ರಾಜ್ಯಪಾಲರ ಭಾಷಣಕ್ಕೆ ಆಡಳಿತ- ವಿಪಕ್ಷ ನಾಯಕರು ಪ್ರತಿಕ್ರಿಯಿಸಿದ್ದು ಹೀಗೆ

ಈ ಸುದ್ದಿಯನ್ನು ಶೇರ್ ಮಾಡಿ

# ನನ್ನ ಸರ್ಕಾರದ ಸಾಧನೆ ಓದಿದ್ದಾರೆ : ರಾಜ್ಯಪಾಲರಿಗೆ ಧನ್ಯವಾದ
ಬೆಂಗಳೂರು, ಫೆ.17- ನಮ್ಮ ಐದು ವರ್ಷಗಳ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಗುರುತಿಸಿ ಶ್ಲಾಘಿಸಿದ ಮತ್ತು ತಮ್ಮ ಸರ್ಕಾರದ ಸಾಧನೆಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ  ಬಿಜೆಪಿಯ ಯಡಿಯೂರಪ್ಪ ಸರ್ಕಾರಕ್ಕೆ ಧನ್ಯವಾದಗಳು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಟ್ವಿಟ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯನವರು, ನಾವು ಆಡಳಿತ ನಡೆಸಿದ ಐದು ವರ್ಷದ ಅವಧಿಯ ಸಾಧನೆಗಳನ್ನು ಗುರುತಿಸಿ ರಾಜ್ಯಪಾಲರ ಭಾಷಣದಲ್ಲಿ ಶ್ಲಾಘಿಸಲಾಗಿದೆ. ಆಡಳಿತಕ್ಕೆಬಂದ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ ಎಂಬುದನ್ನು ಭಾಷಣದಲ್ಲಿ ಪ್ರಾಮಾಣಿವಾಗಿ ಒಪ್ಪಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

# ಸದನದಲ್ಲಿ ಸರ್ಕಾರದ ಲೋಪ ಎತ್ತಿ ಹಿಡಿಯುತ್ತೇವೆ : 
ಬೆಂಗಳೂರು, ಫೆ.17- ವಿಧಾನಸಭೆಯಿಂದ ವಿಧಾನಪರಿಷತ್‍ನ ಒಂದು ಸ್ಥಾನದ ಉಪ ಚುನಾವಣೆಗೆ ಇಂದು ನಡೆಯುತ್ತಿರುವ ಮತದಾನದಲ್ಲಿ ಭಾಗವಹಿಸದಿರಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಹಾವಳಿಗೆ ಸಂಬಂಧಿಸಿದಂತೆ ಸರ್ಕಾರದ ಹಲವು ಲೋಪದೋಷಗಳು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಕಡಿತ ಮಾಡಿರುವುದು ಸೇರಿದಂತೆ ಹಲವು ಜ್ವಲಂತ ವಿಚಾರಗಳ ಬಗ್ಗೆ ಅಧಿವೇಶನಲ್ಲಿ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ ಎಂದರು.

ಜಿಟಿಡಿ ನಮ್ಮಲ್ಲಿದ್ದಾರೆಯೇ ?:
ಜೆಡಿಎಸ್ ಶಾಸಕಾಂಗ ಪಕ್ಷದ ತೀರ್ಮಾನಕ್ಕೆ ಅಗೌರವ ತೋರುವ ರೀತಿಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ ಚಲಾವಣೆ ಮಾಡಿದ್ದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.ಜಿ.ಟಿ.ದೇವೇಗೌಡ ನಮ್ಮಲ್ಲಿದ್ದಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಜೆಡಿಎಸ್‍ನಲ್ಲೇ ಇರುತ್ತಾರೋ ಅಥವಾ ಮುಂದೆ ಎಲ್ಲಿರುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.ಜೆಡಿಎಸ್ ಶಾಸಕಾಂಗ  ಪಕ್ಷದ ಸಭೆಗೆ ಮಾಜಿ ಸಚಿವರಾದ ಗುಬ್ಬಿ ಶ್ರೀನಿವಾಸ್, ಜಿ.ಟಿ.ದೇವೇಗೌಡ, ಪುಟ್ಟರಾಜು ಮತ್ತಿತರರು ಗೈರಾಗಿದ್ದರು.

# ರಾಜ್ಯಪಾಲರ ಭಾಷಣ ಸರ್ಕಾರದ ದಿಕ್ಸೂಚಿ : 
ಬೆಂಗಳೂರು, ಫೆ.17- ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ರಾಜ್ಯಪಾಲ ವಿ.ಆರ್.ವಾಲಾ ಅವರು ಇಂದು ಮಾಡಿದ ಭಾಷಣ ರಾಜ್ಯ ಸರ್ಕಾರದ ದಿಕ್ಸೂಚಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸಮರ್ಥಿಸಿಕೊಂಡರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸಾಂಪ್ರದಾಯಿಕವಾಗಿ ಮಾಡಿರುವ ಭಾಷಣದಲ್ಲಿ ಸರ್ಕಾರ ಪ್ರಗತಿಯ ದಿಕ್ಸೂಚಿ ಇದೆ. ರಾಜ್ಯ ಸರ್ಕಾರ ಚುನಾವಣೆಗಳ ನಡುವೆಯೂ ಅತ್ಯಲ್ಪವಧಿಯಲ್ಲಿ ಪ್ರಗತಿಯತ್ತ ಸಾಗುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಭರವಸೆಯ ಅಂಶಗಳು ವ್ಯಕ್ತವಾಗಿವೆ. ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

# ಹೊಸ ಯೋಜನೆ ಇಲ್ಲ ಹೊರಟ್ಟಿ ಬೇಸರ : 
ಬೆಂಗಳೂರು, ಫೆ.17- ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಯಾವುದೇ ಹೊಸ ಯೋಜನೆಗಳ ಪ್ರಸ್ತಾಪವಿಲ್ಲ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಈ ಹೊಸ ಯೋಜನೆ ಪ್ರಕಟವಾಗಿಲ್ಲ. ಆರು ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಜನಪರ ಕಾರ್ಯಕ್ಕೆ ಸಮಯ ನೀಡಿಲ್ಲ.
ನ್ಯಾಯಬದ್ಧ ಯೋಜನೆಗಳನ್ನು ರೂಪಿಸಿರುವುದು ಗಮನಕ್ಕೆ ಬಂದಿಲ್ಲ. ಯಾವುದೇ ರೀತಿಯ ಪ್ರಗತಿಪರ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದರು.

# ದಿಕ್ಕು ದೆಸೆ ಇಲ್ಲದ ಭಾಷಣ: ಎಸ್.ಆರ್.ಪಾಟಿಲ್ : 
ಬೆಂಗಳೂರು, ಫೆ.17- ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ರಾಜ್ಯಪಾಲ ವಿ.ಆರ್.ವಾಲಾ ಅವರು ಇಂದು ಮಾಡಿದ ಭಾಷಣ ದಿಕ್ಕು ದೆಸೆಯಿಲ್ಲದ ಭಾಷಣವಾಗಿದೆ ಎಂದು ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಟೀಕಿಸಿದರು., ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಮಹದಾಯಿ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂಧು ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದರು.
ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಹೊಸ ಅಂಶಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Facebook Comments

Sri Raghav

Admin