ಮಾತೃ ಪಕ್ಷ ತೊರೆದು, ಶಾಸಕ ಸ್ಥಾನ ತ್ಯಾಗ ಮಾಡಿದ ಹಲವರು ಅತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.4- ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಮತ್ತೆ ಪ್ರತಿಷ್ಠಾಪನೆ ಮಾಡುವ ಸಲುವಾಗಿ ಮಾತೃ ಪಕ್ಷ ತೊರೆದು, ಶಾಸಕ ಸ್ಥಾನ ತ್ಯಾಗ ಮಾಡಿ ಬಂದಿದ್ದ ಏಳು ಮಂದಿ ವಲಸಿಗರ ರಾಜಕೀಯ ಭವಿಷ್ಯ ಮತ್ತೆ ತ್ರಿಶಂಕು ಸ್ಥಿತಿಗೆ ಸಿಲುಕಿದೆ. ಯಡಿಯೂರಪ್ಪ ಅವರ ನಾಯಕತ್ವ ನಂಬಿಕೊಂಡು ಕಾಂಗ್ರೆಸ್‍ನ ರಮೇಶ್ ಜಾರಕಿಹೊಳಿ, ಪ್ರತಾಪ್‍ಗೌಡ ಪಾಟೀಲ್, ಬೈರತಿ ಬಸವರಾಜ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಮಹೇಶ್ ಕುಮಟಳ್ಳಿ, ಎಂ.ಟಿ.ಬಿ.ನಾಗರಾಜ್, ಆನಂದ್‍ಸಿಂಗ್, ಶಿವರಾಮ್ ಹೆಬ್ಬಾರ್, ಮುನಿರತ್ನ, ರೋಷನ್ ಬೇಗ್, ಕೆ.ಸುಧಾಕರ್, ಶ್ರೀಮಂತಪಾಟೀಲ್,

ಕೆ.ಗೋಪಾಲಯ್ಯ, ಜೆಡಿಎಸ್‍ನ ಎಚ್.ವಿಶ್ವನಾಥ್, ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂದಿದ್ದರು. ಪಕ್ಷೇತರರಾದ ಆರ್.ಶಂಕರ್, ಎಚ್.ನಾಗೇಶ್ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ತೊರೆದು ಬಿಜೆಪಿಗೆ ಬೆಂಬಲ ವ್ಯಕ್ತ ಪಡಿಸಿದ್ದರು. ಇವರಲ್ಲಿ ರೋಷನ್ ಬೇಗ್ ಮತ್ತು ಪಕ್ಷೇತರರು ಬಿಜೆಪಿ ಸೇರಿರಲಿಲ್ಲ. ಉಳಿದಂತೆ ಎಲ್ಲರೂ ಬಿಜೆಪಿ ಸೇರಿದ್ದರು.

ಅವರ ಪೈಕಿ ಬೈರತಿ ಬಸವರಾಜ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಎಂ.ಟಿ.ಬಿ.ನಾಗರಾಜ್, ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಮುನಿರತ್ನ, ಕೆ.ಸುಧಾಕರ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ಅವರು ಸಚಿವರಾಗಿದ್ದಾರೆ. ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀಮಂತಪಾಟೀಲ್, ಆರ್.ಶಂಕರ್ ಅವರಿಗೆ ಕೊಕ್ ನೀಡಲಾಗಿದೆ.ಈ ಮೊದಲು ಪಕ್ಷೇತರರಾಗಿದ್ದ ಆರ್.ಶಂಕರ್ ಪಕ್ಷಾಂತರ ಕಾಯ್ದೆಯಡಿ ಶಾಸಕ ಸ್ಥಾನ ಕಳೆದುಕೊಂಡಿದ್ದರು, ಅವರಿಗೆ ಉಪಚುನಾವಣೆಯಲ್ಲಿ ಸ್ಫರ್ಧಿಸಲು ಟಿಕೆಟ್ ನಿರಾಕರಿಸಲಾಗಿತ್ತು.

ಬದಲಾಗಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಯಡಿಯೂರಪ್ಪ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಈಗ ಅವರನ್ನು ಸಂಪುಟದಿಂದ ದೂರ ಇಡಲಾಗಿದೆ. ಆರ್.ನಾಗೇಶ್ ಅವರನ್ನು ಯಡಿಯೂರಪ್ಪ ಅವರ ಕಾಲದಲ್ಲೇ ಸಂಪುಟದಿಂದ ಕೈ ಬಿಟ್ಟು ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ರೋಷನ್ ಬೇಗ್ ಐಎಂಎ ಹಗರಣದಲ್ಲಿ ಸಿಲುಕಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಪಕ್ಷಕ್ಕೆ ಕೂಡ ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಅವರು ಉಪಚುನಾವಣೆಯಲ್ಲೂ ಸ್ಪರ್ಧಿಸಿರಲಿಲ್ಲ. ಕೊನೆಗೆ ಸಿಬಿಐ ತನಿಖೆಯ ವೇಳೆ ರೋಷನ್ ಬೇಗ್ ಬಂಧನವಾಗಿತ್ತು.

ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆರೋಪ ಮುಕ್ತನಾಗಿ ಶೀಘ್ರವೇ ಸಂಪುಟ ಸೇರುತ್ತೇನೆ ಎಂದುಕೊಂಡಿದ್ದ ಅವರು ಅವಕಾಶ ವಂಚಿತರಾಗಿದ್ದಾರೆ. ರಾಜಕೀಯದ ಬಗ್ಗೆ ಜಿಗುಪ್ಸೆ ಬಂದಿದೆ. ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂಬ ವೈರಾಗ್ಯದ ಮಾತುಗಳನ್ನು ರಮೇಶ್ ಜಾರಕಿಹೊಳಿ ಆಡಿದ್ದರು. ಕೊನೆಗೆ ಹಿರಿಯರ ಸಮಾಧಾನದಿಂದ ರಾಜಕೀಯದಲ್ಲಿ ಮುಂದುವರೆದಿದ್ದಾರೆ.

ಎಚ್.ವಿಶ್ವನಾಥ್ ಹುಣಸೂರಿನಿಂದ, ಪ್ರತಾಪಗೌಡ ಪಾಟೀಲ್ ಮಸ್ಕಿ, ಎಂ.ಟಿ.ಬಿ.ನಾಗರಾಜ್ ಹೊಸಕೋಟೆ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ. ಎಂ.ಟಿ.ಬಿ.ನಾಗರಾಜ್ ಸೋಲು ಕಂಡ ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಸಚಿವರಾಗಿದ್ದಾರೆ. ವಿಶ್ವನಾಥ್ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕಷ್ಟೆ ತೃಪ್ತಿ ಪಟ್ಟುಕೊಂಡು, ಯಡಿಯೂರಪ್ಪ ಅವರ ವಿರುದ್ದ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದರು. ಪ್ರತಾಪ್‍ಗೌಡ ಪಾಟೀಲ್ ನಿಗಮ ಮಂಡಳಿ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ರಮೇಶ್ ಜಾರಕಿಹೊಳಿ ಅವರ ಆಪ್ತರಾಗಿದ್ದ ಮಹೇಶ್ ಕುಮಟಳ್ಳಿ ಶಾಸಕರಾಗಿದ್ದರೂ ಮೂರು ಬಾರಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದಾರೆ.ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಒಂಬತ್ತು ತಿಂಗಳ ಬಳಿಕ ಮುನಿರತ್ನ ಈಗ ಸಚಿವರಾಗು ತ್ತಿದ್ದಾರೆ. ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀಮಂತಪಾಟೀಲ್ ಮಾಜಿಯಾಗಿದ್ದಾರೆ.

ಈಗ ಯಡಿಯೂರಪ್ಪ ಅವರು ಅಧಿಕಾರದಲ್ಲಿಲ್ಲ, ಅವರನ್ನು ನಂಬಿ ಬಂದಿದ್ದ ರಮೇಶ್ ಜಾರಕಿಹೊಳಿ, ಪ್ರತಾಪ್‍ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ರೋಷನ್‍ಬೇಗ್, ಶ್ರೀಮಂತಪಾಟೀಲ್, ಎಚ್.ವಿಶ್ವನಾಥ್, ಆರ್.ಶಂಕರ್, ಎಚ್.ನಾಗೇಶ್ ಅವರಿಗೆ ಸಚಿವ ಸ್ಥಾನ ಸಿಗದೆ ರಾಜಕೀಯ ಭವಿಷ್ಯ ಅಡ್ಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

Facebook Comments