ಜ.21ರಂದು ಹಾಜರಾಗುವಂತೆ ನಟಿ ರಶ್ಮಿಕಾ ಮಂದಣ್ಣಗೆ ಐಟಿ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸಿಲುಕಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇದೇ 21ರಂದು(ಮಂಗಳವಾರ) ವಿಚಾರಣೆಗೆ ಹಾಜರಾಗುವಂತೆ ಐಟಿ ನೋಟಿಸ್ ಜಾರಿ ಮಾಡಿದೆ. ಐಟಿ ಅಧಿಕಾರಿಗಳು ರಶ್ಮಿಕಾ ಮಂದಣ್ಣ , ಅವರ ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಅವರಿಗೆ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಿದ್ದು, ಬೆಂಗಳೂರಿನಲ್ಲಿರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಮೂರು ದಿನಗಳ ಹಿಂದೆ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕುಕ್ಲೂರು ಗ್ರಾಮದಲ್ಲಿರುವ ರಶ್ಮಿಕಾ ಮಂದಣ್ಣ ಅವರ ನಿವಾಸ, ಕಚೇರಿ, ಕಲ್ಯಾಣಮಂಟಪ ಸೇರಿದಂತೆ ಮತ್ತಿತರ ಕಡೆ ಆದಾಯ ತೆರಿಗೆ ಅಧಿಕಾರಿಗಳ ಎರಡು ತಂಡ ದಾಳಿ ನಡೆಸಿತ್ತು.  ಕುಕ್ಲೂರಿನ ಮನೆ, ಸೆರೆನಿಟಿ ಹಾಲ್ ಸೇರಿದಂತೆ ರಶ್ಮಿಕಾ ತಂದೆ ಮದನ್ ಮಂದಣ್ಣಗೆ ಸೇರಿದ ಕಾಫಿ ಎಸ್ಟೇಟ್ ಮತ್ತಿತರ ಕಡೆಯೂ ಅಧಿಕಾರಿಗಳು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿಪಾಸ್ತಿ ಪತ್ತೆ ಮಾಡಿದ್ದರು ಎಂದು ತಿಳಿದುಬಂದಿದೆ.

ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿದ್ದು, ಚಿತ್ರವೊಂದಕ್ಕೆ ಪಡೆಯುತ್ತಿರುವ ಸಂಭಾವನೆಗೂ, ಆಸ್ತಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿತ್ತು. ಅವರ ತಂದೆ ಮೂಲತಃ ಕಾಫಿ ಉದ್ಯಮಿಯಾಗಿದ್ದು ವಿರಾಜಪೇಟೆ ಸುತ್ತಮುತ್ತ 50 ಎಕರೆಗೂ ಹೆಚ್ಚು ಕಾಫಿ ಎಸ್ಟೇಟ್ ಖರೀದಿ ಮಾಡಿದ್ದರು ಎನ್ನಲಾಗಿದೆ.  ಭಾರೀ ಪ್ರಮಾಣದ ಆಸ್ತಿ ಹೊಂದಿದ್ದ ಆರೋಪದ ಮೇಲೆಯೇ ಐಟಿ ಅಧಿಕಾರಿಗಳು ಸತತವಾಗಿ ಎರಡು ದಿನಗಳ ಕಾಲ ದಾಳಿ ನಡೆಸಿದ್ದರು. ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನೋಟಿಸ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ, ನಮ್ಮಿಂದ ಯಾವುದೇ ರೀತಿಯ ತಪ್ಪಾಗಿಲ್ಲ. ಆಸ್ತಿ ವಿವರಗಳೆಲ್ಲವೂ ಕಾನೂನು ಬದ್ದವಾಗಿಯೇ ಇವೆ. ನಾವು ಕಾಲಕಾಲಕ್ಕೆ ತೆರಿಗೆಯನ್ನೂ ಸಹ ಪಾವತಿ ಮಾಡಿದ್ದೇವೆ. ರಶ್ಮಿಕಾ ಮಂದಣ್ಣ ಚೆಕ್ ಮೂಲಕವೇ ಸಂಭಾವನೆ ಪಡೆಯುತ್ತಿದ್ದಾಳೆ. ನೋಟಿಸ್ ತಲುಪಿದ್ದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

Facebook Comments