ಭೂಗತ ಪಾತಕಿ ರವಿಪೂಜಾರಿ ಇತಿಹಾಸ ಬಿಚ್ಚಿಟ್ಟ ಎಡಿಜಿಪಿ ಅಮರ್ ಕುಮಾರ್ ಪಾಂಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.24- ವಿವಿಧ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿಪೂಜಾರಿ ಸೆನೆಗಲ್‍ನಲ್ಲಿ ಭಾರತೀಯ ರೆಸ್ಟೋರೆಂಟ್‍ವೊಂದನ್ನು ನಡೆಸುತ್ತಾ ಒಳ್ಳೆಯ ವ್ಯಕ್ತಿಯಂತೆ ಬಿಂಬಿಸಿಕೊಳ್ಳುತ್ತಿದ್ದ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಹೇಳಿದರು. ರವಿ ಪೂಜಾರಿ ಬಂಧನದ ಬಗ್ಗೆ ಪೊಲೀಸ್ ಪ್ರಧಾನ ಕಚೇರಿಯಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 1994ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಭೂಗತಪಾತಕಿ ಒಬ್ಬ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಅಂದಿನಿಂದ ತಲೆಮರೆಸಿಕೊಂಡಿದ್ದ.

ಮೊದಲು ನೇಪಾಳಕ್ಕೆ ಹೋಗಿ ಅಲ್ಲಿಂದ ಬ್ಯಾಂಕಾಕ್‍ಗೆ ನಂತರ ಉಗಾಂಡಕ್ಕೆ ತೆರಳಿ ತದನಂತರ ಬುರ್ಕಿನೋಪಾಸೊದಲ್ಲಿ ಸುಮಾರು ವರ್ಷಗಳ ಕಾಲ ನೆಲೆಸಿ ಆನಂತರ ಸೆನೆಗಲ್‍ಗೆ ಪರಾರಿಯಾಗಿದ್ದ ಎಂದು ಹೇಳಿದರು.  ಬುರ್ಕಿನೋಪಾಸದಲ್ಲಿ 12 ವರ್ಷ ವಾಸವಿದ್ದ ರವಿಪೂಜಾರಿ ಅಲ್ಲಿ ಸಮಾಜ ಸೇವೆಯ ಮೂಲಕ ಪ್ರಭಾವಿ ವ್ಯಕ್ತಿಯಾಗಿದ್ದ. ಆವರೆಗೂ ಭಾರತದ ಪಾಸ್‍ಪೋರ್ಟ್ ಮೇಲೆ ಪ್ರಯಾಣ ಮಾಡುತ್ತಿದ್ದ ಆತ ಇದ್ದಕ್ಕಿದ್ದಂತೆ ಬುರ್ಕಿನೋಪಾಸೊ ನಾಗರಿಕತ್ವ ಪಡೆದು ಅಲ್ಲಿನ ಪಾಸ್‍ಪೋರ್ಟ್ ಮೇಲೆ ವ್ಯವಹರಿಸಲು ಆರಂಭಿಸಿದ್ದ.

ಸೆನೆಗಲ್‍ಗೆ ತೆರಳಿ ಅಲ್ಲಿ ಭಾರತೀಯ ರೆಸ್ಟೋರೆಂಟ್‍ನ್ನು ಆರಂಭಿಸಿ ಒಳ್ಳೆ ವ್ಯಾಪಾರಿಯಾಗಿದ್ದ. ಸೆನೆಗಲ್‍ನ ಸಭ್ಯ ನಾಗರಿಕನಾಗಿ ವರ್ತಿಸುತ್ತಿದ್ದ. ಜೊತೆಗೆ ನೀರಿಲ್ಲದ ಕಡೆ ಬೋರ್‍ವೆಲ್ ಕೊರೆಸುವುದು, ನವರಾತ್ರಿ ಸಂದರ್ಭದಲ್ಲಿ ಬಡವರಿಗೆ ಬಟ್ಟೆ ಹಾಗೂ ದಾನಗಳನ್ನು ಮಾಡುವ ಮೂಲಕ ಹೆಸರು ಪಡೆದಿದ್ದ.  ಭಾರತದಲ್ಲಿ ದುಡ್ಡಿಗಾಗಿ ಬೆದರಿಕೆ ಹಾಕಿ ಬೆದರಿಸುತ್ತಿದ್ದ ರವಿಪೂಜಾರಿ ಸೆನೆಗಲ್‍ನಲ್ಲಿ ಸ್ನೇಹಿತರ ಬಳಗ ಕಟ್ಟಿಕೊಂಡು ಅವರ ಪ್ರಾಯೋಜಕತ್ವದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದ.

