ಮಲೆನಾಡಿನ ಕೆಂಪಿರುವೆ ಚಟ್ನಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರೋತ್ಸಾಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಕೋವಿಡ್ ಬಂದ ಮೇಲೆ ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಕೇಳಿಬರುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆತ್ಮನಿರ್ಭರಕ್ಕೆ ಕರೆ ಕೊಟ್ಟಿದ್ದಾರೆ. ಅದಕ್ಕೆ ರಾಜ್ಯದ ಪ್ರವಾಸೋದ್ಯಮ ಇಲಾಖೆ ಸಹ ಒತ್ತು ನೀಡಲು ಮುಂದಾಗಿದೆ.  ಸ್ಥಳೀಯ ವಸ್ತುಗಳೆಂದರೆ ಕೇವಲ ಬಟ್ಟೆಗಳು, ಆಟಿಕೆಗಳು ಮತ್ತು ಇತರ ಸಾಮಾನುಗಳು ಮಾತ್ರವಲ್ಲ, ನಾವು ಸೇವಿಸುವ ಆಹಾರ ಕೂಡ ದೇಸೀ ಸ್ಥಳೀಯ ಆಹಾರವಾಗಿದ್ದರೆ ಉತ್ತಮ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಸ್ಥಳೀಯ, ಸಾಂಪ್ರದಾಯಿಕ ಆಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಪ್ರವಾಸೋದ್ಯಮ ಇಲಾಖೆ ಅಂಥವುಗಳಲ್ಲೊಂದು ಬೆಂಕಿ ಕೆಂಪು ಇರುವೆ ಚಟ್ನಿ ಚಿಗ್ಲಿಗೆ ಪ್ರಚಾರ ನೀಡುತ್ತಿದೆ.
ಕೆಂಪು ಇರುವೆಗಳ ಚಟ್ನಿಯನ್ನು ಚಿಗ್ಲಿ ಎಂದು ಕರೆಯಲಾಗುತ್ತಿದ್ದು ಇವುಗಳ ಸೇವನೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಅರೆ ಇದೇನಿದು, ಕೆಂಪು ಇರುವೆ ಚಟ್ನಿ ಎಂದು ಹಲವರು ಹುಬ್ಬೇರಿಸಿದ್ದು ಉಂಟು.

ಪ್ರವಾಸೋದ್ಯಮ ಇಲಾಖೆ ಏನು ಹೇಳುತ್ತದೆ?:ನಮ್ಮ ರಾಜ್ಯದ ಮಲೆನಾಡು, ಕರಾವಳಿ ಭಾಗಗಳಲ್ಲಿ ಈ ಚಟ್ನಿ ಜನಪ್ರಿಯ. ಚಳಿಗೆ ಈ ಚಟ್ನಿ ಅತ್ಯಂತ ರುಚಿಕರವಾಗಿದ್ದು ಪ್ರೋಟೀನ್ ಗಳಿಂದ ಸಹ ಕೂಡಿರುತ್ತದೆ. ನ್ಯೂಮೋನಿಯಾ, ಕಫ, ಕೆಮ್ಮನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ.

ಕೇವಲ ವಸ್ತುಗಳಲ್ಲಿ ಮಾತ್ರವಲ್ಲದೆ ತಿನ್ನುವ ಆಹಾರದಲ್ಲಿ ಕೂಡ ಸ್ಥಳೀಯತೆಗೆ ಒತ್ತು ನೀಡುವಂತೆ ನಾವು ಜನರನ್ನು ಕೇಳಿಕೊಳ್ಳುತ್ತೇವೆ. ಯಾರಾದರೂ ನಾಗರಿಕರು ಬಹಳ ಅಪರೂಪದ ಇಂತಹ ತಿನಿಸುಗಳ ಬಗ್ಗೆ ಗೊತ್ತಿದ್ದರೆ ಮಾಹಿತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಥವಾ ಬೇರೆ ಮಾಧ್ಯಮಗಳ ಮೂಲಕ ಹಂಚಿಕೊಳ್ಳಬಹುದು.

ಇಲಾಖೆ ಇತರ ಹಲವು ರೆಸಿಪಿಗಳನ್ನು ಹಂಚಿಕೊಳ್ಳುತ್ತಿದೆ ಉದಾಹರಣೆಗೆ ಕರ್ಚಿಕಾಯಿ ಪಲ್ಯ, ಹಲಸಿನ ಹಣ್ಣು ಗಟ್ಟಿ ಮತ್ತು ಕಿಸ್ಮುರಿ. ಬೇರೆ ರಾಜ್ಯಗಳ ಜನರನ್ನು ಸಹ ಕರ್ನಾಟಕದತ್ತ ಸೆಳೆಯುವುದು ಇಂತಹ ಅಪರೂಪದ ತಿನಿಸುಗಳನ್ನು ಹಂಚಿಕೊಳ್ಳುವುದರ ಉದ್ದೇಶ.
ಚಿಗ್ಲಿ ಚಟ್ನಿ ವಿಚಾರದಲ್ಲಿ ಹಲವು ಮಸಾಲೆಗಳನ್ನು ಸೇರಿಸಿದರೆ ಉತ್ತರ ಕರ್ನಾಟಕದ ಕಡೆಯ ಚಟ್ನಿ, ತೆಂಗಿನ ಕಾಯಿ ಸೇರಿಸಿದರೆ ಮಲೆನಾಡು, ಕರಾವಳಿ ಭಾಗದ ಚಟ್ನಿಯಾಗುತ್ತದೆ.

Facebook Comments