`ಪ್ಲವ’ ಸಂವತ್ಸರದ ಪಂಚಾಂಗ ಮತ್ತು ಈ ವರ್ಷದ ರಾಶಿ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸ ಸಂವತ್ಸರ ದಿನಾಂಕ 13.4.2021 ಮಂಗಳವಾರ ಪ್ರಾರಂಭ. ಚಂದ್ರಮಾನ ಯುಗಾದಿ ಆಚರಣೆ, ಈ ಸಂವತ್ಸರದ ಹೆಸರು ಪ್ಲವ ಸಂವತ್ಸರ. ಹೊಸ ವರ್ಷದ ಮೊದಲನೇ ದಿನವನ್ನು ಯುಗಾದಿ ಹಬ್ಬ ಆರೋಗ್ಯ ಪ್ರತಿಪತ್ -ನಿಂಬದಳ ಭಕ್ಷಣಂ ಎಂದು ಸಂಭ್ರಮ ಸಡಗರಗಳಿಂದ ಹೊಸ ವರ್ಷವನ್ನು ಸ್ವಾಗತಿಸಿ ಆಚರಿಸುತ್ತೇವೆ.

ನೂತನ ಸಂವತ್ಸರದ ಈ ದಿನ ಉಷಃ ಕಾಲದಲ್ಲಿ ಎದ್ದು ಮಂಗಳ ಸ್ನಾನ ಮಾಡಿ ಅಂದರೆ ಸುಗಂಧ-ತೈಲಾದಿಗಳಿಂದ ಅಭ್ಯಂಜನ ಸ್ನಾನ ಮಾಡಿ ಹೊಸ ವಸ್ತ್ರಾಭರಣವನ್ನು ಧರಿಸಿಕೊಂಡು ತಂದೆ ತಾಯಿ, ಗುರು ಹಿರಿಯರಿಗೆ ನಮಸ್ಕಾರ ಮಾಡಿ , ಗೃಹ ದೇವತೆ ಪೂಜೆ ಮಾಡಿ ಆಶೀರ್ವಾದ ಪಡೆದು , ಬೇವು-ಬೆಲ್ಲ ತಿಂದು, ತರತರಹದ ಪಕ್ವಾನ್ನ ಊಟ ಮಾಡಿ ದೇಹಕ್ಕೆ ಶ್ರೀಗಂಧ, ಕಸ್ತೂರಾದಿ ಸುಗಂಧಗಳನ್ನು ಹಚ್ಚಿ, ಸಂಗೀತ, ನಾಟ್ಯ ಇತ್ಯಾದಿ ಶ್ರವಣ ಮಾಡಿ ಸಂತೋಷದಿಂದ ಕುಟುಂಬದವರೊಂದಿಗೆ ಕಾಲ ಕಳೆಯಬೇಕು.

ಹೊಸ ವರ್ಷದ ಮೊದಲನೆ ದಿನ, ಹೋಳಿ ಹುಣ್ಣಿಮೆ ಮಾರನೇ ದಿನ , ದೀಪಾವಳಿ ಪಾಡ್ಯ ಈ ಮೂರು ದಿನಗಳಲ್ಲಿ ಅಭ್ಯಂಜನ ಸ್ನಾನ -ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ನರಕವಾಸ ತಪ್ಪುವುದೆಂದು ಶಾಸ್ತ್ರ ಸಮ್ಮತವಾಣಿ.

ಜಗತ್ ಸೃಷ್ಟಿ ರಚನೆಗೆ ಮೊದಲು ಓಂ ಕಾರ ನಾದವೇ ಎಲ್ಲೆಡೆ ತುಂಬಿತ್ತು. ಓಂಕಾರದಿಂದಲೇ ಬ್ರಹ್ಮಾಂಡ. ಓಂ ಕಾರವೇ ಆದಿಶಕ್ತಿ. ಸೂರ್ಯನು ಜೀವಾತ್ಮಗಳ ಯುಗ ಪುರುಷ. ಶ್ರೀ ಸೂರ್ಯನಾರಾಯಣ ದೇವನು ಜ್ಯೋತಿಶ್ಚಕ್ರರಥದಲ್ಲಿ ಹೊರಟಾಗ ಅವನ ಸಾರಥಿಯಾದ ಅರುಣನು, ಸೂರ್ಯ ದೇವನನ್ನು ಪ್ರಾರ್ಥಿಸಿ, ಸಂವತ್ಸರ ಫಲವನ್ನು ತಿಳಿಸಬೇಕು ಎನ್ನಲು, ಸೂರ್ಯನು ಅರುಣನಿಗೆ ಸಂವತ್ಸರ ಫಲವನ್ನು ಹೇಳಲು ಪ್ರಾರಂಭಿಸಿದನು.

ಸಂವತ್ಸರದ ಫಲವು ಗ್ರಹಗಳ ಅಧೀನ, ನವಗ್ರಹಗಳು ಕಾಲಕ್ಕೆ ಸರಿಯಾಗಿ ತಮ್ಮ ಸಂಚಾರದಿಂದ ಒಳ್ಳೆಯ ಹಾಗೂ ಕೆಟ್ಟ ಫಲವನ್ನು ಕೊಡುತ್ತವೆ. ಕಾಲವನ್ನು ಸೃಷ್ಟಿಯಲ್ಲಿ ಯುಗಕಲ್ಪವೆಂದು, ಆಪರ ಬ್ರಹ್ಮನಿಂದಲೇ ನಿಯಮಿತವಾಗಿ ಸೃಷ್ಟಿಯಿಂದಲೇ ಸಂವತ್ಸರ ಪ್ರಾರಂಭ. ವೈಕುಂಠವಾಸಿಯಾದ ಲೋಕಪಾಲಕನಾದ ಶ್ರೀ ಮಹಾ ವಿಷ್ಣುವು ಕ್ಷೀರ ಸಮುದ್ರದಲ್ಲಿ ವಟಪತ್ರಶಾಯಿಯಾದ, ಯೋಗ ನಿದ್ರಾರೂಢನಾದ, ಲಕ್ಷ್ಮೀ ಸಹಿತನಾದ ಆದಿ ನಾರಾಯಣನ ನಾಭಿ ಕಮಲದಲ್ಲಿ ಹುಟ್ಟಿದ ಬ್ರಹ್ಮನಿಗೆ ಹುಟ್ಟಿಸು, ತಪಸ್ಸು ಮಾಡು ಎಂಬ ಆಕಾಶವಾಣಿ ಕೇಳಿ ಬಂದಿತು.

ಆಗ ಕಮಲಾಸನನಾದ ಬ್ರಹ್ಮನು ತಪಸ್ಸು ಮಾಡಿ ಹದಿನಾಲ್ಕು ಲೋಕಗಳನ್ನು ಸೃಷ್ಟಿ ಮಾಡಿದನು ಮತ್ತು ಗ್ರಹ ನಕ್ಷತ್ರದಿಂದ ಕೂಡಿದ ಭೂ ಚಕ್ರವನ್ನು ತಿರುಗಿಸಲು ಆರಂಭ ಮಾಡಿದನು. ಬ್ರಹ್ಮನ ಸೃಷ್ಟಿ ಸಮಯದಲ್ಲಿ ದಕ್ಷಿಣಕ್ಕೆ ಇರುವ ಶ್ರೀಲಂಕಾ ನಗರದಲ್ಲಿ ಮೂರು ಸಮುದ್ರಗಳ ಸಂಗಮದಲ್ಲಿ ಸೂರ್ಯೋದಯವಾಯಿತು. ಅಂದು ಭಾನುವಾರ, ಆನಂತರ ಸೋಮವಾರ, ಮಂಗಳವಾರ, ಬುಧ, ಗುರು, ಶುಕ್ರ, ಶನಿವಾರಗಳಾಗಿ ಪ್ರಾರಂಭವಾಯಿತು.

ಆ ಪ್ರಾರಂಭದ ಭಾನುವಾರ ಹೊಸ ಯುಗ, ವರ್ಷ, ಮಾಸ, ದಿನ, ಚೈತ್ರ ಮಾಸ, ಶುಕ್ಲ ಪಕ್ಷ ಪ್ರಥಮಿಯಿಂದ ಆರಂಭ, ಯುಗಗಳು ನಾಲ್ಕು. ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗ. ಈ ನಾಲ್ಕು ಯುಗಗಳಿಂದ ಒಂದು ಮಹಾ ಯುಗ, 71 ಮಹಾ ಯುಗಗಳು ಒಂದು ಮನ್ವಂತರ, 14 ಮನ್ವಂತರ ಸೃಷ್ಟಿ ಕರ್ತನಾದ ಬ್ರಹ್ಮನಿಗೆ ಒಂದು ದಿನದ ಹಗಲು.

ಹಗಲು ಎಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆವಿಗೆ, ರಾತ್ರಿ ಎಂದರೆ ಸೂರ್ಯಾಸ್ತದಿಂದ ಸೂರ್ಯೋದಯದವರೆವಿಗೆ . ಹಗಲು-ರಾತ್ರಿಗಳ ಸಂಗಮ ಒಂದು ದಿನ. 30 ದಿನಗಳಿಗೆ ಒಂದು ಮಾಸ. 12 ಮಾಸಗಳಿಗೆ ಒಂದು ವರ್ಷ. ಬ್ರಹ್ಮನ ನೂರು ವರ್ಷಕ್ಕೆ ಮಹಾಕಲ್ಪವೆಂದು ಕರೆಯುವರು. ಈಗ ಬ್ರಹ್ಮನ ನೂರು ವರ್ಷದಲ್ಲಿ 50 ವರ್ಷ ಕಳೆದು ಈಗ 2ನೆ ಪರಾರ್ಧದಲ್ಲಿ ಆರು ಮನ್ವಂತರ ಕಳೆದಿದೆ.

ಏಳನೆ ವೈವಸ್ವತ ಮನ್ವಂತರದಲ್ಲಿ 27 ಮಹಾ ಯುಗ ಕಳೆದ, ಕೃತ, ತ್ರೇತಾ, ದ್ವಾಪರ ಯುಗ ಕಳೆದು ಕಲಿಯುಗ ಪ್ರಾರಂಭವಾಗಿದೆ. ಕೃತಯುಗ 1728000, ತ್ರೇತಾಯುಗ 1296000, ದ್ವಾಪರಯುಗ 864000, ಕಲಿಯುಗ 432000 ವರ್ಷಗಳು. ಈ ಕಲಿಯುಗದಲ್ಲಿ ಭೂಮಿಯಲ್ಲಿ ಶಕಕರ್ತರಾಗಿ ಕರೆದಿದ್ದಾರೆ. ಮಹಾಭಾರತ ಕಾಲದ ಯುಧಿಷ್ಠಿರ, ವಿಕ್ರಮ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ, ಕಲ್ಕಿಭೂಪ ಎಂಬ ಆರು ಜನರು ಶಕಕರ್ತರು, ಕಲಿಯುಗದ 432000 ವರ್ಷಗಳನ್ನು 3044,135, 18000, 10000, 400000 ಮತ್ತು 821 ಆಗಿ ಶಕ ಕರ್ತರಿಗೆ ಭಾಗಿಸಿದೆ.

ಈಗ ಶಾಲಿವಾಹನ ಶಕದಲ್ಲಿ ಗತಶಾಲಿ 1943 ವರ್ಷಗಳು, ಅಂದರೆ ಕಲಿಯುಗದಲ್ಲಿ ಗತಕಲಿ 5122 ವರ್ಷಗಳು. ಈಗ ಪ್ಲವ ಸಂವತ್ಸರ ಪ್ರಾರಂಭವಾಗಿದೆ. ಈ ವರ್ಷ ತಮ ಎಂಬ ಮೇಘವು, ಮೇರು ಶಿಖರದ ಪಶ್ಚಿಮ ದಿಕ್ಕಿನಲ್ಲಿ ಹುಟ್ಟಿ , ಸಸ್ಯಗಳಿಗೆ ಅನುಕೂಲವಾಗುವಂತೆ ಮಳೆಯನ್ನು ಸುರಿಸುತ್ತದೆ. ಈ ವರ್ಷ ದೇಶವಾಳುವ ರಾಜಕಾರಣಿಗಳಲ್ಲಿ ಪರಸ್ಪರ ವೈರತ್ವ ಇದ್ದು, ಜಗಳ ಮಾಡುವ ಭೀತಿ ಮನಸ್ಸುಳ್ಳವರಾಗಿರುತ್ತಾರೆ. ಪ್ರಜೆಗಳು ಚುನಾವಣೆಗಳಲ್ಲಿ ಭಾಗವಹಿಸಿ ಮತ ನೀಡುತ್ತಾರೆ. ಸ್ತ್ರೀಯರು ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿ ಮಹತ್ವದ ಪಾತ್ರ ವಹಿಸುವರು.

ಮಳೆಯು ದೇಶವಾಳುವವರ ಶ್ರದ್ಧಾ-ಭಕ್ತಿಗಳನ್ನು ಅವಲಂಬಿಸಿ ಮಳೆ ಸುರಿಸುತ್ತದೆ ಪ್ರಜೆಗಳು. ಜನರು ಹಣಕ್ಕೆ ಹೆಚ್ಚು ಮಹತ್ವ ನೀಡಿ ಅನೈತಿಕ ಅವ್ಯವಹಾರ ಸಂಪಾದನೆಯಲ್ಲಿ ತೊಡಗುವರು. ದೇಶವಾಳುವ ಪ್ರಜೆ ಶ್ರದ್ಧಾ ಭಕ್ತಿಗಳಿಂದ ಕೂಡಿ ರುದ್ರಾಭಿಷೇಕ, ಜಪ ಯಜ್ಞಗಳಿಂದ ದೇವರ ಪ್ರಾರ್ಥನೆ ಮಾಡಬೇಕು.

# ನವ ನಾಯಕರು
ಯುಗಾದಿ ಮಂಗಳವಾರ ಬಂದಿರುವುದರಿಂದ ರಾಜಾ ಕುಜ, ಮಂತ್ರಿ ಬುಧ, ಸೇನಾಧಿಪತಿ ಕುಜ, ಸೇನಾಧಿಪತಿ ಶನಿ. ನೀರಸಾಧಿಪತಿ ಶುಕ್ರ,  ರಸಾಧಿಪತಿ ಚಂದ್ರ, ಧಾನ್ಯಾಧಿಪತಿ ಗುರು, ಮೇಘಾಧಿಪತಿ ಕುಜ, ಅಘ್ರ್ಯಾಧಿಪತಿ ಕುಜ, ಪಶುಗಳ ನಾಯಕ ಯಮ. ಕುಜ ರಾಜನಾಗಿರುವುದರಿಂದ ಮೋಡಗಳು ಮಳೆ ಸುರಿಸುವುದಿಲ್ಲ. ಭೂಮಿಯಲ್ಲಿ ಪದಾರ್ಥಗಳು ಸರಿಯಾಗಿ ಲಭ್ಯವಿರುವುದಿಲ್ಲ. ಜನರು ಪಾಪ, ಕಾಮುಕರಾಗಿ ಪರಸ್ಪರ ವೈರ, ಕೋಪ ದಿಂದ. ಮೋಜುಗಳಲ್ಲಿ ತೊಡಗಿ ಜೀವನ ನಡೆಸುವರು. ಕಳ್ಳರ ಕಾಟ, ರೋಗಗಳ ಬಾಧೆ ಇರುವುದು.

ಯಮನು ಗೋನಾಯಕನಾಗಿರುವುದರಿಂದ ಹಸುಗಳು ಚೆನ್ನಾಗಿ ಹಾಲು ಕೊಡದೆ ರೋಗ ರುಜಿನಗಳ ಬಾಧೆ ಅನುಭವಿಸುತ್ತವೆ. ಮೇವಿಗೆ ತೊಂದರೆ. ಭೂಮಿಯಲ್ಲಿ ಕಳ್ಳಕಾಕರ ಭಯವಿದ್ದು, ಬೆಂಕಿ ಅನಾಹುತ ಜಾಸ್ತಿ, ಅಪಘಾತ ನೋವು- ಸಾವು ನೀಚರಿಂದ ಹೆಚ್ಚು ತೊಂದರೆಗಳಿರುತ್ತವೆ. ಮಳೆಯು ಸರಿಯಾಗಿ ಆಗಿ 10 ಭಾಗದಲ್ಲಿ , 5 ಭಾಗ ಸಮುದ್ರದಲ್ಲಿ, 3 ಭಾಗ ಪವರ್ತದಲ್ಲಿ 2 ಭಾಗ ಭೂಮಿಯಲ್ಲಿ ಬೀಳುತ್ತದೆ.

# ಆದಾಯ -ವ್ಯಯ
ಮೇಷ-ವೃಶ್ಚಿಕ ರಾಶಿಯವರಿಗೆ ಆದಾಯದ ಏಳರಷ್ಟು ಖರ್ಚು. ವೃಷಭ-ತುಲಾ ರಾಶಿಯವರಿಗೆ ಆದಾಯದ ಖರ್ಚು ನಾಲ್ಕರಷ್ಟು. ಮಿಥುನ- ಕನ್ಯಾ ರಾಶಿಯವರಿಗೆ ಖರ್ಚು ಆದಾಯ ಸಮ. ಕರ್ಕಾಟಕ ರಾಶಿಯವರಿಗೆ ಖರ್ಚಿನ ಅರ್ಧದಷ್ಟು ಆದಾಯ. ಸಿಂಹ ರಾಶಿಯವರಿಗೆ ಆದಾಯದ ಖರ್ಚು ಏಳರಷ್ಟು. ಧನಸ್ಸು -ಮೀನ ರಾಶಿಯವರಿಗೆ ಆದಾಯದ ಖರ್ಚು ಅರ್ಧದಷ್ಟು. ಮಕರ-ಕುಂಭ ರಾಶಿಯವರಿಗೆ ಆದಾಯ ಖರ್ಚು ಸಮ.

# ಮಕರ ಸಂಕ್ರಾಂತಿ
ತಾರೀಖು 14.1.2022 ಶುಕ್ರವಾರದಂದು ಸಂಕ್ರಾಂತಿ-ಸಂಕ್ರಮಣ. ಸಂಕ್ರಾಂತಿ ಪುರುಷನ ಹೆಸರು ಮಿಶ್ರಾ. ಹುಲಿ ವಾಹನದಲ್ಲಿ ಕೂತು, ರಕ್ತವರ್ಣದ ಛತ್ರಿ ಹಿಡಿದು, ಗೋದಾವರಿ ನದಿಯಲ್ಲಿ ಸ್ನಾನಾ ನಂತರ ಕೇಸರಿ ಲೇಪನ ಮಾಡಿ ಬಿಳಿ ಬಟ್ಟೆ ಉಟ್ಟು, ಜೋಳದ ಅಕ್ಷತೆ, ಜಾಜಿ ಹೂವ ಮುಡಿದು ಮತ್ತಿನ ಆಭರಣ ಧರಿಸಿದ್ದಾಳೆ. ಕುಮಾರಿ ವಯಸ್ಸು , ಭೂತ ಜಾತಿ, ಇದರ ಫಲ ಕುಮಾರಿಯರಲ್ಲಿ ಕಾಮುಕ ಆಸಕ್ತಿ, ರಾಜಕಾರಣಿಗಳಿಗೆ ಪೀಡೆ. ಮರದ ಪಾತ್ರೆಯಲ್ಲಿ ಬಾಳೆಹಣ್ಣು ಸೇವನೆ. ನದಿಗಳಲ್ಲಿ ನೀರು ಕಮ್ಮಿ. ಕಲಾವಿದರಿಗೆ ಪೀಡೆ.

# ಸಂಕ್ಷಿಪ್ತ ರಾಶಿ ಫಲ
# ಮೇಷ
ನಿಮ್ಮ ಆದಾಯ 4 ಇದ್ದರೆ 7 ಖರ್ಚು. ಸ್ವಲ್ಪ ಅನಾರೋಗ್ಯದಿಂದ ಬಳಲುವಿರಿ. ಆದರೂ ಸುಖ ದುಃಖ ಸಮವಾಗಿರುವುದು, ಕೆಲಸ ಕಾರ್ಯಗಳು ಅನುಕೂಲ. ಬಂಧು ಮಿತ್ರರು ಸಹಾಯ ಮಾಡುವರು. ವೃಥಾ ಅಲೆದಾಟವಿರುವುದು. ಶನಿವಾರ ಎಳ್ಳು ದೀಪ ಹಚ್ಚಿ ನವಗ್ರಹ ಸುತ್ತಿರಿ.

# ವೃಷಭ
ನಿಮ್ಮ ಆದಾಯದ ನಾಲ್ಕರಷ್ಟು ಖರ್ಚು. ಆರೋಗ್ಯದಿಂದ ಇರುವಿರಿ. ಸುಖ ಹೆಚ್ಚು. ಮನೆಯಲ್ಲಿ ಶುಭ ಕಾರ್ಯನಡೆಯುವುದು. ಸರ್ಕಾರದ ಕೆಲಸ ಕಾರ್ಯಗಳಲ್ಲಿ ಅನುಕೂಲ. ಬಂಧು-ಮಿತ್ರರಲ್ಲಿ ವಿರೋಧ. ಪ್ರಯಾಣ. ವ್ಯಾಪಾರ-ವ್ಯವಹಾರದಲ್ಲಿ ನಷ್ಟ. ಗುರುವಾರದಂದು ನವಗ್ರಹ ಸುತ್ತಿರಿ.

# ಮಿಥುನ
ನಿಮ್ಮ ಆದಾಯ ಖರ್ಚು ಸಮ. ಉಳಿತಾಯವೇನೂ ಇರದು. ಆರೋಗ್ಯ ಚೆನ್ನಾಗಿದ್ದು , ಸುಖದಿಂದ ಈ ವರ್ಷ ಜೀವನ ಸಾಗುವುದು ಶುಭ ಕಾರ್ಯಗಳು ನಡೆದು ಹಣದ ಪರಿಸ್ಥಿತಿ ಉತ್ತಮ. ವ್ಯವಹಾರ ಪ್ರಗತಿ, ಪರಸ್ಥಳ ವಾಸ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರುವುದು.

# ಕಟಕ
ಈ ವರ್ಷ ನಿಮ್ಮ ಆದಾಯದ ಎರಡರಷ್ಟು ಖರ್ಚು. ಆರೋಗ್ಯವು ಚೆನ್ನಾಗಿದ್ದು, ಸುಖದಿಂದಿರುವಿರಿ. ಗುರುವಾರಗಳಂದು ಕೇತು ಪ್ರಾರ್ಥಿಸಿ. ನವಗ್ರಹ ಸುತ್ತಿರಿ. ಪರಸ್ಥಳದಲ್ಲಿ ವಾಸ ತಿರುಗಾಟ. ಮನಸ್ಸಿಗೆ ಚಿಂತೆ , ವ್ಯಾಪಾರ-ವ್ಯವಹಾರ ದಲ್ಲಿ ಅಲ್ಪ ಪ್ರಗತಿ. ವಿವಾಹಾದಿ ಮಂಗಳ ಕಾರ್ಯ ನಡೆಯುವುದು.

# ಸಿಂಹ
ಈ ಸಂವತ್ಸರದಲ್ಲಿ ಆದಾಯಕ್ಕಿಂತ ಏಳರಷ್ಟು ಖರ್ಚು. ಚಿಂತೆ, ಸಜ್ಜನರ ಸಹಾಯ. ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ. ಶುಭ ಕಾರ್ಯಗಳಲ್ಲಿ ಆಸಕ್ತಿ. ಸುಖ. ಗುರುವಾರ ಗಳಂದು ಕೇತು ಪ್ರಾರ್ಥಿಸಿ ನವಗ್ರಹ ಸುತ್ತಿರಿ.

# ಕನ್ಯಾ
ಈ ವರ್ಷದಲ್ಲಿ ನಿಮ್ಮ ಆದಾಯದಷ್ಟು ಖರ್ಚು ಉಳಿತಾಯವಿಲ್ಲ. ಆರೋಗ್ಯದಿಂದ ಇರುವಿರಿ. ಸುಖವೇ ಹೆಚ್ಚು. ಕುಟುಂಬದಲ್ಲಿ ವಿರೋಧ. ಕೆಲಸ, ಕಾರ್ಯಗಳಲ್ಲಿ ತೊಂದರೆ. ಕಳ್ಳತನವಾಗುವುದು. ಎಚ್ಚರ ವಹಿಸಿರಿ. ಮನೋ ವ್ಯಥೆ ಪ್ರಯಾಣವಿರುವುದು.

# ತುಲಾ
ಈ ಸಂವತ್ಸರದಲ್ಲಿ ನಿಮ್ಮ ಆದಾಯಕ್ಕಿಂತ ನಾಲ್ಕರಷ್ಟು ಖರ್ಚು. ಆರೋಗ್ಯ ಚೆನ್ನಾಗಿದ್ದು, ಸುಖದಿಂದ ಇರುವಿರಿ. ಕುಟುಂಬಕ್ಕಾಗಿ ಎಲ್ಲಾ ಹಣ ಖರ್ಚು. ಮನಸ್ಸಿಗೆ ನೆಮ್ಮದಿ. ತೀರ್ಥ ಯಾತ್ರೆ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಬಂಧು-ಮಿತ್ರರ ಸಹಾಯ ಸಿಗುವುದು. ವ್ಯಾಪಾರದಲ್ಲಿ ನಷ್ಟ. ಕುಟುಂಬದಲ್ಲಿ ವಿವಾಹಾದಿ ಮಂಗಳ ಕಾರ್ಯ ನೆರವೇರುವುದು. ಸರ್ಕಾರಿ ಕೆಲಸದಿಂದ ಶುಭ.

# ವೃಶ್ಚಿಕ
ಈ ವರ್ಷ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚು. ಸ್ವಲ್ಪ ಅನಾರೋಗ್ಯ. ಕೆಲಸ , ಕಾರ್ಯಗಳಲ್ಲಿ ತೊಂದರೆ ಪರ ಸ್ಥಳಗಳಿಗೆ ಭೇಟಿ. ಅಲ್ಪ ಪ್ರಗತಿ. ಸೇವಕರಿಂದ ಸಹಾಯ. ಶುಭ ಕಾರ್ಯ ನೆರವೇರಿಸುವಿರಿ. ವ್ಯಾಪಾರ, ಉದ್ಯೋಗದಲ್ಲಿ ಕಾರ್ಯ ಸಿದ್ಧಿ, ಅಭಿವೃದ್ಧಿ.

 # ಧನಸ್ಸು
ಈ ಸಂವತ್ಸರದಲ್ಲಿ ನಿಮ್ಮ ಆದಾಯದ ಅರ್ಧದಷ್ಟು ಮಾತ್ರ ಖರ್ಚು. ಉಳಿತಾಯ, ಸುಖದಿಂದಿರುವಿರಿ. ಕೆಲಸ ಕಾರ್ಯಗಳಲ್ಲಿ ಅಡಚಣೆ ಕಂಡು ಬಂದರೂ ನಷ್ಟವಿರುವುದಿಲ್ಲ. ವ್ಯಾಪಾರ, ವ್ಯವಹಾರಗಳಲ್ಲಿ ಅಲ್ಪ ಮಟ್ಟಿನ ಸುಧಾರಣೆ ಸರ್ಕಾರದಿಂದ ಅನುಕೂಲ. ತಿರುಗಾಟ ಬೇಡ, ಮಂಗಳ ಕಾರ್ಯ ನೆರವೇರಿಸುವಿರಿ. ಕುಟುಂಬದ ಬಗ್ಗೆ ಚಿಂತೆ.

