ರೇಪಿಸ್ಟ್‌ಗಳಿಗೆ 6 ತಿಂಗಳೊಳಗೆ ನೇಣಿಗೇರಿಸಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.3- ಅತ್ಯಾಚಾರಿ ಮತ್ತು ಹಂತಕರಿಗೆ ಶಿಕ್ಷೆಗೆ ಗುರಿಯಾದ ಆರು ತಿಂಗಳೊಳಗೆ ನೇಣುಗಂಬಕ್ಕೇರಿಸಬೇಕೆಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸ್ವಾತಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆಗಳು ನಡೆಯುತ್ತಿವೆ. ಇಂತಹ ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವುದೇ ಸೂಕ್ತ ಎಂದು ಹೇಳಿದ್ದಾರೆ.

ಆಪಾದನೆ ಸಾಬೀತಾಗಿ ಶಿಕ್ಷೆಗೆ ಗುರಿಯಾದ ಆರು ತಿಂಗಳೊಳಗೆ ಇಂತಹ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದಾರೆ.

ಶಾಶ್ವತ ಜೈಲಿನಲ್ಲಿಡಿ: ಹೇಮಾಮಾಲಿನಿ: ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಹಿಂಸಾಚಾರಗಳಿಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಹಿರಿಯ ಅಭಿನೇತ್ರಿ ಮತ್ತು ಸಂಸದೆ ಹೇಮಾಮಾಲಿನಿ ಇಂತಹ ಅಪರಾಧಿಗಳಿಗೆ ಶಾಶ್ವತವಾಗಿ ಜೈಲಿನಲ್ಲೇ ಕೊಳೆಯುವಂತೆ ಮಾಡಬೇಕು ಎಂದಿದ್ದಾರೆ.

ಉತ್ತರ ಪ್ರದೇಶದ ಮಥುರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲೇಬಾರದು. ಅವರು ಸಾಯುವ ತನಕ ಸೆರೆವಾಸ ಅನುಭವಿಸಬೇಕು ಎಂದು ಆಗ್ರಹಿಸಿದರು.

Facebook Comments