ಐತಿಹಾಸಿಕ ಅಯೋಧ್ಯೆ ತೀರ್ಪು ಕುರಿತು ಯಾರು ಯಾರು ಏನು ಹೇಳಿದರು..?

ಈ ಸುದ್ದಿಯನ್ನು ಶೇರ್ ಮಾಡಿ

# ಸುಪ್ರೀಂ ತೀರ್ಪು ಸ್ವಾಗತಾರ್ಹ : ಎಚ್.ಕೆ.ಕುಮಾರಸ್ವಾಮಿ
ಅಯೋಧ್ಯೆಯ ವಿವಾದಿತ ರಾಮಜನ್ಮ ಭೂಮಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು. ವಿವಾದಿತ ಸ್ಥಳದ ಬಗ್ಗೆ ಸುಪ್ರೀಂಕೋರ್ಟ್ ಸರ್ವಾನುಮತದ ತೀರ್ಪನ್ನು ನೀಡಿದೆ. ನ್ಯಾಯಾಲಯ ನೀಡಿರುವ ತೀರ್ಪು ಸಮಾಧಾನ ತಂದಿದೆ ಎಂದು ಹೇಳಿದರು. ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲಾ ನಾಗರಿಕರು ಗೌರವಿಸಬೇಕಿದೆ. ನಾಗರಿಕರು ಶಾಂತಿ ಕಾಪಾಡಬೇಕೆಂದು ಎಚ್.ಕೆ.ಕುಮಾರಸ್ವಾಮಿ ಮನವಿ ಮಾಡಿದರು.

# ಅತ್ಯಂತ ಗೌರವದಿಂದ ಸ್ವಾಗತಿಸೋಣ : ಲಕ್ಷ್ಮಣ ಸವದಿ 
ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿವೇಚನೆಯಿಂದ ವೀಚಾರಣೆ ನಡೆಸಿ ತೀರ್ಪು ನೀಡಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆ ವಿವಾದ ಬಗೆಹರಿಸುವಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಇದನ್ನು ಅತ್ಯಂತ ಗೌರವದಿಂದ ಸ್ವಾಗತಿಸೋಣ. ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಪವಿತ್ರ ಸ್ಥಾನವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಎಲ್ಲಾ ಧರ್ಮಿಯರು ಸರ್ವಸಮ್ಮತ್ತವಾಗಿ ತೀರ್ಪನ್ನು ಸ್ವಾಗತಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಹೋಗಬೇಕೆಂದು ಮನವಿ ಮಾಡಿದರು.

# ಅತ್ಯಂತ ಪವಿತ್ರ ತೀರ್ಪು
ಅಯೋಧ್ಯೆ ವಿವಾದದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅತ್ಯಂತ ಪವಿತ್ರವಾದದ್ದು ಎಂದು ಖ್ಯಾತ ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ. ಈ ಐತಿಹಾಸಿಕ ತೀರ್ಪು ಎರಡೂ ಸಮುದಾಯದವರೆಗೂ ನಿರಾಳ ಭಾವನೆ ಮೂಡಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.  ದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀರ್ಘ ಕಾಲಾವಧಿಯ ಈ ಪ್ರಕರಣ ಕೊನೆಗೂ ತಾರ್ತಿಕ ಅಂತ್ಯ ಕಂಡಿದೆ. ತೀರ್ಪನ್ನು ನಾನು ಮುಕ್ತಕಂಠದಿಂದ ಸ್ವಾಗತಿಸುತ್ತೇನೆ. ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಈ ತೀರ್ಪನ್ನು ಎಲ್ಲರೂ ಗೌರವಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

# ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ : ಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ನ.9- ರಾಮ ಜನ್ಮ ಭೂಮಿ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಗೌರವಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ. ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ನಮ್ಮ ದೇಶದ ಸಿದ್ದಂತವನ್ನು ಎಲ್ಲರೂ ಪಾಲಿಸೋಣ . ನಾವೆಲ್ಲರೂ ಎಂದಿನಂತೆ ಪರಸ್ಪರ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ ಎಂದು ಹೇಳಿದ್ದಾರೆ. ಅಂದಹಾಗೆ ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ. ರಾಮ ಮಂದಿರದ ಜತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

# ಸುಪ್ರೀಂ ತೀರ್ಪು ಗೌರವಿಸುತ್ತೇವೆ, ಆದರೆ ಆದೇಶ ತೃಪ್ತಿ ನೀಡಿಲ್ಲ : ಸುನ್ನಿ ವಕ್ಫ್ ಮಂಡಳಿ
ನವದೆಹಲಿ, ನ.9-ಅಯೋಧ್ಯೆ ರಾಮಮಂದಿರ-ಬಾಬರಿ ಮಸೀದಿ ನಿವೇಶನ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ಸುಪ್ರೀಂಕೋರ್ಟ್‍ನ ಆದೇಶ ತೃಪ್ತಿ ನೀಡಿಲ್ಲ ಎಂದು ಈ ವಿವಾದದ ಪ್ರಮುಖ ಪಕ್ಷಗಾರರಲ್ಲಿ ಒಬ್ಬರಾದ ಸುನ್ನಿ ವಕ್ಫ್ ಮಂಡಳಿ ಪ್ರತಿಕ್ರಿಯಿಸಿದೆ. ತೀರ್ಪಿನ ನಂತರ ಸುಪ್ರೀಂಕೋರ್ಟ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಳಿ ಪರ ವಕ್ತಾರ ಜಿಲಾನಿ, ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪ್ರತ್ಯೇಕ ಭೂಮಿ ನೀಡಿರುವ ತೀರ್ಪು ಸರಿಯಲ್ಲ. ನಮಗೆ ಇದು ಅಸಮಾಧಾನವಾಗಿದೆ. ಇದನ್ನು ನ್ಯಾಯ ನಿರ್ಣಯ ಎಂದು ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.ಸುಪ್ರೀಂಕೋರ್ಟ್ ತೀರ್ಪಿನ ಪರಿಪೂರ್ಣ ಅಂಶವನ್ನು ಸಮಗ್ರವಾಗಿ ಪರಾಮರ್ಶಿಸಿ ನಂತರ ಈ ಬಗ್ಗೆ ಮಂಡಳಿಯು ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು. ಈ ತೀರ್ಪಿನ ಹಿನ್ನೆಲೆಯಲ್ಲಿ ಯಾರೂ ಉದ್ವೇಗಕ್ಕೆ ಒಳಗಾಗುತ್ತಿಲ್ಲ. ಕೋಮು ಸಾಮರಸ್ಯ ಮತ್ತು ಶಾಂತಿ ಕಾಪಾಡುವ ಅಗತ್ಯವಿದೆ ಎಂದು ಅವರು ಮಂಡಳಿ ಪರವಾಗಿ ಮನವಿ ಮಾಡಿದರು.

# ತೀರ್ಪು ಸ್ವಾಗತಿಸಿದ ಮೋಹನ್​​ ಭಾಗವತ್ :
ಬಹುನೀರಿಕ್ಷಿತ ಅಯೋಧ್ಯೆ ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ನೀಡಿರುವ ತೀರ್ಪು ಸ್ವಾಗತಿಸುತ್ತೇನೆ ಎಂದು ಆರ್​ಎಸ್​​ಎಸ್ ಮುಖ್ಯಸ್ಥ ಮೋಹನ್​​ ಭಾಗವತ್​​​​ ಹೇಳಿದ್ದಾರೆ. ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬೆನ್ನಲ್ಲೇ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​​ ಭಾಗವತ್​​​ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತಾಡಿದ ಇವರು, “ಈ ದೇಶದ ಭಾವನೆಯನ್ನು ಗೌರವಿಸಲಾಗಿದೆ. ಸತ್ಯ ಎತ್ತಿಹಿಡಿದ ಸುಪ್ರೀಂಕೋರ್ಟ್​ಗೆ ಧನ್ಯವಾದಗಳು. ಶತಮಾನದ ವಿವಾದ ಕೊನೆಗೊಳಿಸಲಾಗಿದೆ. ಇದು ಗೆಲುವು-ಸೋಲಿನ ತೀರ್ಪಲ್ಲ. ಸಾತ್ವಿಕ ರೀತಿಯಲ್ಲಿ ಖುಷಿ ವ್ಯಕ್ತಪಡಿಸೋಣ. ನ್ಯಾಯಲಯದ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಟ್ರಸ್ಟ್​​ ರಚನೆ ಮಾಡಲಿದೆ. ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ ಆಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