ಕಳೆದ ವರ್ಷ ಆತನನ್ನು ಬಂಧಿಸಿ ಕರೆತರಲು ನನಗೆ ಜವಾಬ್ದಾರಿ ವಹಿಸಲಾಯಿತು. ಆತನ ಇರುವಿಕೆಯನ್ನು ಪತ್ತೆಹಚ್ಚಿ ಭಾರತದ ಸರ್ಕಾರದ ನೆರವಿನೊಂದಿಗೆ ಸೆನೆಗಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮನವರಿಕೆ ಮಾಡಿಕೊಟ್ಟ ಮೇಲೆ ಆತನ ಬಂಧನವಾಗಿತ್ತು.  2019ರ ಜನವರಿ 19ರಂದು ಆತನನ್ನು ರೆಡ್‍ಕಾರ್ನರ್ ನೋಟಿಸ್ ಮೇಲೆ ಬಂಧಿಸಲಾಗಿತ್ತು. ಫೆ.22ರಂದು ರವಿ ಪೂಜಾರಿಯನ್ನು ನಮ್ಮ ವಶಕ್ಕೆ ಒಪ್ಪಿಸಲಾಯಿತು.

ಆತನನ್ನು ಬಂಧಿಸಲು ನಾವು ಸೆನೆಗಲ್‍ಗೆ ಹೋದಾಗ ಆರಂಭದಲ್ಲಿ ರವಿ ಪೂಜಾರಿ ದುಗುಡಗೊಂಡಿದ್ದ. ಆತಂಕದಲ್ಲಿದ್ದ. ನೀವು ಭಾರತದಿಂದ ಬಂದಿದ್ದೀರಾ ಎಂದು ನಮ್ಮನ್ನು ಹಿಂದಿಯಲ್ಲಿ ಪ್ರಶ್ನಿಸಿದ. ನೀವಾಗಿಯೇ ಕರೆಸಿಕೊಂಡಿದ್ದೀರಾ, ಬನ್ನಿ ಜೊತೆಯಲ್ಲಿ ಹೋಗೋಣ ಎಂದು ಹೇಳಿ ಆತನನ್ನು ಹೊರಡಿಸಬೇಕಾಯಿತು.  ಆರಂಭದಲ್ಲಿ ಸ್ವಲ್ಪ ವಿರೋಧ ವ್ಯಕ್ತಪಡಿಸಿದನಾದರೂ ಆನಂತರ ವಿಮಾನ ಪ್ರಯಾಣದಲ್ಲಿ ಸಹಕಾರ ನೀಡಿದೆ. ನನ್ನೊಂದಿಗೆ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇನ್‍ಸ್ಪೆಕ್ಟರ್ ಮಲ್ಲಪ್ಪ ಸಿದ್ದಪ್ಪ, ಕಾನ್‍ಸ್ಟೆಬಲ್ ಜಯಪ್ರಕಾಶ್, ಮತ್ತಿತರರು ರವಿಪೂಜಾರಿಯನ್ನು ಕರೆತರಲು ಬಂದಿದ್ದರು ಎಂದು ಹೇಳಿದರು.

