“ಲಾಂಗು-ಮಚ್ಚಿಗೆ ಕೆಲಸ ಕೊಟ್ರೆ, ನಾವು ಪಿಸ್ತೂಲ್‍ಗೆ ಕೆಲಸ ಕೊಡ್ತೀವಿ ಹುಷಾರ್”

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಆ.11- ರೌಡಿಗಳು ಲಾಂಗು, ಮಚ್ಚಿಗೆ ಕೆಲಸ ಕೊಟ್ಟರೆ ನಾವು ಪಿಸ್ತೂಲ್‍ಗೆ ಕೆಲಸ ಕೊಡುತ್ತೇವೆ ಎಂದು ಎಸ್‍ಪಿ ರವಿ ಡಿ.ಚನ್ನಣ್ಣನವರ್ ರೌಡಿ ಶೀಟರ್‍ಗಳಿಗೆ ವಾರ್ನಿಂಗ್ ನೀಡಿದರು.

ಆನೇಕಲ್ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ರೌಡಿ ಪರೇಡ್‍ನಲ್ಲಿ ಮಾತನಾಡಿದ ಅವರು, ಬೇರೆಯವರ ಹಣದಲ್ಲಿ ತಿಂದು, ಕುಡಿದು, ಗಾಂಜಾ ಹೊಡೆದು ಫೀಲ್ಡ್ ಮಾಡುವ ನಿಮಗೇ ಇಷ್ಟಿರಬೇಕೆಂದರೆ ಸರ್ಕಾರದಿಂದ ಪಿಸ್ತೂಲ್ ಪಡೆದು ಕಾನೂನು ರಕ್ಷಣೆ ಮಾಡುತ್ತಿರುವ ನಮಗೆಷ್ಟು ಕೆಪಾಸಿಟಿ ಇರುತ್ತದೆ ಎಂಬುದನ್ನು ರೌಡಿಗಳು ಅರಿತು ಬಾಳ್ವೆ ನಡೆಸಬೇಕು ಎಂದರು.

ನಾವು ಯಾರಿಗೆ ಧಮ್ಕಿ ಹಾಕಿದರೂ, ಏನು ಮಾಡಿದರೂ, ಪೊಲೀಸರು ಏನೂ ಮಾಡಲು ಆಗಲ್ಲ. ಪ್ರಭಾವಿಗಳು, ರಾಜಕಾರಣಿಗಳು ನಮ್ಮ ಕೈಯಲ್ಲಿದ್ದಾರೆ ಎಂದುಕೊಂಡಿದ್ದೀರ, ಅಂತಹವರಿಗೆ ಕೆಲವೇ ದಿನಗಳಲ್ಲಿ ತಕ್ಕ ಪಾಠ ಕಲಿಸೇ ತೀರುತ್ತೇವೆ ಎಂದರು.

ಆನೇಕಲ್ ಶಾಂತಿಯ ಪ್ರದೇಶವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವೇ ಜನರಿಂದ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕೇ ತೀರುತ್ತೇವೆ ಎಂದರು.

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದರೆ ಜತೆಗೆ ಮುಂದೆ ಬರುವಂತಹ ಗ್ರಾಪಂ ಚುನಾವಣೆ ಹಾಗೂ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗುಂಪುಗಾರಿಕೆ, ಬೇರೆಯವರ ಧಮ್ಕಿ ಹಾಕಿದರೆ ಸುಮ್ಮನೆ ಕೂರೋ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುವುದು, ಜತೆಗೆ ಗಡಿಪಾರು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಸ್ಥಳದಲ್ಲಿ ಡಿವೈಎಸ್‍ಪಿ ನಂಜುಂಡೇಗೌಡ, ವೃತ್ತ ನಿರೀಕ್ಷಕರಾದ ಕೃಷ್ಣ, ಕೆ.ವಿಶ್ವನಾಥ್, ಶೇಖರ್, ನಾಗರಾಜ್, ಉಪನಿರೀಕ್ಷಕರಾದ ನವೀನ್, ಗೋವಿಂದ್, ಹರೀಶ್ ರೆಡ್ಡಿ ಮತ್ತು ಪೊಲಿಸರು ಹಾಜರಿದ್ದರು.

Facebook Comments

Sri Raghav

Admin