ರಣಜಿ ಫೈನಲ್‍ಗೇರಲು ಕರ್ನಾಟಕಕ್ಕೆ 352 ರನ್ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ಮಾ.2- ಕರ್ನಾಟಕದ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಬಂಗಾಳ ತಂಡವು ದ್ವಿತೀಯ ಇನ್ನಿಂಗ್ಸ್‍ನಲ್ಲಿ 161 ರನ್‍ಗಳಿಗೆ ಸರ್ವಪತನವಾಗುವ ಮೂಲಕ ಕರುಣ್‍ನಾಯರ್ ಪಡೆಗೆ ರಣಜಿ ಫೈನಲ್‍ಗೇರಲು 352 ರನ್‍ಗಳ ಗುರಿ ನೀಡಿದೆ.

ಮೊದಲ ಇನ್ನಿಂಗ್ಸ್‍ನಲ್ಲಿ 312 ಬೃಹತ್ ಮೊತ್ತವನ್ನು ಗಳಿಸಿದ್ದ ಈಶ್ವರನ್ ಪಡೆ ಎರಡನೇ ಇನ್ನಿಂಗ್ಸ್‍ನಲ್ಲಿ ಅಭಿಮನ್ಯು ಮಿಥುನ್ (4 ವಿಕೆಟ್), ಕೃಷ್ಣಪ್ಪ ಗೌತಮ್ (3 ವಿಕೆಟ್), ರೋಣಿತ್ ಮೋರೆ (2 ವಿಕೆಟ್), ಪ್ರಸಿದ್ಧ್‍ಕೃಷ್ಣ (1 ವಿಕೆಟ್) ಬಂಗಾಳದ ಬ್ಯಾಟಿಂಗ್ ಬಲವನು ಕುಗ್ಗಿಸಿದರು.

ಮೊದಲ ಇನ್ನಿಂಗ್ಸ್‍ನಲ್ಲಿ ಆಕರ್ಷಕ ಶತಕ ಗಳಿಸಿದ್ದ ಅನುಸ್ತುಪ್ ಮಂಜುಂದಾರ್ ಎರಡನೇ ಇನ್ನಿಂಗ್ಸ್‍ನಲ್ಲೂ 41 ರನ್ ಗಳಿಸಿದರೆ, ಸುದೀಪ್ ಚಟರ್ಜಿ (45 ರನ್, 8 ಬೌಂಡರಿ), ಶಹಬಾಜ್ ನದೀಮ್ (31 ರನ್, 4 ಬೌಂಡರಿ, 1 ಸಿಕ್ಸರ್) ಹೊರತುಪಡಿಸಿದರೆ ಯಾವುದೇ ಬ್ಯಾಟ್ಸ್‍ಮನ್‍ಗಳು ಹೆಚ್ಚು ರನ್ ಗಳಿಸಲು ವಿಫಲವಾದರು.

ಕರ್ನಾಟಕಕ್ಕೆ ಆಘಾತ:
ಗೆಲ್ಲಲು 352 ರನ್‍ಗಳ ಗುರಿಯನ್ನು ಬೆನ್ನಟ್ಟಿರುವ ಕರ್ನಾಟಕ ತಂಡವು ಆರಂಭದಲ್ಲೇ ಸ್ಫೋಟಕ ಆಟಗಾರ ಕೆ.ಎಲ್.ರಾಹುಲ್ (0)ರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಕರುಣ್ ಪಡೆಯು 1 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದ್ದು, ಸಮರ್ಥ್ (5 ರನ್), ದೇವತ್ ಪಡೀಕಲ್ (8ರನ್) ಕ್ರೀಸ್‍ನಲ್ಲಿದ್ದರು.

Facebook Comments

Sri Raghav

Admin