ಮೂಲತಃ ಕರ್ನಾಟಕದಲ್ಲಿ ಹುಟ್ಟಿದ ರವಿ ಪೂಜಾರಿ ಭೂಗತಲೋಕದ ದೊರೆಯಾಗಿ ಬೆಳೆದದ್ದು ಮಹಾರಾಷ್ಟ್ರದಲ್ಲಿ. ಅವನ ಗುರು ಛೋಟಾ ರಾಜನ್ ರವಿ ಪೂಜಾರಿಗೆ ಆಂಥೋಣಿ ಫರ್ನಾಂಡಿಸ್ ಎಂಬ ಹೆಸರನ್ನು ನಾಮಕರಣ ಮಾಡಿದ್ದ. ನಂತರ ಜೋಸೆಫ್ ಫರ್ನಾಂಡಿಸ್ ಎಂಬ ಹೆಸರು ಕೂಡ ಇತ್ತು.  ಸೆನೆಗಲ್‍ಲ್ಲಿ ರಾಕಿ ಫರ್ನಾಂಡಿಸ್ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದ. ಬುರ್ಕಿನಪೋಸೊ ದೇಶ ನೀಡಿದ ಪಾಸ್‍ಪೆಪೋರ್ಟ್‍ನಲ್ಲಿ ಜನ್ಮ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಕೆಲವು ಪಾಸ್‍ಪೋರ್ಟ್‍ಗಳಲ್ಲಿ ಹುಟ್ಟಿದ ಸ್ಥಳವನ್ನು ಮೈಸೂರು ಎಂದು ನಮೂದಿಸಲಾಗಿದೆ.

ಹಲವಾರು ನಕಲಿ ಪಾಸ್‍ಪೋರ್ಟ್‍ಗಳನ್ನು ಆರೋಪಿ ಹೊಂದಿದ್ದಾನೆ. ಈ ನಡುವೆ ಒಮ್ಮೆ ನಕಲಿ ಪಾಸ್‍ಪೋರ್ಟ್‍ನಲ್ಲೇ ಅಮೆರಿಕಾಕ್ಕೂ ಪ್ರಯಾಣ ಬೆಳೆಸಿದ್ದ. ಭಾರತಕ್ಕೆ ಇನ್ನು ಬಂದಿರಲಿಲ್ಲ. ಆದರೆ ಹತ್ತಿರದ ದೇಶಗಳಾದ ಮಲೇಶ್ಯಾ, ಇಂಡೋನೇಷ್ಯಾಗೆ ಬಂದು ಹೋಗಿದ್ದಾನೆ ಎಂದು ಅವರು ತಿಳಿಸಿದರು.  ಮಹಾರಾಷ್ಟ್ರದ ಕೊಲೆ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು. ಆ ವೇಳೆ ಆತನ ಪೋಟೊ ಮತ್ತು ಬೆರಳಚ್ಚನ್ನು ಪಡೆಯಲಾಗಿತ್ತು. ವಿದೇಶದಲ್ಲಿದ್ದರೂ ಆತ ಭಾರತದಲ್ಲಿ ಚಟುವಟಿಕೆಗಳನ್ನು ನಿರಾತಂಕವಾಗಿ ನಡೆಸಲು ತಂಡವೊಂದನ್ನು ಕಟ್ಟಿಕೊಂಡಿದ್ದ.

ಸರಿಸುಮಾರು 46 ಪ್ರಕರಣಗಳು ಬೆಂಗಳೂರು ಒಂದರಲ್ಲೇ ರವಿಪೂಜಾರಿ ಮೇಲೆ ದಾಖಲಾಗಿವೆ. ಹಲವಾರು ಕೊಲೆ ಪ್ರಕರಣಗಳು, ಬೆದರಿಕೆ, ಹಫ್ತಾ ವಸೂಲಿ ಸಾಕಷ್ಟಿವೆ. ಬಿಲ್ಡರ್‍ಗಳು, ಉದ್ಯಮಿಗಳು, ಗಣ್ಯ ವ್ಯಕ್ತಿಗಳು ಆತನ ಗುರಿಯಾಗಿದ್ದರು.  ಕೇರಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ಕಡೆ ಅಪರಾಧ ಮಾಡಿದ್ದಾನೆ. ಎಲ್ಲಾ ಪ್ರಕರಣಗಳನ್ನು ಹಂತ ಹಂತವಾಗಿ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು.

ಕಳೆದ 6 ತಿಂಗಳ ಹಿಂದೆ ನನಗೆ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ಮಾಡಿ ಪೂರೈಸಿದ ಆತ್ಮತೃಪ್ತಿ ನನಗಿದೆ. ನನಗೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಅಮರ್‍ಕುಮಾರ್ ಪಾಂಡೆ ಹೇಳಿದರು. ಹಿರಿಯ ಅಂಧಿಕಾರಿ ಸಂದೀಪ್ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments