ಭಕ್ತಕೋಟಿ ಅನುಪಸ್ಥಿತಿಯಲ್ಲಿ ವಿಶ್ವವಿಖ್ಯಾತ ಪುರಿ ರಥೋತ್ಸವ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ, ಜೂ.23-ಒಡಿಶಾದ ವಿಶ್ವವಿಖ್ಯಾತ ಮತ್ತು ಚಾರಿತ್ರಿಕ ಪುರಿ ಜಗನ್ನಾಥ ರಥೋತ್ಸವ ಇಂದು ಭಕ್ತರು ಮತ್ತು ಸಾರ್ವಜನಿಕರ ಅನುಪಸ್ಥಿತಿಯಲ್ಲಿ ಕಫ್ರ್ಯೂ ನಡುವೆ ಆರಂಭವಾಗಿದೆ.

ಕೋವಿಡ್-19 ವೈರಸ್ ಹಾವಳಿ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿ ಸುಪ್ರೀಂಕೋರ್ಟ್ ಪುರಿ ರಥಯಾತ್ರೆಗೆ ನಿನ್ನೆ ಸಮ್ಮತಿ ನೀಡಿತ್ತು.

ಸರ್ವೋನ್ನತ ನ್ಯಾಯಾಲಯದ ಆದೇಶಾನುಸಾರ ಇಂದು ಬೆಳಗ್ಗೆಯಿಂದಲೇ ಭದ್ರತಾ ಪಡೆಗಳ ಬಿಗಿ ಭದ್ರತೆ ನಡುವೆ ಪುರಿ ರಥಯಾತ್ರೆ ಮತ್ತು ಧಾರ್ಮಿಕ ಕೈಂಕರ್ಯಗಳು ವಿಧ್ಯುಕ್ತವಾಗಿ ಆರಂಭವಾದವು. ಆದರೆ ಭಕ್ತ ಕೋಟಿ ಇಲ್ಲದೇ ರಥೋತ್ಸವ ಸರಳವಾಗಿತ್ತು.

ಪುರಿ ಜಗ್ನನಾಥ ದೇಗುಲದ ಅರ್ಚಕ ಸಮೂಹ ಸುಪ್ರೀಂಕೋರ್ಟ್ ನಿನ್ನೆ ಮದ್ಯಾಹ್ನ ರಥೋತ್ಸವಕ್ಕೆ ಸಮ್ಮತಿ ನೀಡುತ್ತಿದ್ದಂತೆ ಸಡಗರದಿಂದ ಅಂತಿಮ ಸಿದ್ದತೆಯಲ್ಲಿ ತೊಡಗಿತು.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಂದು ಮುಂಜಾನೆ ಪಹಿಂದಾ ವಿಧಿ ವಿಶೇಷ ಪೂಜೆ ನೆರವೇರಿಸಿ ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಪುರಿಯ ಜಗ್ನನಾಥ ದೇವಸ್ಥಾನದಲ್ಲಿ ಇಂದು ಪ್ರಾತಃ ಕಾಲದಲ್ಲೇ ಜಗನ್ನಾಥ, ಬಾಲಭದ್ರ ಮತ್ತು ಸುಭದ್ರಾ ದೇವಾನುದೇವತೆಗಳಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ರಥಯಾತ್ರೆಗೆ ಅಣಿಗೊಳಿಸಲಾಯಿತು.

ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯವನ್ನು ಈ ವರ್ಷವೂ ಯಥಾವತ್ತಾಗಿ ಅನುಸರಿಸಿ, ಪ್ರಮುಖ ಬೀದಿಗಳಲ್ಲಿ ಭಕ್ತರು, ಮತ್ತು ಸಾರ್ವಜನಿಕರ ಅನುಪಸ್ಥಿತಿಯಲ್ಲಿ ರಥಗಳ ಮೆರವಣಿಗೆ ನಡೆಯಿತು.

ಭಕ್ತ ಸಮೂಹ ಟಿವಿಯಲ್ಲಿ ಪುರಿ ರಥಯಾತ್ರೆಯನ್ನು ವೀಕ್ಷಿಸಿದರು. ರಥಯಾತ್ರೆ ಸಾಗುವ ಮಾರ್ಗಗಳಲ್ಲಿ ಪೊಲೀಸರು, ಅರೆಸೇನಾ ಪಡೆ ಸಿಬ್ಬಂದಿ ಮತ್ತು ಯೋಧರೇ ಹೆಚ್ಚಾಗಿದ್ದರು.

ಪ್ರತಿ ವರ್ಷ ಪುರಿ ರಥಯಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇಶದ ಮೂಲೆ ಮೂಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕರಾಳ ಛಾಯೆಯಿಂದಾಗಿ ರಥಯಾತ್ರೆ ಮಂಕಾಗಿದೆ.

ಪ್ರತಿ ವರ್ಷ ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳು , ವಿವಿಧ ವಾದ್ಯಗಳ ಮಾರ್ದನಿ, ಭಕ್ತ ಸಮೂಹದ ಗೀತ ಗಾಯನ ಇತ್ಯಾದಿ ಪುರಿ ಜಗನ್ನಾಥ ರಥಯಾತ್ರೆಗೆ ವಿಶೇಷ ಮೆರುಗು ನೀಡುತ್ತಿದ್ದವು.ಆದರೆ ಈ ಬಾರಿ ಅವುಗಳಿಲ್ಲದೆ ಮೆರವಣಿಗೆ ನೀರಸವಾಗಿತ್ತು.

