ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ತಲೆಮರೆಸಿಕೊಂಡಿರುವವರಿಗಾಗಿ ಪೊಲೀಸರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು,ಫೆ.1- ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ, ಆರು ಮಂದಿಯನ್ನು ಬಂಧಿಸಿ ಉಳಿದವರಿಗಾಗಿ ಶೃಂಗೇರಿ ಠಾಣೆ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಗಿರೀಶ್, ವಿಕಾಸ್, ಮಣಿಕಂಠ, ಅಭಿ, ಅಶ್ವಥ್‍ಗೌಡ, ರಾಜೇಶ್ ಬಂಧಿತ ಆರೋಪಿಗಳು. ಅಪ್ರಾಪ್ತ ಬಾಲಕಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಜಲ್ಲಿ ಕ್ರಷರ್ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ತಲೆಮರೆಸಿಕೊಂಡಿರುವ ಸಂಪತ್, ಅಮಿತ್, ಸಂತೋಷ್, ನಿರಂಜನ್, ದೀಕ್ಷಿತ್, ಸಂತೋಷ್, ನಯನಗೌಡ, ಯೋಗೀಶ್, ಅಭಿಗೌಡ ಹಾಗೂ ಜಲ್ಲಿ ಕ್ರಷರ್ ಮಾಲೀಕನಿಗಾಗಿ ಶೃಂಗೇರಿ ಠಾಣೆ ಪೊಲೀಸರು ಶೋಧ ಚುರುಕುಗೊಳಿಸಿದ್ದಾರೆ. ತಾಯಿಯನ್ನು ಕಳೆದುಕೊಂಡಿದ್ದ ಮೂಲತಃ ಹಾವೇರಿ ಜಿಲ್ಲೆಯ ಬಾಲಕಿಯನ್ನು ವಿದ್ಯಾಭ್ಯಾಸ ಮಾಡಿಸುವ ಸಲುವಾಗಿ ಈಕೆಯ ಚಿಕ್ಕಮ್ಮ ಶೃಂಗೇರಿಗೆ ಕರೆದು ಕೊಂಡು ಬಂದಿದ್ದು, ಬಾಲಕಿ 10ನೇ ತರಗತಿ ವ್ಯಾಸಂಗ ಮಾಡುತಿದ್ದಳು.

ಚಿಕ್ಕಮ್ಮನ ಆರೋಗ್ಯದಲ್ಲಿ ಏರುಪೇರಾದ ಕಾರಣ ಜಲ್ಲಿ ಕ್ರಷರ್‍ನಲ್ಲಿ ಬಾಲಕಿ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದವರು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಸಲುಗೆಯಿಂದ ಇದ್ದರು. ನಂತರದ ದಿನಗಳಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.

ಇದಕ್ಕೆ ಬಾಲಕಿಯ ಚಿಕ್ಕಮ್ಮ ಸಹಕರಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಾಲಕಿ ಪೊಲೀಸರಿಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು 6 ಮಂದಿಯನ್ನು ಬಂಧಿಸಿ ಬಾಲಕಿಯನ್ನು ಚಿಕ್ಕಮಗಳೂರಿನ ಸ್ವಾಧಾರ ಸಂಸ್ಥೆಯಲ್ಲಿ ಆಶ್ರಯ ಕೊಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments