ಮಾತುಬಾರದ ಮಹಿಳೆ ಮೇಲೆ ಅತ್ಯಾಚಾರ : ಕೆಲ ಗಂಟೆಗಳಲ್ಲೇ ಆರೋಪಿ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಸೆ.18- ಮಾತುಬಾರದ ವಿಶೇಷಚೇತನ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಲಾರಿ ಚಾಲಕನನ್ನು ಹೊಳಲ್ಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭರಮಸಾಗರ ಬಳಿಯ ಲಕ್ಷ್ಮಿಸಾಗರದ ನಾಗೇಶ್ ಬಂಧಿತ ಲಾರಿ ಚಾಲಕ.

ತುಪ್ಪದಹಳ್ಳಿ ಲಂಬಾಣಿಹಟ್ಟಿ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ದಾವಣಗೆರೆಯ ಸಂಬಂಧಿಕರ ಮನೆಯಿಂದ ತುಪ್ಪದಹಳ್ಳಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಾಲ್ಲೂಕಿನ ರಾಮಗಿರಿಯಲ್ಲಿ ಅದೇ ಬಸ್ ಹತ್ತಿದ ಲಾರಿ ಚಾಲಕ ನಾಗೇಶ್ ಬಸ್‍ನಲ್ಲಿ ಮಹಿಳೆ ಒಬ್ಬಳೇ ಇದ್ದುದನ್ನು ಗಮನಿಸಿ, ನಂತರ ಮಹಿಳೆ ತುಪ್ಪದ ಹಳ್ಳಿಯಲ್ಲಿ ಇಳಿಯುತ್ತಿದ್ದಂತೆ ಆತ ಸಹ ಅಲ್ಲಿಯೇ ಇಳಿದುಕೊಂಡಿದ್ದಾನೆ.

ಮಹಿಳೆಯನ್ನು ಹಿಂಬಾಲಿಸಿದ ಆರೋಪಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ನಂತರ ಮಹಿಳೆ ಮನೆಗೆ ತೆರಳಿ ಸಂಬಂಧಿಕರ ಬಳಿ ಘಟನೆಯನ್ನು ತನ್ನ ಭಾಷೆಯಲ್ಲಿ ವಿವರಿಸಿದ್ದಾರೆ. ಗ್ರಾಮಸ್ಥರು ಹೊಳಲ್ಕೆರೆ ಪೊಲೀಸರಿಗೆ ನಡೆದ ಘಟನೆ ತಿಳಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಹೊಳಲ್ಕೆರೆ ಸಿಬಿಐ ರವೀಶ್ ಹಾಗೂ ಪೊಲೀಸರ ತಂಡ ಸ್ಥಳ ಪರಿಶೀಲನೆ ನಡೆಸಿ ಸಿಸಿಟಿವಿ ಫುಟೇಜ್ ತರಿಸಿಕೊಂಡು ಆರೋಪಿಯ ಚಲನವಲನಗಳನ್ನು ಪರಿಶೀಲಿಸಿ ನಂತರ, ಗ್ರಾಮದಲ್ಲಿ ಅನುಮಾನಸ್ಪದವಾಗಿ ಓಡಾಡಿಕೊಂಡಿದ್ದ ನಾಗೇಶ್‍ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.

Facebook Comments