# ಈ ದಿನಕ್ಕಾಗಿ ಜನ ಕಾಯುತ್ತಿದ್ದರು : ಡಿ.ವಿ.ಸದಾನಂದಗೌಡ
ಬೆಂಗಳೂರು, ನ.9- ಕಳೆದ ಆರು ವರ್ಷಗಳಿಂದ ದೇಶದ ಜನ ಈ ದಿನಕ್ಕಾಗಿ ಕಾಯುತ್ತಿದ್ದರು. ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪನ್ನು ಗೌರವಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.ಇಂದಿನ ತೀರ್ಪು ಯಾವುದೇ ಜಾತಿ, ಧರ್ಮದ ವಿರುದ್ಧದ ತೀರ್ಪಲ್ಲ. ನಮ್ಮ ಮುಸಲ್ಮಾನರ ಪ್ರಾರ್ಥನೆಗೂ ಜಾಗ ನೀಡಲಾಗಿದೆ. ಎಲ್ಲರೂ ಈ ತೀರ್ಪನ್ನು ಸ್ವಾಗತಿಸಿದ್ದು, ಕೇಂದ್ರ ಸಚಿವರಾಗಿ ನಾನು ತೀರ್ಪನ್ನು ಗೌರವಿಸುತ್ತೇನೆ ಎಂದರು.

# ಹಿಂದು-ಮುಸ್ಲಿಂರು ಅಣ್ಣ-ತಮ್ಮಂದಿರಂತೆ ಬದುಕಬೇಕು  : ಶೋಭಾ ಕರಂದ್ಲಾಜೆ
ಬೆಂಗಳೂರು, ನ.9- ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದು, ಹಿಂದು-ಮುಸ್ಲಿಂರು ಅಣ್ಣ-ತಮ್ಮಂದಿರಂತೆ ಬದುಕಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಲಕ್ಷಾಂತರ ಮಂದಿ ರಾಮಮಂದಿರಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶದಲ್ಲಿ ನ್ಯಾಯ ಇದೆ ಎಂಬುದು ತೀರ್ಪಿನಿಂದ ಸಾಬೀತಾಗಿದೆ ಎಂದರು. ಶತಮಾನದ ಹೋರಾಟದ ಫಲವಾಗಿ ಇಂದು ಎರಡು ಧರ್ಮದವರಿಗೂ ನ್ಯಾಯ ಲಭಿಸಿದೆ. ಜನ ಚಾತಕ ಪಕ್ಷಿಯಂತೆ ಈ ದಿನಕ್ಕಾಗಿ ಕಾಯುತ್ತಿದ್ದರು. ಇದೊಂದು ಐತಿಹಾಸಿಕ ತೀರ್ಪು. ರಾಜ್ಯದ ಜನ ಶಾಂತಿಯಿಂದ ವರ್ತನೆ ಮಾಡಬೇಕು. ಎರಡೂ ಕೋಮಿನ ಜನ ಒಟ್ಟಾಗಿ ಬದುಕಬೇಕು ಎಂದು ತಿಳಿಸಿದ್ದಾರೆ.

# 5 ಎಕರೆ ಜಮೀನು ಭಿಕ್ಷೆ ನಮಗೆ ಬೇಡ : ಓವೈಸಿ
ಯೋಧ್ಯಾ ರಾಮಮಂದಿರ-ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ತೃಪ್ತಿದಾಯಕವಾಗಿರಲಿಲ್ಲ ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು. ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದು, ನಾವು ನಮ್ಮ ಹಕ್ಕಿಗೋಸ್ಕರ ಹೋರಾಟ ಮಾಡುತ್ತಿದ್ದೆವು. ನಮಗೆ ಮಸೀದಿ ಕಟ್ಟಲು ಹಣವಿಲ್ಲವೆಂದಲ್ಲ. ನೀವು ಕೊಟ್ಟಿರುವ 5 ಎಕರೆ ಜಮೀನಿನ ಭಿಕ್ಷೆ ನಮಗೆ ಬೇಡ ಎಂದರು. ಸುಪ್ರೀಂಕೋರ್ಟ್ ತೀರ್ಪು ನಾವು ಅಂದುಕೊಂಡಂತೆ ಬಂದಿಲ್ಲ, ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಆದರೆ ಈ 5 ಎಕರೆ ಜಮೀನಿನ ಭಿಕ್ಷೆ ನಮಗೆ ಬೇಡ ಎಂದು ಹೇಳಿದ್ದಾರೆ. ನಮ್ಮ ಲೀಗಲ್ ಕಮಿಟಿಯು ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸಲಿದೆ. ನಾವು ಧ್ವಂಸವಾಗಿರುವುದನ್ನು ಮತ್ತೆ ನಿರ್ಮಾಣ ಮಾಡುವ ಕೆಲಸ ಮಾಡಲಿದ್ದೇವೆ. ಉತ್ತರ ಪ್ರದೇಶದಲ್ಲಿ ಒಂದು ಮಸೀದಿ ನಿರ್ಮಿಸುವ ತಾಕತ್ತು ನಮಗೆ ಇದೆ. ಆದರೆ ಇಷ್ಟು ದಿನ ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೆವು ಎಂದಿದ್ದಾರೆ.

# ತೀರ್ಪನ್ನು ಮರು ಪ್ರಶ್ನಿಸುವುದಿಲ್ಲ :
ಅಯೋಧ್ಯೆ ಭೂವಿವಾದ ಕುರಿತಾಗಿ ಸುಪ್ರೀಂಕೋರ್ಟ್​ ನೀಡಿದ ಐತಿಹಾಸಿಕ ತೀರ್ಪಿನ ಬಗ್ಗೆ ಸಮಾಧಾನವಿದ್ದು, ತೀರ್ಪನ್ನು ಮರು ಪ್ರಶ್ನಿಸುವುದಿಲ್ಲ ಎಂದು ಅರ್ಜಿದಾರರಲ್ಲಿ ಒಬ್ಬರಾಗಿರುವ ಇಕ್ಬಾಲ್​ ಅನ್ಸಾರಿ ಶನಿವಾರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ನ್ಯಾಯಾಲಯ ನೀಡಿದ ತೀರ್ಪನ್ನು ಸ್ವಾಗತಿಸುತ್ತೇವೆ. ದೀರ್ಘಕಾಲದ ವರೆಗೆ ಬಾಕಿ ಉಳಿದಿದ್ದ ಈ ಪ್ರಕರಣಕ್ಕೆ ಕೊನೆಗೂ ತೆರೆ ಎಳೆದಿದ್ದೇ ಬಹುದೊಡ್ಡ ಸಂತಸವಾಗಿದೆ ಎಂದರು. ಮುಂದುವರಿದು ಮಾತನಾಡಿದ ಅವರು ನಮ್ಮ ಕಡೆಯಿಂದ ನಾವು ತೀರ್ಪನ್ನು ಮರು ಪ್ರಶ್ನಿಸುವುದಿಲ್ಲ. ತೀರ್ಪಿನ ಬಗ್ಗೆ ಸಮಾಧಾನವಿದೆ. ನ್ಯಾಯಾಲಯ ಏನೇ ಹೇಳಿದರೂ ಅದು ಸರಿಯಾಗೇ ಇರುತ್ತದೆ ಎಂದು ನಾವು ಯಾವಾಗಲೂ ಹೇಳುತ್ತಾ ಬಂದಿದ್ದೇವೆ ಎಂದು ಪುನರುಚ್ಛರಿಸಿದರು.

# ಕೇಂದ್ರ ಸರಕಾರ ಲಾಭ ಪಡೆದುಕೊಳ್ಳಬಾರದು : ಉದ್ಧವ್ ಠಾಕ್ರೆ :
ಅಯೋಧ್ಯೆ ವಿವಾದದ ಕುರಿತಾದ ಸುಪ್ರೀಂ ಕೋರ್ಟಿನ ತೀರ್ಪಿನ ಶ್ರೇಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. “ರಾಮ ಮಂದಿರ ನಿರ್ಮಾಣ ಕುರಿತಂತೆ ಕಾನೂನು ರಚಿಸುವಂತೆ ನಾವು ಸರಕಾರವನ್ನು ಕೇಳಿಕೊಂಡಿದ್ದೆವು. ಆದರೆ ಸರಕಾರ ಅದನ್ನು ಮಾಡಲಿಲ್ಲ. ಈಗ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಸರಕಾರ ಅದರ ಶ್ರೇಯ ಪಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಉದ್ಧವ್ ಹೇಳಿದರು.

# ಶಾಂತಿಗೆ ಕರೆ ನೀಡಿದ ಡಿ.ಕೆ‌.ಶಿವಕುಮಾರ್
ಸದಾಶಿವನಗರದ ನಿವಾಸದಲ್ಲಿ ಅಯೋಧ್ಯೆ ತೀರ್ಪು ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಎಲ್ಲರು ಶಾಂತಿ, ಸೌಹಾರ್ದತೆ ಕಾಪಾಡಬೇಕು. ಅಯೋಧ್ಯೆ ತೀರ್ಪು ವಿಚಾರ ಬಗ್ಗೆ ತಾವು ಮಾತನಾಡುವುದಿಲ್ಲ‌ ಎಂದರು.

# ವಿಜಯೋತ್ಸವ ಆಚರಿಸಬಾರದು : ರೇಣುಕಾಚಾರ್ಯ 
ದೇಶದ ಜನತೆ ಕಾತುರದಿಂದ ಕಾಯುತ್ತಿದ್ದ ಅಯೋಧ್ಯಾ ತೀರ್ಪು ಇಂದು ಹೊರಬಿದ್ದಿದ್ದು, ಈ ತೀರ್ಪು ಐತಿಹಾಸಿಕ ತೀರ್ಪಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ಕೆಬಿ ಬಡಾವಣೆಯ 25ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಎಸ್.ಟಿ,.ವೀರೇಶ್ ಪರ ಮತಯಾಚಿಸಲು ಬಂದಂತ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 27 ವರ್ಷಗಳಿದ ವಿವಾದಿತ ಸ್ಥಳವಾಗಿದ್ದ ಅಯೋಧ್ಯ ಇಂದು ತೀರ್ಪು ಹೊರಬಂದಿದ್ದು ಸ್ವಾಗತರ್ಹ.

ಬಹುದಿನಗಳಿಂದ ರಾಮ ಮಂದಿರ ಕಟ್ಟಬೇಕೆಂಬ ಕನಸು ಕಂಡಿದ್ದರು ಸಂಘರ್ಷದಿಂದ ಸಾಧ್ಯವಾಗಿರಲಿಲ್ಲ, ಎರಡು ಕಡೆಯಿಂದ ಪರವಿರೋಧವಿದ್ದರು ಚರ್ಚೆಯಾಗಿ ಇಂದು ಅಂತಿಮವಾಗಿ ಆದೇಶ ಹೊರಬಿದ್ದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿರುವುದರಿಂದ ಯಾರ ಪರವಾದ ತೀರ್ಪು ಬಂದರು ವಿಜಯೋತ್ಸವ ಆಚರಿಸಬಾರದು ಎಂದು ಪಕ್ಷ ತೀರ್ಮಾನಕೈಗೊಳ್ಳಲಾಗಿತ್ತು. ಅದರಂತೆ ನಾವು ಬದ್ದರಾಗಿದ್ದೇವೆ. ಹಿಂದು ಮುಸ್ಲಿಮರು ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಸಾರ್ವಜನಿಕರು ಶಾಂತ ರೀತಿಯಾಗಿ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು.

Facebook Comments

Sri Raghav

Admin