ಬೆಂಗಳೂರು : ರೆಸಾರ್ಟ್‍ವೊಂದರಲ್ಲಿ ರೇವ್ ಪಾರ್ಟಿ, ನಶೆಯಲ್ಲಿ ತೇಲುತ್ತಿದ್ದ 28 ಮಂದಿ ಅರೆಸ್ಟ್…!

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್/ ಬೆಂಗಳೂರು, ಸೆ.19- ಒಂದೆಡೆ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರಾಜ್ಯ ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಹೊರ ವಲಯದಲ್ಲಿ ಜಂಗಲ್ ಸಫಾರಿ ಹೆಸರಿನಲ್ಲಿ ರೆಸಾರ್ಟ್‍ವೊಂದರಲ್ಲಿ ರೇವಾ ಪಾರ್ಟಿ ನಡೆದಿದೆ.
ಗಾಂಜಾ ಸೇರಿದಂತೆ ಹಲವು ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ತೇಲುತ್ತಿದ್ದ 28ಕ್ಕೂ ಹೆಚ್ಚು ಯುವಕ, ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಡಿಜೆಗಳನ್ನು ಕರೆಸಿಕೊಂಡು ಇಲ್ಲಿನ ಆನೇಕಲ್ ಹೊರ ವಲಯದ ತಮ್ಮನಾಯಕನಹಳ್ಳಿ ಬಳಿಯ ರೆಸಾರ್ಟ್‍ವೊಂದರಲ್ಲಿ ಈ ರೇವಾ ಪಾರ್ಟಿ ನಡೆಸಲಾಗುತ್ತಿತ್ತು. ವಿವಿಧೆಡೆಗಳಿಂದ ಕಾರು ಹಾಗೂ ಇತರೆ ವಾಹನಗಳಲ್ಲಿ ತುಂಡುಗೆ ತೊಟ್ಟ ಯುವತಿಯರು ಆಗಮಿಸಿದ್ದರು.

ತಡರಾತ್ರಿವರೆಗೂ ಮಧ್ಯ ಹಾಗೂ ಡ್ರಗ್ಸ್ ಸೇವಿಸಿ ಪಾಶ್ಚಿಮಾತ್ಯ ಸಂಗೀತಕ್ಕೆ ಮೈ ಮರೆತು ಕುಣಿಯುತ್ತಿದ್ದರು. ಸ್ಥಳೀಯರು ನೀಡಿದ ಮಾಹಿತಿಯಿಂದಾಗಿ ಎಚ್ಚೆತ್ತ ಪೊಲೀಸರು ದಾಳಿ ನಡೆಸಿದ್ದಾರೆ.ತಕ್ಷಣ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಕೆಲವರು ಅಮಲಿನಲ್ಲಿ ತೇಲುತ್ತಾ ಪೊಲೀಸರ ಜತೆಯೇ ವಾಗ್ವಾದ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರು ಹೊರ ವಲಯವನ್ನು ಗುರುತಿಸಿಕೊಂಡಿರುವ ಕೆಲವರು ಮೋಜು, ಮಸ್ತಿಯಲ್ಲಿ ತೊಡಗುತ್ತಿರುವುದು ಸ್ಥಳೀಯರಿಗೂ ಕೂಡ ಕಿರಿಕಿರಿ ಉಂಟು ಮಾಡುತ್ತಿದೆ.ಈ ಪಾರ್ಟಿ ಆಯೋಜಿಸಿದ್ದ ಯುವಕ ಮತ್ತು ಸಹಕರಿಸಿದ ವ್ಯಕ್ತಿಯೊಬ್ಬ ರಾಗಿ ಹೊಲದಲ್ಲಿ ಅಡಗಿಕೊಂಡಿದ್ದು , ಇಂದು ಬೆಳಗ್ಗೆ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವಿ -ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸ್ಥಳದಲ್ಲಿ ಸಿಕ್ಕಿರುವ ಮದ್ಯದ ಬಾಟಲ್, ನೀರಿನ ರೀತಿ ರಾಸಾಯನಿಕ ಮಿಶ್ರಿತ ಬಾಟಲ್‍ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ: ತಿಂಗಳಲ್ಲಿ ಎರಡು-ಮೂರು ಬಾರಿ ಇಂತಹ ರೇವ್ ಪಾರ್ಟಿಗಳನ್ನು ಮಾಡಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಅಭಿಲಾಶ್ ಎಂಬಾತ ಈ ಪಾರ್ಟಿ ಆಯೋಜಿಸುತ್ತಿದ್ದ. ಆನ್‍ಲೈನ್ ಮೂಲಕ ಗ್ರಾಹಕರನ್ನು ಆಕರ್ಷಿಸಿ ಅವರ ಮೊಬೈಲ್ ನಂಬರ್‍ಗೆ ಎಸ್‍ಎಂಎಸ್ ಕಳುಹಿಸಿ ಹಣ ಕಟ್ಟಿಸಿಕೊಂಡು ನಿಗದಿತ ಸ್ಥಳಕ್ಕೆ ಬರುವಂತೆ ಅವರಿಗೆ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಲಾಗುತ್ತಿತ್ತು.

ಅಲ್ಲಿಗೆ ವಿದೇಶಗಳಿಂದಲೂ ಕೂಡ ಯುವತಿಯರನ್ನು ಕರೆಸಿಕೊಂಡು ನೃತ್ಯ ಕಾರ್ಯಕ್ರಮ ನಡೆಸಲಾಗುತ್ತಿತ್ತು. ನಿನ್ನೆ ರಾತ್ರಿಯೂ ಕೂಡ ರಂಗೀ ರಂಗೀ ಬಿಂದಾಸ್ ಡ್ಯಾನ್ಸ್ ಕೂಡ ಆಯೋಜಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಆ ಯುವತಿ ಬರಲಿಲ್ಲ ಎಂದು ಹೇಳಲಾಗುತ್ತಿದೆ.

ಇಂತಹ ಪಾರ್ಟಿಗೆ ರಾಜಕೀಯ ನಾಯಕರು ಸಾಥ್ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗೋವಾ, ಮುಂಬೈ ಸೇರಿದಂತೆ ಹಲವೆಡೆಗಳಿಂದ ಬೆಂಗಳೂರಿಗೆ ಹಲವರು ಬರುತ್ತಾರೆ. ಇಂತಹ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರಿಗೆ ಯಾವುದೇ ಅಂಜಿಕೆ ಇರುವುದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಸುಮಾರು 14 ಬೈಕ್‍ಗಳು, 7 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಇನ್ನೂ ಹಲವರ ಹುಡುಕಾಟ ನಡೆಸಲಾಗುತ್ತಿದೆ. ಪಾರ್ಟಿಯಲ್ಲಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಕೂಡ ಇದ್ದರು ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin