ್ ಮಾಡಿದರು.

ನಂತರ ವಿಕೆಟ್‍ಕೀಪರ್ ಶರತ್ (34 ರನ್) ಆಮೆಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಅಬೀದ್ ಮುಷ್ತಾಕ್‍ಗೆ ವಿಕೆಟ್ ಒಪ್ಪಿಸಿದ ನಂತರ ಕರ್ನಾಟಕದ ತಂಡದ ಬಾಲಂಗೋಚಿಗಳು ಅಬೀದ್ ಬೌಲಿಂಗ್ ಎದುರು ನಿಲ್ಲಲಾಗದೆ 316 ರನ್‍ಗಳಿಗೆ ಸರ್ವಪತನವಾಯಿತು.  ಜಮ್ಮು ಪರ ಅಬೀದ್ ಮುಷ್ತಾಕ್ 6, ನಾಯಕ ಪರ್ವೇಜ್‍ರಸೂಲ್ 3, ಯೂಸಫ್ 1 ವಿಕೆಟ್ ಕಬಳಿಸಿದರು.

ಗೆಲ್ಲಲು 330 ರನ್‍ಗಳ ಗುರಿಯನ್ನು ಬೆನ್ನಟ್ಟಿರುವ ಜಮ್ಮು ಕಾಶ್ಮೀರ ತಂಡವು ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 1 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದ್ದು ಸುರ್ಯಾಂಶ್ ರೈನಾ (12ರನ್, 2 ಬೌಂಡರಿ), ಹಿನಾನ್ ನಜೀರ್ (3 ರನ್ ) ಕ್ರೀಸ್‍ನಲ್ಲಿದ್ದರು.

Facebook Comments