ರವಿ ಪೂಜಾರಿ ಸಹಚರರಿಗೆ ಆಯುಧ ಎಲ್ಲಿಂದ ಪೂರೈಕೆಯಾಗ್ತಿತ್ತು..? ಪೊಲೀಸರಿಂದ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.29- ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿಪೂಜಾರಿ ವಿಚಾರಣೆ ತೀವ್ರಗೊಂಡಿದ್ದು, ಪಾತಕ ಕೃತ್ಯಗಳಿಗೆ ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಯಾವ ರೀತಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ಮಹತ್ವದ ಮಾಹಿತಿ ಬಗ್ಗೆ ತನಿಖೆ ನಡೆಯುತ್ತಿದೆ. ಕಳೆದ ಒಂದು ವಾರದಿಂದ ರವಿಪೂಜಾರಿಯ ವಿಚಾರಣೆ ಬಿರುಸಿನಿಂದ ನಡೆದಿದೆ. ಬೆಂಗಳೂರು ಒಂದರಲ್ಲೇ ಸರಿಸುಮಾರು 47 ಪ್ರಕರಣಗಳಲ್ಲಿ ರವಿಪೂಜಾರಿ ಆರೋಪಿಯಾಗಿದ್ದಾನೆ.

ಪೋನ್ ಮೂಲಕ ಧಮ್ಕಿ ಹಾಕುವುದು, ಹಣ ವಸೂಲಿ ಮಾಡುವುದು, ಹಣ ಕೊಡದೇ ಇದ್ದಾಗ ಗುಂಡು ಹಾರಿಸಿ ಹತ್ಯೆ ಮಾಡುವುದು ಅಥವಾ ಬೆದರಿಸುವುದು ನಿರಂತರವಾಗಿ ನಡೆದಿವೆ. ಈ ಪ್ರಕರಣಗಳಲ್ಲಿ ರವಿ ಪೂಜಾರಿಯ ನಿರ್ದೇಶನದಂತೆ ಆತನ ಸಹಚರರು ಕೃತ್ಯ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಶಬನಮ್ ಡೆವಲ್ಪರ್ಸ್ ಮತ್ತು ಖಾಸಗಿ ಟಿವಿ ಚಾನಲ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣಗಳೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲಾಗಿತ್ತು.

ಬಹುತೇಕ ಯಾವ ಪ್ರಕರಣಗಳಲ್ಲೂ ನಿರ್ದಿಷ್ಟವಾಗಿ ಆರೋಪಿಗಳು ಪತ್ತೆಯಾಗಿಲ್ಲ. ಈಗ ರವಿ ಪೂಜಾರಿ ಬಂಧನದ ಮೂಲಕ ಎಲ್ಲಾ ಪ್ರಕರಣಗಳಿಗೂ ಜೀವ ಬಂದಿದೆ. ವಿದೇಶದಲ್ಲಿ ಕುಳಿತು ದೂರವಾಣಿ ಮೂಲಕವೇ ದುಷ್ಕøತ್ಯಗಳಿಗೆ ಸಂಚು ರೂಪಿಸುತ್ತಿದ್ದು ಹಾಗೂ ಸಹಚರರನ್ನು ಕಾರ್ಯಾಚರಣೆಗಿಳಿಸುತ್ತಿದ್ದ ರವಿ ಪೂಜಾರಿ, ಇಷ್ಟು ದಿನ ತಲೆ ಮರೆಸಿಕೊಂಡಿದ್ದರಿಂದ ಬಹಳಷ್ಟು ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ.

ಶತತ ಪ್ರಯತ್ನ ಮಾಡಿ ಎಡಿಜಿಪಿ ಅಮರ್‍ಕುಮಾರ್ ಪಾಂಡೆ ಮತ್ತು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ರವಿ ಪೂಜಾರಿಯನ್ನು ಸೆನೇಗಲ್‍ನಿಂದ ಬಂಧಿಸಿ ಬೆಂಗಳೂರಿಗೆ ಕರೆತಂದಿದೆ. ದಿನೇ ದಿನೇ ವಿಚಾರಣೆ ಚುರುಕು ಪಡೆಯುತ್ತಿದೆ.

ಅಪರಾಧ ಪ್ರಕರಣಗಳಿಗೆ ಸಹಚರರನ್ನು ಯಾವ ರೀತಿ ನೇಮಿಸಲಾಗುತ್ತಿತ್ತು. ಅವರಿಗೆ ತರಬೇತಿ ಎಲ್ಲಿಂದ ಕೊಡಿಸಲಾಗುತ್ತಿತ್ತು, ಶಾರ್ಫ್ ಶೂಟರ್‍ಗಳು ಫೀಲ್ಡಿಗಿಳಿಯುವ ಮುನ್ನ ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದವರು ಯಾರು ? ಆ ಆಯುಧಗಳನ್ನು ಎಲ್ಲಿಂದ ತರಿಸಲಾಗುತ್ತಿತ್ತು? ದುಷ್ಕøತ್ಯಗಳಿಗೆ ಸ್ಥಳೀಯವಾಗಿ ನೆರವಾಗುತ್ತಿದ್ದವರು ಯಾರು ? ಎಂಬೆಲ್ಲಾ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

Facebook Comments