ಒಎಲ್‍ಎಕ್ಸ್’ನಲ್ಲಿ ಬೈಕ್ ಕೊಳ್ಳೋ ಮೊದಲು ಈ ಸ್ಟೋರಿ ಓದಿ..!

ಈ ಸುದ್ದಿಯನ್ನು ಶೇರ್ ಮಾಡಿ

OLX-Roberrs
ಬೆಂಗಳೂರು, ಜು.3-ಒಎಲ್‍ಎಕ್ಸ್ನಲ್ಲಿ ಹಾಕಿದ್ದ ಜಾಹೀರಾತು ನೋಡಿ ವಂಚಿಸಿದ್ದ ವಂಚಕನನ್ನು ಯಲಹಂಕ ಪೊಲೀಸರು ಬಂಧಿಸಿ 2.50 ಲಕ್ಷ ರೂ. ಮೌಲ್ಯದ 3
ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಂಗೇರಿ ಉಪನಗರದ ಶಾಂತಿ ನಿವಾಸ್ ಲೇಔಟ್, ಶಿರ್ಕಿ ಅಪಾರ್ಟ್‍ಮೆಂಟ್ ಸಮೀಪದ ನಿವಾಸಿ ಭರತ್ (27) ಬಂಧಿತ ವಂಚಕ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಭಟ್ಟರ ಮಾರೇನಹಳ್ಳಿ ಗ್ರಾಮದ ನಿವಾಸಿ ಪ್ರೀತಮ್ ಎಂಬುವವರು ತಮ್ಮ ಬಜಾಜ್ ಪಲ್ಸರ್ ಬೈಕ್‍ಆನ್ನು ಮಾರಾಟ ಮಾಡುವ ಉದ್ದೇಶದಿಂದ ಒಎಲ್‍ಎಕ್ಸ್ನಲ್ಲಿ ಜಾಹೀರಾತು ನೀಡಿದ್ದರು.

ಈ ಜಾಹೀರಾತು ಗಮನಿಸಿದ ಭರತ್, ಮೋಟಾರ್ ಸೈಕಲ್‍ಅನ್ನು ಖರೀದಿಸುವುದಾಗಿ ಪ್ರೀತಮ್ ಮೊಬೈಲ್‍ಗೆ ಕರೆ ಮಾಡಿ ತಿಳಿಸಿದ್ದಾನೆ. ಅದರಂತೆ 2017 ಮೇ 13ರಂದು ಬೆಳಗ್ಗೆ 11.30ಕ್ಕೆ ಯಲಹಂಕ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರೀತಮ್ ಬೈಕ್‍ನೊಂದಿಗೆ ಬಂದಾಗ ವಂಚಕ ಭರತ್ ಈ ಬೈಕ್‍ಅನ್ನು 45,500ರೂ.ಗೆ ಖರೀದಿಸುವುದಾಗಿ ತಿಳಿಸಿದಾಗ, ಪ್ರೀತಮ್ ಒಪ್ಪಿಕೊಂಡಿದ್ದಾನೆ.

ನಂತರ ವಂಚಕ ಭರತ್ ಟೆಸ್ಟ್‍ಡ್ರೈವ್ ಮಾಡಿ ನೋಡುತ್ತೇನೆಂದು ಹೇಳಿ ಬೈಕ್ ತೆಗೆದುಕೊಂಡು ಹೋದಾತ ಮತ್ತೆ ಹಿಂದಿರುಗಿ ಬಂದಿಲ್ಲ. ಮೊಬೈಲ್ ಕರೆ ಮಾಡಿದರೂ ಸ್ವಿಚ್ ಆಫ್ ಆಗಿತ್ತು.  ಇದರಿಂದ ಮೋಸ ಹೋಗಿರು ವುದನ್ನು ಅರಿತ ಪ್ರೀತಮ್ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ಸ್‍ಪೆಕ್ಟರ್ ಮಂಜೇಗೌಡ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ವಂಚಕ ಭರತ್‍ನನ್ನು ಬಂಧಿಸಿ ಮೂರು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin