ಫೇಸ್ಬುಕ್ ನಲ್ಲಿ ಉಪೇಂದ್ರ ಹಾಕಿದ್ದ ಪೋಸ್ಟ್‌ಗೆ ಅಭಿಮಾನಿಗಳಿಂದ ಕೌಂಟರ್-ಎನ್‌ಕೌಂಟರ್‌..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.7-ಹೈದರಾಬಾದ್‍ನಲ್ಲಿ ದಿಶಾ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿರುವ ಪೊಲೀಸರ ನಿರ್ಧಾರ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಹಾಕಿದ ಫೇಸ್‍ಬುಕ್‍ನ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ನಾಲ್ವರು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟು ಹಾಕಿದ್ದಾರೋ ಇಲ್ಲವೇ ಇದರ ಹಿಂದೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೋ? ಈ ರೀತಿಯ ಎನ್‍ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸ್‍ನಲ್ಲಿ ಯಾಕಾಗುವುದಿಲ್ಲ? ಕೋರ್ಟ್‍ನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್‍ಕೌಂಟರ್ ಇನ್ನು ಮುಂದೆ ಪ್ರಭಾವಶಾಲಿ ಭ್ರಷ್ಟ ರೇಪಿಸ್ಟ್‍ಗಳಿಗೆ ರತ್ನಗಂಬಳಿಯಾಗುವುದೇ ಎಂದು ಉಪೇಂದ್ರ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಸುಮಾರು 3 ಸಾವಿರ ಜನ ಪ್ರತಿಕ್ರಿಯಿಸಿದ್ದಾರೆ. ಕೆಲವರು ಉಪೇಂದ್ರ ಅವರನ್ನು ಟೀಕಿಸಿದರೆ, ಇನ್ನು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಅವರೇ, ಡಾಗರ್ ಪದದ ಸೃಷ್ಟಿಕರ್ತ. ಇವರಿಂದ ಇನ್ನೆಂಥ ಅಭಿಪ್ರಾಯ ನಿರೀಕ್ಷಿಸಲು ಸಾಧ್ಯ ಎಂದು ಕೆಲವರು ಕಿಡಿಕಾರಿದರೆ, ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡಬೇಡಿ. ನೀವು ರೀಲ್ ಹೀರೋ ಮಾತ್ರ, ರಿಯಲ್ ಹೀರೋ ಅಲ್ಲ ಎಂದು ತೋರಿಸಿಬಿಟ್ಟಿರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಡುವುದು ಅನಾಚಾರ, ಮನೆ ಮುಂದೆ ಬೃಂದಾವನ ಎಂಬಂತಿದೆ ನಿಮ್ಮ ಮಾತು. ನಿಮ್ಮ ಚಿತ್ರಗಳಲ್ಲಿ ಅಶ್ಲೀಲ ದೃಶ್ಯಗಳೇ ಹೆಚ್ಚಿರುತ್ತವೆ ಎಂದು ಕೆಲವರು ಉಪೇಂದ್ರ ನಟಿಸಿರುವ ಚಿತ್ರದ ಸ್ಟಿಲ್‍ಗಳನ್ನು ಪೋಸ್ಟ್ ಮಾಡಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಇನ್ನು ಕೆಲವರು ಉಪೇಂದ್ರ ಅವರ ಕುಟುಂಬದವರನ್ನು ಪ್ರಸ್ತಾಪಿಸಿ ಟೀಕಿಸುವ ಅತಿರೇಕ ಪ್ರದರ್ಶಿಸಿದ್ದಾರೆ.

ಇದಕ್ಕೆ ಉಪೇಂದ್ರ ಅವರ ಬೆಂಬಲಿಗರು ಪ್ರತ್ಯುತ್ತರಿಸಿದ್ದು, ಉಪೇಂದ್ರ ಅವರ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪ್ರಭಾವಿಗಳು ಭಾಗಿಯಾಗಿರುವ ಪ್ರಕರಣಗಳಲ್ಲೂ ಈ ರೀತಿಯ ಎನ್‍ಕೌಂಟರ್ ಸಾಧ್ಯವೇ? ಎಂದು ತಿರುಗೇಟು ನೀಡಿದ್ದು, ಉಪೇಂದ್ರ ಅವರ ಮಾತುಗಳಿಗೆ ಬಲವಾದ ಸಮರ್ಥನೆಯನ್ನು ನೀಡಿದ್ದಾರೆ.

 

Facebook Comments

Sri Raghav

Admin