ಅರ್ಧ ಟನ್ ರಕ್ತಚಂದನ ವಶ, ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ಸುಮಾರು ಅರ್ಧ ಟನ್‍ಗೂ ಹೆಚ್ಚು ತೂಕದ ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ನಗರಕ್ಕೆ ತಂದು ಮನೆಯೊಳಗೆ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾಗ ದಾಳಿ ನಡೆಸಿದ ಆರ್.ಟಿ.ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಿನ್ನೆ ಬೆಳಗಿನ ಜಾವ 1 ಗಂಟೆಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪಿಎಸ್‍ಐ ಯಲ್ಲವ್ವ ಮನ್ನಣ್ಣನವರ್ ಅವರಿಗೆ ಬಂದ ಮಾಹಿತಿ ಆಧರಿಸಿ ಆರ್.ಟಿ.ನಗರದ ಎಚ್‍ಎಂಟಿ ಲೇಔಟ್‍ನ 6ನೇ ಸಿ ಮುಖ್ಯರಸ್ತೆಯಲ್ಲಿ ದಾಳಿ ನಡೆಸಿದಾಗ ರಕ್ತಚಂದನ ಮರದ ತುಂಡುಗಳ ಸಾಗಾಣಿಕೆ ಬಯಲಿಗೆ ಬಂದಿದೆ.

ಆರೋಪಿಗಳಾದ ಕಾವೇರಿನಗರದ ಸುಹೇಲ್‍ಖಾನ್(22), ಎಚ್‍ಎಂಟಿಲೇಔಟ್‍ನ ಅಬ್ದುಲ್ ಬಷೀರ್ (67) ಹಾಗೂ ಅನೀಸ್ ಫಾತೀಮಾ (57) ಅವರುಗಳನ್ನು ಬಂಧಿಸಲಾಗಿದೆ. ಆರೋಪಿಗಳು ಟಾಟಾಸೂಪರ್ ಎಸಿಇ ಗೂಡ್ಸ್ ವಾಹನದಲ್ಲಿ 502 ಕೆಜಿ ತೂಕದ 15 ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ತಂದು ಮನೆಯೊಳಗೆ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಆರೋಪಿಗಳಿಂದ ರಕ್ತಚಂದನದ ತುಂಡುಗಳ ಜತೆಗೆ ಒಂದು ಮೊಬೈಲ್ ಫೋನ್, ಒಂದು ತೂಕದ ಮಿಷನ್, ಒಂದು ಚಾಕು, ಟಾಟಾಎಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಸುಹೇಲ್‍ಖಾನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕಿದೆ.

2017ರಲ್ಲಿ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೂರ್ ಎಂಬುವವರನ್ನು ಆಪಹರಿಸಿ ಗೌರಿಬಿದನೂರಿನ ಫಾರಂ ಹೌಸ್‍ನಲ್ಲಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಇತರ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments