ಪ್ರಾದೇಶಿಕ ಪಕ್ಷಗಳಿಗೆ ಭಾರೀ ಡಿಮ್ಯಾಂಡ್: ಓಲೈಕೆ ಕೈ-ಕಮಲ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 14- ಲೋಕಸಭೆ ಚುನಾವಣೆ ಫಲಿತಾಂಶದ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವಂತೆ ಪ್ರಾದೇಶಿಕ ಪಕ್ಷಗಳ ಓಲೈಕೆಗೆ ರಾಷ್ಟ್ರೀಯ ಪಕ್ಷಗಳು ಮುಗಿಬಿದ್ದಿವೆ.  ಸರ್ಕಾರ ರಚನೆಯಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವುದರಿಂದ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಸ್ಪರ್ಧೆಗಿಳಿದಿವೆ.

ಈವರೆಗೂ ಯುಪಿಎ, ಎನ್‍ಡಿಎ, ತೃತೀಯ ರಂಗ, ಸಂಯುಕ್ತರಂಗ ಸೇರಿದಂತೆ ಯಾವ ರಂಗದಲ್ಲೂ ಗುರುತಿಸಿಕೊಳ್ಳದೆ ತಟಸ್ಥ ನೀತಿ ಅನುಸರಿಸುತ್ತಿರುವ ಪ್ರಾದೇಶಿಕ ಪಕ್ಷಗಳ ಮುಖಂಡರಿಗೆ ಭಾರೀ ಬೇಡಿಕೆ ಬಂದಿದೆ.

ಕೇಂದ್ರ ಸರ್ಕಾರದ ರಚನೆಯಲ್ಲಿ ಕಿಂಗ್‍ಮೇಕರ್ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿರುವ ಆಂಧ್ರಪ್ರದೇಶದ ವೈಎಸ್‍ಆರ್, ತೆಲಂಗಾಣದ ಟಿಆರ್‍ಎಸ್, ಒರಿಸ್ಸಾದ ಬಿಜೆಡಿ, ಎಎಪಿ ಸೇರಿದಂತೆ ಸಣ್ಣಪುಟ್ಟ ಪಕ್ಷಗಳಿಗೂ ರಾತ್ರೋರಾತ್ರಿ ಜಾಕ್‍ಪಾಟ್ ಹೊಡೆದಿದೆ.

ಕೆಲವು ಸಮೀಕ್ಷೆಗಳು ಕೇಂದ್ರದಲ್ಲಿ ಪುನಃ ಬಿಜೆಪಿ ನೇತೃತ್ವದ ಎನ್‍ಡಿಎ ಸ್ಪಷ್ಟ ಜನಾದೇಶ ಪಡೆದು 2ನೇ ಬಾರಿಗೆ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯಹೇಳಿವೆ. ಇನ್ನು ಕೆಲವು ಸಮೀಕ್ಷೆಗಳು ಸರ್ಕಾರ ರಚನೆಗೆ ಎನ್‍ಡಿಎಗೆ ಕೆಲವೇ ಕೆಲವು ಸಂಖ್ಯೆಗಳ ಕೊರತೆಯಾಗಬಹುದೆಂದು ಹೇಳಲಾಗಿದೆ.

ಬಿಜೆಪಿಯೇತರ ಪಕ್ಷಗಳು ಸರ್ಕಾರ ರಚನೆ ಮಾಡಬಹುದೆಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಆ ಪಕ್ಷದ ನಾಯಕರು ಕೆಲವು ಪ್ರಾದೇಶಿಕ ಪಕ್ಷಗಳ ನಾಯಕರನ್ನು ಸೆಳೆಯಲು ಕಾರ್ಯೋನ್ಮುಖರಾಗಿದ್ದಾರೆ.

ವೈಎಸ್‍ಆರ್ ಕಾಂಗ್ರೆಸ್ ಮುಖ್ಯಸ್ಥ ಜಗಮೋಹನ್ ರೆಡ್ಡಿ ಜೊತೆ ಖುದ್ದು ನರೇಂದ್ರ ಮೋದಿ ಅವರೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಕಳೆದ ವಾರವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸರ್ಕಾರ ರಚಿಸಲು ಬೆಂಬಲ ನೀಡುವಂತೆ ಮಾತುಕತೆ ನಡೆಸಿದ್ದರು. ಆದರೆ ಫಲಿತಾಂಶ ಪ್ರಕಟಗೊಳ್ಳುವವರೆಗೂ ನಾವು ಯಾವುದೇ ರೀತಿಯ ಭರವಸೆಯನ್ನು ನೀಡುವುದಿಲ್ಲ ಎಂದು ಜಗನ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಜಗನ್ ಅವರನ್ನು ಸೆಳೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ವಿರೋಧಿಸಿಕೊಂಡೇ ಕಳೆದ ಒಂದು ದಶಕದಿಂದ ಆಂಧ್ರದಲ್ಲಿ ರಾಜಕಾರಣ ಮಾಡುತ್ತಿರುವ ಜಗನ್, ಯುಪಿಎಗೆ ಬೆಂಬಲ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಹೀಗಾಗಿ ನೆರೆಯ ತಮಿಳುನಾಡಿನ ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಮೂಲಕ ಸಂಧಾನದ ಸರ್ಕಸ್ ಪ್ರಾರಂಭವಾಗಿದೆ.

ತೆಲಂಗಾಣದಲ್ಲೂ ಕೂಡ ಕೆಸಿಆರ್ ಓಲೈಸಿಕೊಳ್ಳಲು ಎರಡೂ ಪಕ್ಷಗಳು ಪೈಫೋಟಿಗಿಳಿದಿದ್ದಾರೆ. ಆದರೆ ಯುಪಿಎ ಮತ್ತು ಎನ್‍ಡಿಎ ಹೊರತುಪಡಿಸಿ ಸರ್ಕಾರ ರಚಿಸಲು ಚಂದ್ರಶೇಖರ್ ರಾವ್ ಕಸರತ್ತು ನಡೆಸಿದ್ದಾರೆ.  ಒಡಿಶಾದಲ್ಲಿ ಬಿಜು ಜನತಾದಳದ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರಿಗೂ ಬಿಜೆಪಿ ಗಾಳ ಹಾಕಿದೆ. ಕಳೆದ ವಾರವಷ್ಟೇ ರಾಜ್ಯದಲ್ಲಿ ಭೀಕರ ಚಂಡಮಾರುತದಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು.

ಈ ಹಂತದಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪಟ್ನಾಯಕ್ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರಾಜ್ಯಕ್ಕೆ ಬೇಕಾದ ಎಲ್ಲ ಸಹಾಯವನ್ನು ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದರು.

ಇದಕ್ಕೆ ಪ್ರತಿಯಾಗಿ ಪ್ರಧಾನಿಗೆ ಪತ್ರ ಬರೆದಿರುವ ನವೀನ್ ಪಟ್ನಾಯಕ್ ಕೇಂದ್ರದಿಂದ ನಮಗೆ ಎಲ್ಲ ರೀತಿಯ ಸಹಾಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಹೀಗೆ ಬಹುಮತಕ್ಕೆ ಕೊರತೆಯಾಗಬಹುದೆಂಬ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳಿಗೆ ಈಗ ಡಿಮ್ಯಾಂಡೋ ಡಿಮ್ಯಾಂಡೊ

Facebook Comments