BIG NEWS : ಆರ್‌ಬಿಐ ಮಹತ್ವದ ಘೋಷಣೆ : ರೆಪೋ ದರ ಇಳಿಕೆ, ಇಎಂಐ 3 ತಿಂಗಳು ವಿಸ್ತರಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 22- ಕೊರೊನಾ ವೈರಸ್ ಹಾವಳಿಯಿಂದ ಪಾತಾಳಕ್ಕೆ ಕುಸಿದಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಜೊತೆ ಸಂಕಷ್ಟದಲ್ಲಿರುವ ಜನಸಾಮಾನ್ಯರ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ ), ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಪಡೆದ ವಿವಿಧ ಸಾಲಗಳ ಮೇಲಿನ ಇಎಂಐಗಳ (ಸಮಾನ ಮಾಸಿಕ ಕಂತುಗಳು) ಪಾವತಿ ಅವಧಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಿದೆ.

ಅಲ್ಲದೇ ಕುಸಿದಿರುವ ಆರ್ಥಿಕತೆಗೆ ಪುಷ್ಟಿ ನೀಡುವ ಉದ್ದೇಶದಿಂದ ಆರ್‍ಬಿಐ ರೆಪೋ (ಬ್ಯಾಂಕ್ ಬಡ್ಡಿ ದರ)ವನ್ನು ಶೇ.4ರಷ್ಟು (40 ಬೇಸಿಸ್ ಪಾಯಿಂಟ್) ಇಳಿಸಿದೆ. ಇದರಿಂದ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ಕಡಿಮೆಯಾಗಲಿದೆ.

ಮುಂಬೈನಲ್ಲಿ ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರ್‍ಬಿಐ ಗೌರ್ನರ್ ಶಕ್ತಿಕಾಂತ್ ದಾಸ್, ಜೂನ್‍ನಿಂದ ಆಗಸ್ಟ್‍ವರೆಗೆ ಇಎಂಐ ಪಾವತಿ ಅವಧಿಯನ್ನು ವಿಸ್ತರಿಸುವುದಾಗಿ ತಿಳಿಸಿದರು.

ಗೃಹ, ವಾಹನ, ಶಿಕ್ಷಣ, ಮದುವೆ, ವೈಯಕ್ತಿಕ ಮತ್ತಿತ್ತರ ಸಾಲಗಳನ್ನು ಪಡೆದಿರುವ ಜನಸಾಮಾನ್ಯರಿಗೆ ಈ ಸಂಕಷ್ಟ ಸಂದರ್ಭದಲ್ಲಿ ಇಎಂಐ ಪಾವತಿ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿರುವುದರಿಂದ ನಿರಾಳರಾಗಿದ್ದಾರೆ.

ಕೋವಿಡ್-19 ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಸಾಮಾನ್ಯರು ಮತ್ತು ಕಡಿಮೆ ಆದಾಯ ಜನರಿಗಾಗಿ ಸಾಲಗಳ ಮೇಲಿನ ಮಾಸಿಕ ಕಂತುಗಳ ಪಾವತಿ ಅವಧಿಯನ್ನು ಆರ್‍ಬಿಐ ಮಾರ್ಚ್ ತಿಂಗಳಿನಿಂದ ಮೂರು ತಿಂಗಳ ಕಾಲ ವಿಸ್ತರಿಸಿತ್ತು.

ಮಾರ್ಚ್, ಏಪ್ರಿಲ್ ಮತ್ತು ಮೇ 31ರವರೆಗೆ ವಿಸ್ತರಿಸಲಾಗಿದ್ದ ಸಾಲ ಮರುಪಾವತಿ ಕಂತುಗಳನ್ನು ಈಗ ಜೂನ್ 1 ರಿಂದ ಆಗಸ್ಟ್ 31ವರೆಗೂ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಇದರಿಂದ ದೇಶದ ಕೋಟ್ಯಂತರ ಮಂದಿಗೆ ದೊಡ್ಡ ರಿಲೀಫ್ ದೊರತಂತಾಗಿದೆ.

ಈ ಹೊಸ ವಿಸ್ತರಣೆಯಿಂದಾಗಿ, ವಿವಿಧ ಸಾಲಗಳ ಮೇಲಿನ ಇಎಂಐ ಕಂತುಗಳ ಮರುಪಾವತಿ ಮೊತ್ತವನ್ನು ಗ್ರಾಹಕರು ಮತ್ತು ಖಾತೆದಾರರ ಖಾತೆಗಳಿಂದ ಬ್ಯಾಂಕ್‍ಗಳು ಕಡಿತ ಮಾಡುವಂತಿಲ್ಲ.

ಎರಡನೇ ಅವಧಿ ವಿಸ್ತರಣೆ ಆಗಸ್ಟ್ 31ಕ್ಕೆ ಮುಗಿಯಲಿದ್ದು, ಆನಂತರವಷ್ಟೇ ಇಎಂಐ ಪಾವತಿಗಳು ಚಾಲನೆಗೆ ಬರಲಿವೆ. ಅಲ್ಲಿಯವರೆಗೆ ಬ್ಯಾಂಕುಗಳು, ಗೃಹ ಸಾಲ ನೀಡಿಕೆ ಸಂಸ್ಥೆಗಳು ಮತ್ತು ಇತರ ಹಣಕಾಸು ಕಂಪನಿಗಳು ತನ್ನ ಗ್ರಾಹಕರಿಂದ ಇಎಂಐಗಳನ್ನು ಪಾವತಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಆರ್‍ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದರು.

ಆರ್‍ಬಿಐ ರೆಪೋ (ಬ್ಯಾಂಕ್ ಬಡ್ಡಿ ದರ)ವನ್ನು ಶೇ. 4ರಷ್ಟು (40 ಬೇಸಿಸ್ ಪಾಯಿಂಟ್) ಇಳಿಸಿದೆ. ಇದರಿಂದ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin