ರಾಜ್ಯಗಳಿಗೆ ಆರ್‌ಬಿಐ ಸಹಾಯ ಹಸ್ತ : ಗವರ್ನರ್ ಸುದ್ದಿಗೋಷ್ಠಿಯ ಹೈಲೈಟ್ಸ್ ಇಲ್ಲಿದೆ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ.17-ದೇಶದಲ್ಲಿ ವ್ಯಾಪಕ ಸಾವು-ನೋವು ಮತ್ತು ಸೋಂಕು ಬಾಧೆಯೊಂದಿಗೆ ಭಾರೀ ಆರ್ಥಿಕ ನಷ್ಟ ಮತ್ತು ಹಣಕಾಸು ಬಿಕ್ಕಟ್ಟು ಸೃಷ್ಟಿಸಿರುವ ಕೊರೊನಾ ವಿರುದ್ಧ ಹೋರಾಡುತ್ತಿರುವ ರಾಜ್ಯಗಳಿಗೆ ನೆರವಾಗಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಸಹಾಯ ಹಸ್ತಚಾಚಿದೆ.

ಈ ಸಂಬಂಧ ಇಂದು ಮಹತ್ವದ ಘೋಷಣೆ ಹೊರಡಿಸಿರುವ ಆರ್‍ಬಿಐ, ರಾಜ್ಯಗಳಿಗೆ ಶೇಕಡ 60ರಷ್ಟು ಹೆಚ್ಚುವರಿ ಅನುದಾನ ಬಿಡುಗಡೆಯನ್ನು ಘೋಷಿಸಿದೆ. ಅಲ್ಲದೇ ಪ್ರಮುಖ ಸಂಸ್ಥೆಗಳಿ ಹಣಕಾಸು ನೆರವಿನ ಆಧಾರ ಒದಗಿಸಿರುವ ರಿಸರ್ವ್ ವ್ಯಾಂಕ್ 50,000 ಕೋಟಿರೂ. ಗಳ ವಿಶೇಷ ಆರ್ಥಿಕ ಸೌಲಭ್ಯಗಳನ್ನು ಸಹ ಪ್ರಕಟಿಸಿದೆ.

ಜೊತೆಗೆ ಇಂದಿನಿಂದ ಎಲ್ಲ ಬ್ಯಾಂಕುಗಳಿಗೂ ಕಡಿಮೆ ಬಡ್ಡಿ ದರದಲ್ಲಿ (ರೆಪೋ) ಸಾಲ ಸೌಲಭ್ಯಗಳನ್ನು ಒದಗಿಸುವುದಾಗಿ ಯೂಆರ್‍ಬಿಐ ಘೋಷಿಸಿದೆ.
ರಾಜಧಾನಿ ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‍ಬಿಐ ಗೌರ್ನರ್ ಶಕ್ತಿಕಾಂತ್‍ದಾಸ್, ನಬಾರ್ಡ್, ಎಸ್‍ಐಡಿಬಿಐ, ಎನ್‍ಎಚ್‍ಬಿ ಇತ್ಯಾದಿ ಹಣಕಾಸು ಸಂಸ್ಥೆಗಳಿಗೆ 50,000 ಕೋಟಿ ರೂ.ಗಳ ಸ್ಪೆಷಲ್ ಪೈನಾನ್ಸ್ ಫೆಸಿಲಿಟಿ ಒದಗಿಸುವುದಾಗಿ ಘೋಷಿಸಿದರು.

ನಬಾರ್ಡ್‍ಗೆ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) 25,000 ಕೋಟಿ ರೂ.ಗಳು, ಎಸ್‍ಐಡಿಬಿಐಗೆ (ಭಾರತ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್) 15,000 ಕೋಟಿ ರೂ.ಗಳು ಹಾಗೂ ಎನ್‍ಎಚ್‍ಬಿಗೆ (ನ್ಯಾಷನಲ್ ಹೌಸಿಂಗ್ ಬ್ಯಾಂಕ್) 10,000 ಕೋಟಿ ರೂ.ಗಳನ್ನು ನೀಡುವುದಾಗಿ ಶಕ್ತಿಕಾಂತ್‍ದಾಸ್ ಪ್ರಕಟಿಸಿದರು.

ದೇಶದ ಬ್ಯಾಂಕುಗಳಿಗೆ ರಿವರ್ಸ್ ರೆಪೋ ದರದಲ್ಲಿಕಡಿತ ಮಾಡಲಾಗಿದ್ದು, ಅದು 25 ಬೇಸಿಸ್ ಪಾಯಿಂಟ್‍ನಿಂದ ಶೇ.3.75ರಷ್ಟು ಇಳಿಸಲಾಗಿದೆ. ಇದನ್ನು ಕಡಿಮೆ ಮಾಡಿರುವುದರಿಂದ ಬ್ಯಾಂಕುಗಳು ಉತ್ಪಾದಕ ವಲಯಗಳಿಗೆ ಸಾಲ ಎಂದು ಅವರು ವಿವರಿಸಿದರು. ಹೆಚ್ಚುವರಿ ಹಣ ಹರಿವಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲಕ್ಕೆ ಪಾವತಿಸುವ ಬಡ್ಡಿದರವನ್ನು ರಿವರ್ಸ್ ರೆಪೋ ಎಂದು ಕರೆಯಲಾಗುತ್ತದೆ.

