ಸಿಸಿಬಿ ಕಾರ್ಯಾಚರಣೆ: ಕಾಳಸಂತೆಯಲ್ಲಿ ರೆಮಿಡಿಸಿವಿರ್ ಮಾರಾಟ ಮಾಡುತ್ತಿದ್ದ 10 ಮಂದಿಯ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 6- ಕೊರೊನಾ ಚಿಕಿತ್ಸೆಗೆ ಜೀವ ರಕ್ಷಕವಾಗಿ ಬಳಕೆ ಮಾಡುತ್ತಿರುವ ರೆಮಿಡಿಸಿವಿರ್ ಇಂಜೆಕ್ಷನ್ ನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಉತ್ತರ ವಿಭಾಗ ಹಾಗೂ ಸಿಸಿಬಿಯ ಪೊಲೀಸರು ಒಟ್ಟ 10 ಮಂದಿಯನ್ನು ಬಂಧಿಸಿದ್ದು, ಅವರಿಂದ 25 ಬಾಟಲ್ ಔಷಧಿಯನ್ನು ವಶ ಪಡಿಸಿಕೊಂಡಿದ್ದಾರೆ.

ಉತ್ತರ ವಿಭಾಗದ ವ್ಯಾಪ್ತಿಯ ಜೆ.ಸಿ.ನಗರದ ಪೊಲೀಸರು ಮೂರು ಜನರನ್ನು ಬಂಧಿಸಿ 12 ಜಂಜೆಕ್ಷನ್ ಗಳನ್ನು, ಸುಬ್ರಮಣ್ಯನಗರದ ಪೊಲೀಸರು ಮೂವರನ್ನು ಬಂಧಿಸಿ 13 ಇಂಜಕ್ಷನ್ ಗಳನ್ನು ವಶ ಪಡಿಸಿಕೊಂಡಿದ್ದರೆ, ಸಿಸಿಬಿ ನಾಲ್ಕು ಜನರನ್ನು ಬಂಧಿಸಿ 12 ಇಂಜಕ್ಷನ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಸಾಮಾಜಿಕ ಜಾಲ ತಾಣಗಳ ಮೂಲಕ ಸಂದೇಶಗಳನ್ನು ಹರಿಬಿಟ್ಟು ಬೇಡಿಕೆ ಹೆಚ್ಚಿರುವರಿಗೆ ಅಕ್ರಮವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದರು. ನಿಗದಿತ ಬೆಲೆಗಿಂತಲೂ ದುಬಾರಿ ಬೆಲೆಗೆ ರೆಮಿಡಿಸಿವಿರ್ ಮಾರಾಟವಾಗುತ್ತಿದೆ. ಸುಮಾರು 25 ಸಾವಿರ ರೂಪಾಯಿಗೆ ಔಷಧಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೆಡಿಕಲ್ ರೆರ್ಪೆಸೆಂಟೆಟಿವ್ ಗಳಾದ ಜೆ.ಪಿ.ನಗರ ಜರ್ನಾದನ್ ನಿಂದ 3, ನಾಗವಾರದ ದೀಪಕ್ ನಿಂದ ಮೂರು, ಯಲಹಂಕ ಆಸ್ಪತ್ರೆ ಯ ರಿಸೆಪ್ಸನಿಸ್ಟ್ ಆಗಿರುವ ಲೋಕೇಶ್ ನಿಂದ ನಾಲ್ಕು ಇಂಜಕ್ಷನ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಮೂವರ ವಿರುದ್ಧ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 420 ಮತ್ತು ಔಷಧ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇನ್ನೂ ಹೆಸರುಘಟ್ಟ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ಲೇಔಟ್ ನ ಎಸ್ ಎಲ್ ವಿ ಮೆಡಿಕಲ್ ಸ್ಟೋರ್ ನ ಜಾನಿ (34)ಯಿಂದ 3, ಮಾರತ್ ಹಳ್ಳಿಯ ಲಿಟಲ್ ಫ್ಲವರ್ ನರ್ಸಿಂಗ್ ಕಾಲೇಜಿನ ದಿನೇಶ್ (27) ಮತ್ತು ನಾಗರಭಾವಿಯ ಗಾಯತ್ರಿ ಡಯಾಗ್ನೆಸ್ಟಿಕ್ ಸೆಂಟರ್ ನ ಶಂಕರ್ (42) ಅವರನ್ನು ಬಂಧಿಸಿ ಈ ಮೂವರಿಂದ 13 ಔಷಧಿ ಬಾಟಲ್ ಗಳನ್ನು ವಶ ಪಡಿಸಿಕೊಂಡು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ ಒಟ್ಟು 12 ಇಂಜಕ್ಷನ್ ಬಾಟಲ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ರೆಮಿಡಿಸಿವಿರ್ ಇಂಜಕ್ಷನ್ ನನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿರುವ ಬೆಂಗಳೂರು ಪೊಲೀಸರು ಈವರೆಗೂ 50 ಮಂದಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

Facebook Comments