ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ : ಜಿಲ್ಲಾಧಿಕಾರಿ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜ.14- ಸರ್ಕಾರದಿಂದ ಉಚಿತವಾಗಿ ಬರುವಂತಹ ಅಕ್ಕಿಯನ್ನು ಕಾಳಸಂತೆಕೋರರಿಗೆ ಪಡಿತರ ಚೀಟಿದಾರರು ಮಾರಾಟ ಮಾಡುವುದು ಅಪರಾಧವಾಗಿದ್ದು, ಅಂತಹ ಪಡಿತರ ಚೀಟಿದಾರರ ಪಡಿತರ ಚೀಟಿಯನ್ನು ರದ್ದುಪಡಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಸರ್ಕಾರವು ಬಡಜನತೆಯನ್ನು ಹಸಿವಿ ನಿಂದ ಮುಕ್ತಿಗೊಳಿಸಿ, ಅರ್ಥಿಕವಾಗಿ ಚೇತರಿಸಿಕೊಳ್ಳುವಂತೆ ಮಾಡುವ ಮೂಲಕ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬುದೇ ಮುಖ್ಯ ಉದ್ದೇಶದಿಂದ ಆಹಾರ ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದ್ದು ಪಡಿತರ ಎತ್ತುವಳಿ, ನ್ಯಾಯಬೆಲೆ ಅಂಗಡಿಗಳಲ್ಲಿನ ವಿತರಣೆ, ಪಡತರ ಚೀಟಿದಾರರಿಗೆ ಆಹಾರಧಾನ್ಯ ತಲುಪಿರುವ ಬಗ್ಗೆ ಪ್ರತಿಯೊಂದು ವಿವರಗಳು ಆನ್‍ಲೈನ್ ಮೂಲಕ ದಾಖಲಾಗುತ್ತಿದೆ ಎಂದು ಹೇಳಿದ್ದಾರೆ.

ಪಡಿತರ ಚೀಟಿದಾರರಿಗೆ ಹಂಚಿಕೆಯಾದ ಆಹಾರ ಧಾನ್ಯಗಳು ನೇರವಾಗಿ ಅವರ ಕುಟುಂಬಕ್ಕೆ ತಲುಪಬೇಕೆಂಬ ಉದ್ದೇಶದಿಂದ ಆಯಾ ಕುಟುಂಬ ಸದಸ್ಯರು ಬಯೋ ನೀಡಿ ಅವರಿಗೆ ಹಂಚಿಕೆಯಾಗಿರುವ ಪಡಿತರ ವಸ್ತುಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದ್ದು, ಎಲ್ಲವನ್ನೂ ಪಾರದರ್ಶಕವಾಗಿದೆ. ಸಿಬ್ಬಂದಿಗಳು ಸಹ ವಿಷಯ ತಿಳಿದೂ ಕಾರ್ಯ ಪ್ರವೃತ್ತರಾಗ ದಿದ್ದರೆ, ಅಂತಹ ಸಿಬ್ಬಂದಿಗಳ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ಯಾವುದೇ ಗ್ರಾಮದಲ್ಲಿ ಅಕ್ರಮ ಚಟುವಟಿಕೆ ಕಂಡು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments