ಭೂಗತ ಪಾತಕಿ ರವಿ ಪೂಜಾರಿಯ ತೀವ್ರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.25- ಭೂಗತ ಪಾತಕಿ ರವಿ ಪೂಜಾರಿಯನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ರವಿ ಪೂಜಾರಿಯ ವಿಚಾರಣೆ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಆತನ ಮೇಲೆ 38ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಪೈಕಿ ಕೆಲವು ಪ್ರಕರಣಗಳ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು.

ಈ ಸಂಬಂಧ ಸಿಸಿಬಿ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿ ಹಲವು ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 97ಕ್ಕೂ ಹೆಚ್ಚು ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿಯ ವಿಚಾರಣೆ ನಡೆಯುತ್ತಿರುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ ಸಿಸಿ ಟಿವಿ ಅಳವಡಿಸಲಾಗಿದೆ.

2007, ಫೆ.15ರಂದು ತಿಲಕ್‍ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಯನಗರ 9ನೆ ಬ್ಲಾಕ್‍ನ ಈಸ್ಟ್ ಎಂಡ್ ಡಿ ಕ್ರಾಸ್‍ನಲ್ಲಿನ ಶಬ್‍ನಮ್ ಡೆವಲಪರ್ಸ್ ಕಚೇರಿಯ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈ ಪ್ರಕರಣವೂ ಸೇರಿದಂತೆ ಇನ್ನೂ ಹಲವು ಪ್ರಕರಣಗಳ ಬಗ್ಗೆ ಕೂಲಂಕಶವಾಗಿ ಸಿಸಿಬಿ ಪೊಲೀಸರು ಆರೋಪಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹಫ್ತಾ ವಸೂಲಿ ಮಾಡಲು ರಾಜಕಾರಣಿಗಳು, ಡೆವಲಪರ್ಸ್‍ಗಳು, ಗಣ್ಯ ವ್ಯಕ್ತಿಗಳನ್ನು ಹೇಗೆ ಆಯ್ಕೆ ಮಾಡುತ್ತಿದ್ದೆ. ಅವರ ದೂರವಾಣಿ ಸಂಖ್ಯೆಗಳನ್ನು ಹೇಗೆ ಸಂಗ್ರಹಿಸುತ್ತಿದ್ದೆ.  ನಿನ್ನ ಬೆದರಿಕೆಗೆ ಒಳಗಾಗಿ ಎಷ್ಟು ಮಂದಿ ಹಫ್ತಾ ನೀಡಿದ್ದಾರೆ. ಯಾರ ಮೂಲಕ ಈ ಹಣ ಪಡೆದಿದ್ದಿ? ಹಣ ಕೊಡದೆ ಇದ್ದಾಗ ಅವರುಗಳ ಮೇಲೆ ಯಾರಿಂದ ದಾಳಿ ಮಾಡಿಸುತ್ತಿದ್ದೆ.  ಎಷ್ಟು ಮಂದಿ ಸಹಚರರು ಎಲ್ಲೆಲ್ಲಿ ಇದ್ದಾರೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ಪೊಲೀಸ್ ಅಧಿಕಾರಿಗಳು ರವಿ ಪೂಜಾರಿಗೆ ಕೇಳಿ ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ.

Facebook Comments