ರವಿ ಪೂಜಾರಿ ವಿರುದ್ಧ ಮತ್ತೊಂದು ಚಾರ್ಜ್‍ಶೀಟ್ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.10- ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಬೆಂಗಳೂರು ನಗರ ಪೊಲೀಸರು ನ್ಯಾಯಾಲಯಕ್ಕೆ ಮತ್ತೊಂದು ಚಾರ್ಜ್‍ಶೀಟ್ (ದೋಷಾರೋಪಣ ಪಟ್ಟಿ) ಸಲ್ಲಿಸಿದ್ದಾರೆ. ಈಗಾಗಲೇ ಮೂರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದು, ಇದು ನಾಲ್ಕನೆ ಚಾರ್ಜ್‍ಶೀಟ್ ಆಗಿದೆ.

ಈ ಮೊದಲು ತಿಲಕ್‍ನಗರ ಪೊಲೀಸ್ ಠಾಣೆ ಪ್ರಕರಣ, ವೈಯಾಲಿಕಾವಲ್ ಠಾಣೆ ಹಾಗೂ ವೈಟ್‍ಫೀಲ್ಡ್ ಠಾಣೆ ಪ್ರಕರಣಗಳಲ್ಲಿ ರವಿ ಪೂಜಾರಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ.

ಇದೀಗ ಇಂದಿರಾನಗರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಇದೂ ಸೇರಿದಂತೆ ಒಟ್ಟು 4 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಸಿದಂತಾಗಿದೆ. 2009ರಲ್ಲಿ ರವಿ ಪೂಜಾರಿ ಸಹಚರರು ಇಂದಿರಾನಗರದಲ್ಲಿನ ಖಾಸಗಿ ಟಿವಿ ಚಾನಲ್ ಕಚೇರಿಗೆ ನುಗ್ಗಿ ಹಣಕ್ಕಾಗಿ ಬೆದರಿಸಿ ಪೀಠೋಪಕರಣ ಧ್ವಂಸ ಮಾಡಿ ಬೆದರಿಕೆ ಹಾಕಿ ಪರಾರಿಯಾಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಠಾಣೆ ಪೆÇಲೀಸರು ನ್ಯಾಯಾಲಯಕ್ಕೆ ರವಿ ಪೂಜಾರಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

Facebook Comments