ನೈಜ ಘಟನೆ ಆಧಾರಿತ ‘ರತ್ನ ಮಂಜರಿ’ ಚಿತ್ರ ಈ ವಾರ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ನೈಜ ಘಟನೆ ಆಧಾರಿತ ಮರ್ಡರ್ ಮಿಸ್ಟ್ರಿ ಕಥೆಯನ್ನು ಒಳಗೊಂಡಿರುವಂತಹ ರತ್ನಮಂಜರಿ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಎನ್.ಆರ್.ಐ. ಕನ್ನಡಿಗರಾದ ಎಸ್.ಸಂದೀಪ್‍ಕುಮಾರ್, ನಟರಾಜ್ ಹಳೇಬೀಡು ಹಾಗೂ ಡಾ.ನವೀನ್‍ಕೃಷ್ಣ ಸೇರಿ ನಿರ್ಮಾಣ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಚಿತ್ರವನ್ನು ಪ್ರಸಿದ್ಧ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಬಿಡುಗಡೆಗೂ ಮುನ್ನ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿ ಚಿತ್ರದ ಕುರಿತಂತೆ ಒಂದಷ್ಟು ವಿವರಗಳನ್ನು ಹಂಚಿಕೊಂಡಿತು. ಅಮೆರಿಕಾದಲ್ಲಿ ನಡೆದ ನೈಜ ಘಟನೆಯೊಂದನ್ನಾಧರಿಸಿ ಈ ಚಿತ್ರದ ಕಥಾಹಂದರ ರಚಿಸಲಾಗಿದೆ. ರಾಜ್‍ಚರಣ್ ಈ ಚಿತ್ರದ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಖಿಲಾ ಪ್ರಕಾಶ್, ಪಲ್ಲವಿರಾಜು ಹಾಗೂ ಶ್ರದ್ಧಾ ಸಾಲಿಯಾನ ಚಿತ್ರದ ಮೂವರು ನಾಯಕಿಯರಾಗಿದ್ದು ಇವರಲ್ಲಿ ರತ್ನಮಂಜರಿ ಯಾರು ಎನ್ನುವುದೇ ಚಿತ್ರದ ಕುತೂಹಲಕಾರಿ ಅಂಶ. ಹರ್ಷವರ್ಧನರಾಜ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದ 4 ಹಾಡುಗಳು ಚಿತ್ರಕಥೆಯ ಒಳಗೇ ಮೂಡಿಬಂದಿವೆ.

ಪ್ರೀತಂ ತೆಗ್ಗಿನಮನೆ ಅವರ ಛಾಯಾಗ್ರಹಣ ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಈ ಚಿತ್ರದ ಅರ್ಧಭಾಗವನ್ನು ಅಮೆರಿಕಾದಲ್ಲಿ, ಇನ್ನರ್ಧ ಭಾಗವನ್ನು ಮಡಿಕೇರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕ ಪ್ರಸಿದ್ದ್ ಹೇಳಿದರು.

ನಾಯಕ ರಾಜ್‍ಚರಣ್ ಮಾತನಾಡಿ, ಸಿದ್ಧಾಂತ್ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು, ಅಮೆರಿಕಾದ  ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಸ್ಯ ವಿಜ್ಞಾನಿಯಾಗಿರುತ್ತೇನೆ. ನನ್ನಲ್ಲಿರುವ ಒಂದು ವಿಶೇಷ ಫೋಟೋಗ್ರಫಿಕ್ ಮೆಮೋರಿಯಿಂದ ಅಮೆರಿಕಾದಲ್ಲಿ ನಡೆದ ಕೊಲೆಯೊಂದರ ಮೂಲವನ್ನು ಹುಡುಕುತ್ತಾ ಹೊರಟಾಗ ನೂರಾರು ಕಷ್ಟಗಳು, ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದನ್ನೆಲ್ಲ ಧೈರ್ಯದಿಂದ ಎದುರಿಸಿ ಕೊಲೆಗಾರರನ್ನು ಕಂಡುಹಿಡಿಯುತ್ತೇನೆ ಎಂದು ಹೇಳಿದರು.

ನಾಯಕಿ ಅಖಿಲಾ ಪ್ರಕಾಶ್ ಮಾತನಾಡಿ, ಗೌರಿ ಎಂಬ ಫ್ಯಾಷನ್ ಡಿಸೈನರ್ ಪಾತ್ರ ನನ್ನದು. ಅಮೆರಿಕಾದಲ್ಲಿದ್ದರೂ ನಮ್ಮ ಸಂಸ್ಕøತಿಯನ್ನು ಮುಂದುವರೆಸಿಕೊಂಡು ಬಂದಿರುವ ಯುವತಿ.

ಹಾಡುಗಳನ್ನು ಮಲೇಷಿಯಾ ಹಾಗೂ ಕೂರ್ಗ್‍ನಲ್ಲಿ ಶೂಟ್ ಮಾಡಿದ್ದೇವೆ. ನಾವು ಮೂವರು ನಾಯಕಿಯರಿದ್ದು ಅದರಲ್ಲಿ ರತ್ನಮಂಜರಿ ಯಾರು ಎನ್ನುವುದು ನಮಗೂ ಗೊತ್ತಿಲ್ಲ. ಚಿತ್ರ ರಿಲೀಸಾದಾಗಲೇ ನಮಗೆ ಗೊತ್ತಾಗಲಿದೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಪಲ್ಲವಿರಾಜು ಮಾತನಾಡಿ, ಮನೆಕೆಲಸ ಮಾಡುವ ಹುಡುಗಿಯಾದರೂ, ಸ್ವಲ್ಪ ತಲೆಹರಟೆ ಕ್ಯಾರೆಕ್ಟರ್ ನನ್ನದು ಎಂದು ಹೇಳಿಕೊಂಡರು.

ಉಳಿದಂತೆ ಎಲ್ಲಾ ಕಲಾವಿದರು, ತಂತ್ರಜ್ಞರು ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  1990ರಲ್ಲಿ ನಡೆದ ನೈಜ ಘಟನೆಗೆ ಸಿನಿಮಾ ಸ್ಪರ್ಶ ನೀಡಲಾಗಿದ್ದು, ಈ ಚಿತ್ರವನ್ನು ಐನಾಕ್ಸ್‍ನವರು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರಂತೆ. ರತ್ನಮಂಜರಿಯ ಟ್ರೇಲರ್ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಸಿನಿ ಪ್ರಿಯರು ಚಿತ್ರವನ್ನು ನೋಡಲು ಕಾತು ರರಾಗಿದ್ದಾರೆ.

Facebook Comments