ದೇಶದಲ್ಲಿ ಶೇ.60.73ರಷ್ಟು ಕೊರೋನಾ ಸೋಂಕಿತರು ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.3-ದೇಶದಲ್ಲಿ ಕೊರೊನಾ ವೈರಸ್ ಉಗ್ರಸ್ವರೂಪದ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತು ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ನಿನ್ನೆ ಮಧ್ಯರಾತ್ರಿವರೆಗೆ ಭಾರತದಲ್ಲಿ 2.27 ಲಕ್ಷಕ್ಕೂ ಅಧಿಕ ಆಕ್ಟೀವ್ ಕೇಸ್‍ಗಳು ಹಾಗೂ 3.79 ಲಕ್ಷಕ್ಕೂ ಹೆಚ್ಚು ರಿಕವರಿ ರೇಟ್ (ಶೇ.60.73) ವರದಿಯಾಗಿದೆ.

ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಸತತ 25ನೇ ದಿನವೂ ಗಮನಾರ್ಹ ಏರಿಕೆ ಕಂಡುಬಂದಿದೆ. ಇದು ಆತಂಕದ ನಡುವೆಯೂ ಸ್ವಲ್ಪ ಸಮಾಧಾನ ಮೂಡಿಸಿದೆ.

24 ತಾಸುಗಳ ಅವಧಿಯಲ್ಲಿ ಸುಮಾರು 10,000 ರೋಗಿಗಳು ಹೆಮ್ಮಾರಿಯ ಬಿಗಿಮುಷ್ಟಿಯಿಂದ ಪಾರಾಗಿದ್ದಾರೆ.  ಈ ಬೆಳವಣಿಗೆಯು ಸಾಂಕ್ರಾಮಿಕ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.

ಕೊರೊನಾ ವೈರಸ್ ಸೋಂಕಿನ ರೋಗಿಗಳ ಚೇತರಿಕೆ ಪ್ರಕರಣಗಳ ಸಂಖ್ಯೆ 3.80 ಲಕ್ಷ ಸನಿಹದಲ್ಲಿರುವುದ ಸಮಾಧಾನದ ಸಂಗತಿ. ನಿನ್ನೆ ಮಧ್ಯರಾತ್ರಿವರೆಗೆ 3,79,897 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 2,27,439 ಮಂದಿಯಲ್ಲಿ ಸಕ್ರಿಯ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.60.73ರಷ್ಟು ವೃದ್ದಿ ಕಂಡುಬಂದಿದೆ. ಸತತ ಮೂರು ವಾರಗಳಿಗೂ ಹೆಚ್ಚು ಕಾಲದಿಂದ ರಿಕವರಿ ರೇಟ್‍ನಲ್ಲಿ ಏರಿಕೆ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Facebook Comments