ಜೊತೆಗೆ ಇಂದಿನಿಂದ ಎಲ್ಲ ಬ್ಯಾಂಕುಗಳಿಗೂ ಕಡಿಮೆ ಬಡ್ಡಿ ದರದಲ್ಲಿ (ರೆಪೋ) ಸಾಲ ಸೌಲಭ್ಯಗಳನ್ನು ಒದಗಿಸುವುದಾಗಿಯೂ ಆರ್‍ಬಿಐ ಘೋಷಿಸುವ ಮೂಲಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನೆರವಿನ ಆಧಾರ ನೀಡಿದೆ.  ಕೊರೊನಾ ಪಿಡುಗಿನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಆರ್‍ಬಿಐನಲ್ಲಿ ಹಣಕಾಸು ಕೊರತೆ ಇಲ್ಲ ಎಂದು ತಿಳಿಸಿದ ಅವರು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸತ್ತಿದ್ದು, ಆರ್ಥಿಕ ಚೇತರಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಇತರ ಕ್ರಮಗಳ ಬಗ್ಗೆ ಮಾಹಿತಿ ನೀಡಿದಅವರು, ಲಕ್ಷ್ಯಇಡಲಾದ ದೀರ್ಘಾವಧಿ ರೆಪೋ ಕಾರ್ಯಾಚರಣೆ (ಟಿಎಲ್‍ಟಿಆರ್‍ಒ) ಮೂಲಕ ಹೆಚ್ಚುವರಿಯಾಗಿ 50,000 ಕೋಟಿ ರೂ.ಗಳ ಹಣಕಾಸು ನೆರವು ನೀಡಿಕೆಯನ್ನು ಅರ್‍ಬಿಐ ಆರಂಭಿಸಿದೆ ಎಂದು ಅವರು ಹೇಳಿದರು.  ಕೋವಿಡ್-19 ವೈರಸ್ ದಾಳಿ ಸಂದರ್ಭದಲ್ಲಿ ಆರ್‍ಬಿಐ ಕೈಗೊಂಡ ಕೆಲವು ಸುಧಾರಣೆ ಕ್ರಮಗಳಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚುವರಿ ಹಣಕಾಸು ಸಂಪನ್ಮೂಲವಿದೆ. ಪ್ರಸ್ತುತ ತಲೆ ದೋರಿರುವ ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಹಣಕಾಸು ಕೊರತೆ ಇಲ್ಲ ಎಂದು ಅವರು ತಿಳಿಸಿದರು.

ದೇಶೀಯ ಒಟ್ಟು ಉತ್ಪನ್ನದಲ್ಲಿ (ಜಿಡಿಪಿ)ಶೇ.3.2ರಷ್ಟನ್ನು ಬ್ಯಾಂಕುಗಳಿಗೆ ಹಣಕಾಸು ಹರಿವು ನೆರವಿನ ರೂಪದಲ್ಲಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಜಿಡಿಪಿ ಬೆಳವಣಿಗೆ ಶೇ.1.9ರಷ್ಟು ಎಂದು ತಿಳಿಸಿದೆ. ಜಿ-20 ದೇಶಗಳಲ್ಲಿ ಇದು ಅಧಿಕವಾಗಿದೆ. ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದ ಆರ್ಥಿಕತೆ ಈ ಸನ್ನಿವೇಶದಲ್ಲಿ ಉತ್ತಮವಾಗಿದೆ ಎಂದು ಅವರು ಹೇಳಿದರು.

ಕೊರೊನಾ ಪಿಡುಗಿನಿಂದಾಗಿ ತಯಾರಿಕೆ, ಆಟೋಮೊಬೈಲ್ ಮತ್ತು ಇತರ ಕ್ಷೇತ್ರಗಳ ಮಾರಾಟ ವಹಿವಾಟು ಕುಂಠಿತವಾಗಿವೆ ಎಂದು ಹೇಳಿದ ಅವರು ಹಂತ ಹಂತವಾಗಿ ಪರಿಸ್ಥಿತಿ ಚೇತರಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ದೇಶದ ಬಹುತೇಕ ಎಲ್ಲ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಶೇ.91ರಷ್ಟು ಎಟಿಎಂಗಳು ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ ಎಂದು ಶಕ್ತಿಕಾಂತ್‍ದಾಸ್ ತಿಳಿಸಿದರು.

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿಯೂ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧ ಅವಧಿ ವೇಳೆಗೆ ಹಣದುಬ್ಬರ ಶೇ.4ಕ್ಕಿಂತ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.  ಕೊರೊನಾ ಪಿಡಿಗಿನಿಂದ ದೇಶದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಆರ್‍ಬಿಐ ತನ್ನಲ್ಲಿರುವ ಎಲ್ಲಾ ಹಣಕಾಸು ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.  ಈ ಸಂಕಷ್ಟ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಲಾಭಾಂಶ ನೀಡಿಕೆಯಿಂದ ಸದ್ಯಕ್ಕೆ ವಿನಾಯ್ತಿ ನೀಡಲಾಗಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin