6ನೇ ಮೆಗಾ ಡೀಲ್ ಕುದುರಿಸಿದ ರಿಲಾಯನ್ಸ್: ಅಬುದಾಬಿ ಕಂಪನಿಯಿಂದ 9,093 ಕೋಟಿ ರೂ. ಹೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.5-ಏಷ್ಯಾದ ನಂಬರ್ ಒನ್ ಸಿರಿವಂತ ಮುಕೇಶ್ ಅಂಬಾನಿ ಒಡೆತನದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್‍ಗೆ ಮತ್ತೊಂದು ಭರ್ಜರಿ ಶುಕ್ರದೆಸೆ ಒಲಿದಿದೆ.

ಅಬುದಾಬಿ ಮೂಲದ ಪ್ರಸಿದ್ಧ ಬಂಡವಾಳ ಹೂಡಿಕೆ ಸಂಸ್ಥೆ ಮುಬಾಡಲ ರಿಲಾಯನ್ಸ್ ಡಿಜಿಟಲ್ ಘಟಕದಲ್ಲಿ 9.093.60 ಕೋಟಿ ರೂ.ಗಳನ್ನು ತೊಡಗಿಸಿದೆ. ಇದರೊಂದಿಗೆ ಭಾರತದ ಅಗ್ರಮಾನ್ಯ ಸಂಸ್ಥೆಗೆ ಆರನೇ ಅತಿ ದೊಡ್ಡ ಡೀಲ್ ಕುದುರಿದಂತಾಗಿದೆ.

ತನ್ನ ಡಿಜಿಟಲ್ ಘಟಕದಲ್ಲಿನ ಶೇ.1.85ರಷ್ಟು ಪಾಲನ್ನು ಮುಬಾಡಲ ಇನ್ವೆಸ್ಟ್‍ಮೆಂಟ್ ಕಂಪನಿ(ಮುಬಾಡಲ)ಗೆ ಮಾರಾಟ ಮಾಡುವುದಾಗಿ ರಿಲಾಯನ್ಸ್ ಇಂಡಸ್ಟ್ರೀಸ್ ಇಂದು ಘೋಷಿಸಿದೆ.

ತೈಲ ಉದ್ಯಮದಿಂದ ಮೊದಲ್ಗೊಂಡು ದೂರಸಂಪರ್ಕ ಕ್ಷೇತ್ರದವರೆಗೂ ಪ್ರಾಬಲ್ಯ ಹೊಂದಿರುವ ರಿಲಾಯನ್ಸ್ ಸಮೂಹ ಸಂಸ್ಥೆಗೆ ಇಂದು ಆರನೇ ಅತಿ ದೊಡ್ಡ ವಾಣಿಜ್ಯ ವ್ಯವಹಾರವಾಗಿದ್ದು, ಈವರೆಗೆ 87,655.35 ಕೋಟಿ ರೂ.ಗಳ ಡೀಲ್‍ಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ.

ಈಗಾಗಲೇ ರಿಲಾಯನ್ಸ್ ಸಂಸ್ಥೆಯು ಫೇಸ್‍ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್‍ನರ್, ಜನರಲ್ ಅಟ್ಲಾಂಟಾ, ಮತ್ತು ಕೆಕೆಆರ್ ಸಂಸ್ಥೆಗಳೊಂದಿಗೆ ದೊಡ್ಡ ಡೀಲ್‍ಗಳನ್ನು ನಿಭಾಯಿಸಿರುವ ರಿಲಾಯನ್ಸ್ ಸಂಸ್ಥೆ ಕೇವಲ ಆರು ವಾರಗಳಲ್ಲೇ ಆರು ದೊಡ್ಡ ಮಟ್ಟದ ವ್ಯವಹಾರಗಳನ್ನು ನಿರ್ವಹಿಸಿರುವುದು ದಾಖಲೆಯಾಗಿದೆ.

ಈ ವ್ಯವಹಾರಗಳೊಂದಿಗೆ ಮುಕೇಶ್ ಅಂಬಾನಿ ಏಷ್ಯಾದ ನಂಬರ್ ಒನ್ ಶ್ರೀಮಂತ ಪಟ್ಟವನ್ನು ಮತ್ತಷ್ಟು ಭದ್ರವಾಗಿಸಿರಿಕೊಂಡಿದ್ದಾರೆ. ಚೀನಾದ ಹೆಸರಾಂತ ಉದ್ಯಮಿ ಜಾಕ್ ಮಾ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

Facebook Comments