ಗಣರಾಜ್ಯೋತ್ಸವ ಹಿಂಸಾಚಾರ : ಜಮ್ಮು ಪೊಲೀಸರಿಂದ ಇಬ್ಬರು ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು/ನವದೆಹಲಿ, ಫೆ.23 (ಪಿಟಿಐ)- ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ ನಡೆಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂದು ಜಮ್ಮು ನಗರದಲ್ಲಿ ಒಬ್ಬ ರೈತ ಮುಖಂಡ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಜಮ್ಮು ನಗರದ ಛಾತಾ ಪ್ರದೇಶದ ನಿವಾಸಿ ಜಮ್ಮು ಮತ್ತು ಕಾಶ್ಮೀರದ ಯುನೈಟೆಡ್ ಕಿಸಾನ್ ಫ್ರಂಟ್ ಅಧ್ಯಕ್ಷ ಮೊಹಿಂದರ್ ಸಿಂಗ್ (45) ಹಾಗೂ ಗೊಲೆ ಗುಜಲ್ ವಾಸಿ ಮನದೀಪ್ ಸಿಂಗ್ (23) ಸೇರಿದ್ದಾರೆ.

ಇಬ್ಬರು ಆರೋಪಿಗಳು ಜ.26 ರಂದು ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿಸಿ ಹಿಂಸಾಚಾರ ನಡೆಸಿದ ಘಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಲ್ಲದೆ, ಸಂಚನ್ನು ರೂಪಿಸಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಪರಾಧ ವಿಭಾಗದ ಪೊಲೀಸರು ಜಮ್ಮು ನಗರದಲ್ಲಿ ಕಸ್ಟಡಿಗೆ ತೆಗೆದುಕೊಂಡು, ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ತಕ್ಷಣ ದೆಹಲಿಗೆ ರವಾನಿಸಿದ್ದಾರೆ.

ಕೆಂಪುಕೋಟೆಯಲ್ಲಿ ಹಿಂಸಾಚಾರ ನಡೆಸುವ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಸಕ್ರಿಯ ಪಾತ್ರ ವಹಿಸಿದ್ದ ಖಚಿತ ಮಾಹಿತಿ ಮೇರೆಗೆ ಇವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರ್ ಹೆಚ್ಚುವರಿ ಪಿಆರ್‍ಒ ಅನಿಲ್ ಮಿಟ್ಟಲ್ ಹೇಳಿದ್ದಾರೆ.

ಆದಾಗ್ಯೂ, ಮೊಹಿಂದರ್ ಸಿಂಗ್ ಅವರ ಕುಟುಂಬ ಮೊಹಿಂದರ್ ನಿರಪರಾಧಿ ಮತ್ತು ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಅವರು ನನಗೆ ಮೊದಲೇ ತಿಳಿಸಿದ್ದರು. ಜಮ್ಮು ನಗರದ ಹಿರಿಯ ಎಸ್ಪಿ ಅವರು ಕರೆದಿದ್ದಾರೆ ಮತ್ತು ಅವರ ಮೊಬೈಲ್ ಸ್ವಿಚ್ ಆಫ್ ಆಗುವ ಮೊದಲು ಗಾಂಧಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದಾರೆ ಎಂದು ನನಗೆ ಮಾಹಿತಿ ನೀಡಿದ್ದರು. ಆದರೆ, ವಿಚಾರಿಸಿದಾಗ ನನ್ನ ಪತಿಯನ್ನು ಪೊಲೀಸರು ಬಂಧಿಸಿ ದೆಹಲಿಗೆ ಸ್ಥಳಾಂತರಿಸಿದ್ದಾರೆ ಎಂದು ನನಗೆ ತಿಳಿದುಬಂದಿದೆ ಎಂದು ರೈತ ಮುಖಂಡನ ಪತ್ನಿ ಸುದ್ದಿಗಾರರಿಗೆ ತಿಳಿಸಿದರು.

ನನ್ನ ಪತಿ ಕೇವಲ ದೆಹಲಿ ಗಡಿ ಭಾಗದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಂಪು ಕೋಟೆ ಹಿಂಸಾಚಾರದಲ್ಲಿ ಭಾಗಿಯಾಗಿರಲಿಲ್ಲ. ಅವರು ಒಬ್ಬರೇ ಎಸ್‍ಎಸ್ಪಿ ನೋಡಲು ಹೋಗಿದ್ದರು. ಅವರು ತಪ್ಪು ಮಾಡಿಲ್ಲ. ಆದ್ದರಿಂದ ಯಾರಿಗೂ ಹೆದರಬೇಕಾಗಿಲ್ಲ ಎಂದರು.

Facebook Comments