# ಮಕರ
ಈ ವರ್ಷ ನಿಮ್ಮ ಆದಾಯ ಖರ್ಚು ಸಮ. ಅನಾರೋಗ್ಯದಿಂದ ಬಳಲುವಿರಿ. ಬುಧವಾರಗಳಂದು ರಾಹು ಪೂಜಿಸಿ ನವಗ್ರಹ ಸುತ್ತಿರಿ. ಕುಟುಂಬದಲ್ಲಿ ಸುಖ ಕಾಣುವಿರಿ. ಪ್ರಯತ್ನ, ಕಾರ್ಯಗಳಲ್ಲಿ ಪ್ರಗತಿ. ಸರ್ಕಾರದ ಕೆಲಸದಿಂದ ಹರ್ಷ. ವ್ಯಾಪಾರ, ಉದ್ಯೋಗದಲ್ಲಿ ಮನಸ್ತಾಪ. ಬಂಧು-ಮಿತ್ರರಲ್ಲಿ ವಿರೋಧ.

# ಕುಂಭ
ಈ ಸಂವತ್ಸರದಲ್ಲಿ ನಿಮ್ಮ ಖರ್ಚು. ಆದಾಯ ಸಮವಾಗಿರುವುದು. ಸ್ವಲ್ಪ ಆರೋಗ್ಯ, ಅನಾರೋಗ್ಯದಿಂದ ಬಳಲುವಿರಿ. ಬುಧವಾರಗಳಂದು ರಾಹು ಪೂಜಿಸಿ ನವಗ್ರಹ ಸುತ್ತಿರಿ. ಕೆಲಸ ಕಾರ್ಯ, ವ್ಯಾಪಾರ , ಉದ್ಯೋಗದಲ್ಲಿ ಪ್ರಗತಿ ಇರುವುದಿಲ್ಲ. ವೃಥಾ ಖರ್ಚು. ಮನೋ ವ್ಯಥೆ , ವೃಥಾ ತಿರುಗಾಟ, ಸೇವಕರಿಂದ ತೊಂದರೆ, ಪ್ರಯಾಣ ಮುಂದೂಡಿರಿ.

# ಮೀನ
ಈ ವರ್ಷ ನಿಮ್ಮ ಆದಾಯ ಚೆನ್ನಾಗಿದ್ದು, ಅರ್ಧದಷ್ಟು ಖರ್ಚು. ಸ್ವಲ್ಪ ಆರೋಗ್ಯ, ಅನಾರೋಗ್ಯ ಹೆಚ್ಚಾಗಿರುವುದು. ಕುಟುಂಬದಲ್ಲಿ ಸುಖ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸರ್ಕಾರದಿಂದ ಅನುಕೂಲ. ಅಧಿಕ ತಿರುಗಾಟ. ಧನವ್ಯಯ. ಮನಸ್ತಾಪ, ಬಂಧು-ಮಿತ್ರರ ಸಹಾಯ ಸಿಗುವುದು , ವ್ಯಾಪಾರ ಉದ್ಯೋಗದಲ್ಲಿ ಪ್ರಯಾಣ ಮುಂದೂಡುವಿರಿ.

ಡಾ.ನೆ.ಶ್ರೀ ವಿಶ್ವಪತಿ, ಜ್ಯೋತಿಷಿ. ವಾಸ್ತುಶಿಲ್ಪ, ಗೌರವ ಮಹಾ ಉಪಾಧ್ಯಾಯರು, ಆದಿಚುಂಚನಗಿರಿ ಶ್ರೀ ಕ್ಷೇತ್ರ, ಮೊಬೈಲ್: 9448018711

Facebook Comments