ವಿಶ್ವವಿಖ್ಯಾತ ಪುರಿ ಜಗನ್ನಾಥ ರಥೋತ್ಸವ ರದ್ದುಗೊಳಿಸುವುದು ಬೇಡ ಎಂದು ಸುಪ್ರೀಂಕೋರ್ಟ್‍ಗೆ ನಿನ್ನೆ ಮನವಿ ಮಾಡಿದ್ದ ಕೇಂದ್ರ ಸರ್ಕಾರ ಸಾರ್ವಜನಿಕರು ಮತ್ತು ಭಕ್ತರಿಲ್ಲದೆ ರಥೋತ್ಸವ ನಡೆಸಲಾಗುತ್ತದೆ. ಇದಕ್ಕೆ ಅನುಮತಿ ನೀಡಿ ಎಂದು ಕೋರಿತ್ತು.

ಕೊರೊನಾ ವೈರಸ್ ಹಾವಳಿಯಿಂದಾಗಿ ಈ ವರ್ಷದ ಪುರಿ ರಥಯಾತ್ರೆಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್‍ನ ಜೂ.18ರ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿದ್ದ ಕೇಂದ್ರ ಸರ್ಕಾರ, ಶತಮಾನಗಳ ಸಂಪ್ರದಾಯವನ್ನು ಈ ವರ್ಷ ನಿಲ್ಲಿಸದಂತೆ ಮನವಿ ಮಾಡಿದೆ.

ಕೊರೊನಾ ವೈರಸ್ ಹಾವಳಿ ಕಾರಣ ಸಾರ್ವಜನಿಕರು ಮತ್ತು ಭಕ್ತರಿಲ್ಲದೇ ಈ ರಥಯಾತ್ರೆಯನ್ನು ನಡೆಸಬಹುದು. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ದಿನದ ಕಫ್ರ್ಯೂ ಜಾರಿಗೊಳಿಸಿ ರಥೋತ್ಸವವನ್ನು ನಡೆಸಬಹುದು ಎಂದು ಕೇಂದ್ರ ತಿಳಿಸಿತ್ತು. ಇಂದು ಪುರಿ ಜಗನ್ನಾಥ ರಥಯಾತ್ರೆ ನಡೆಯದಿದ್ದರೆ ಸಂಪ್ರದಾಯದ ಪ್ರಕಾರ 12 ವರ್ಷಗಳ ಕಾಲ ಈ ಧಾರ್ಮಿಕ ಆಚರಣೆ ನಡೆಸುವಂತಿಲ್ಲ.

ಆದಕಾರಣ ಅತ್ಯಂತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರಥೋತ್ಸವ ನಡೆಸಲು ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಕೇಂದ್ರದ ಈ ಮನವಿಗೆ ಒಡಿಶಾ ರಾಜ್ಯ ಸರ್ಕಾರವೂ ಸಹ ಬೆಂಬಲ ಸೂಚಿಸಿದ್ದು, ಭಕ್ತರು ಮತ್ತು ಸಾರ್ವಜನಿಕರಿಲ್ಲದೇ ರಥಯಾತ್ರೆ ನಡೆಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಮನವಿ ಮಾಡಿದೆ. ಈ ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪುರಿ ರಥೋತ್ಸವ ನಡೆಸಲು ಸಮ್ಮತಿ ನೀಡಿತ್ತು.

# ಅಹಮದಾಬಾದ್‍ನಲ್ಲಿ ಸಾಂಕೇತಿಕ ಆಚರಣೆ:
ಅತ್ತ ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ಪ್ರಸಿದ್ಧ ಪುರಿ ಜಗನ್ನಾಥ ಮಂದಿರದಲ್ಲಿ ಇಂದು ಸಾಂಕೇತಿಕವಾಗಿ ಮಾತ್ರ ರಥಯಾತ್ರೆ ನಡೆಸಲಾಯಿತು. ಗುಜರಾತ್ ಹೈಕೋರ್ಟ್ ರಥಯಾತ್ರೆ ಮತ್ತು ಮೆರವಣಿಗೆಗೆ ತಡೆ ನೀಡಿರುವ ಕಾರಣ ಅತ್ಯಂತ ಸರಳ ರೀತಿಯಲ್ಲಿ ಸಾಂಕೇತಿಕವಾಗಿ ರಥಯಾತ್ರೆ ನಡೆಸಲಾಯಿತು.

ಮುಂಜಾನೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಜಗನ್ನಾಥ ದೇವಸ್ಥಾನದ ಗರ್ಭ ಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಸರಳ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರಿಲ್ಲದೆ ರಥೋತ್ಸವ ಕಳೆಗುಂದಿತ್ತು.

ಪ್ರಧಾನಿ ಶುಭಾಶಯ: ವಿಶ್ವವಿಖ್ಯಾತ ಪುರಿ ರಥೋತ್ಸವದ ನಿಮಿತ್ತ ರಾಷ್ಟ್ರಪತಿ ರಮಾನಾಥ್ ಕೋವಿಂದ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು , ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ಜಗನ್ನಾಥನ ಕೃಪಾಶೀರ್ವಾದದಿಂದ ಕೊರೊನಾ ಪಿಡುಗು ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ.

Facebook Comments