ಕೋಡಿಹಳ್ಳಿ ಚಂದ್ರಶೇಖರ್ ಆಸ್ತಿ ಕುರಿತು ತನಿಖೆಯಾಗಬೇಕು : ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.18-ರೈತರ ಹೋರಾಟದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾರೀ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದು, ಕೂಡಲೇ ಸರ್ಕಾರ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.  ರೈತರಿಗೆ ರೈತ ಸಂಘಟನೆ ಹೆಸರಿನಲ್ಲಿ ವಂಚನೆ ಮಾಡಿ ಬೆಲೆ ಬಾಳುವ ಕಾರುಗಳು, ಬಂಗಲೆ, ಆಸ್ತಿ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವವಾಗಿ ಕೋಡಿಹಳ್ಳಿ ಚಂದ್ರಶೇಖರ್ ರೈತ ಹೋರಾಟಗಾರನೇ ಅಲ್ಲ. ಅವನೊಬ್ಬ ನಕಲಿ ಹೋರಾಟಗಾರ. ಪವಿತ್ರವಾದ ಹಸಿರು ಶಾಲು ಹಾಕಿಕೊಂಡು ರೈತರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಮೋಸ ಮಾಡುವ ದಲ್ಲಾಳಿ. ಇಂತಹ ನಕಲಿ ನಾಯಕನನ್ನು ಯಾರೊಬ್ಬರು ನಂಬಬಾರದು ಎಂದು ಅವರು ರೈತ ಸಮುದಾಯದವರಲ್ಲಿ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೈಸೂರು, ಮಂಡ್ಯ ಸೇರಿದಂತೆ ನಾನಾ ಭಾಗಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಅವಾಗ ಈ ನಕಲಿ ನಾಯಕ ಅವರ ಕುಟುಂಬದವರನ್ನು ಭೇಟಿಯಾಗಿ ಒಂದು ಸಾಂತ್ವಾನವನ್ನೂ ಹೇಳಲಿಲ್ಲ. ಸರ್ಕಾರಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೇ ಸಾಧನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಕರ್ನಾಟಕದ ಇತಿಹಾಸದಲ್ಲಿ ಹಸಿರುಶಾಲಿಗೆ ತನ್ನದೇ ಆದ ಪಾವಿತ್ರತೆಯಿದೆ. ರೈತರಿಗೆ ಅನ್ಯಾಯವಾದಾಗ ನ್ಯಾಯಕ್ಕಾಗಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಆದರೆ ಕೋಡಿಹಳ್ಳಿ ಹಸಿರುಶಾಲು ಮೂಲಕ ಬ್ಲಾಕ್‍ಮೇಲ್ ಮಾಡಿಕೊಂಡು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ದೂರಿದರು.  ನೀನು ಯಾವಾಗ ಜಮೀನಿನಲ್ಲಿ ಉಳುಮೆ ಮಾಡಿದ್ದೆ? ಜಮೀನಿನಲ್ಲಿ ಬೆಳೆ ಬೆಳೆದಿದ್ಯಾ? ನಿನ್ನ ಹೆಸರಿನಲ್ಲಿ ಎರಡೂವರೆ ಎಕರೆ ಆಸ್ತಿ ಇದದ್ದು ಇಂದು ಕೋಟ್ಯಂತರ ರೂ. ಆಗಿದೆ. ಅದು ಎಲ್ಲಿಂದ ಬಂತು? ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ನೀನು ಯಾವ ಸೀಮೆಯ ರೈತ ನಾಯಕ ಎಂದು ಖಾರವಾಗಿ ಪ್ರಶ್ನಿಸಿದರು.

ಈವರೆಗೂ ರೈತರನ್ನು ನಂಬಿಸಿ ವಂಚನೆ ಮಾಡುತ್ತಿದ್ದ ಇವರು ಸಾರಿಗೆ ನೌಕರರ ಸಂಘಟನೆಯ ಗೌರವ ಅಧ್ಯಕ್ಷರಾಗಿದ್ದಾರೆ. ನಾಲ್ಕು ದಿನ ಬಸ್ ಸಂಚಾರವನ್ನು ಬಂದ್ ಮಾಡಿ ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟರು. ಆಗ ಆಗಿರುವ ನಷ್ಟಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸಿಎಂ ಆದ ವೇಳೆ ತುಟಿ ಬಿಚ್ಚದ ನೀನು ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ಏಕಾಏಕಿ ರೈತರನ್ನು ಎತ್ತಿಕಟ್ಟುವ ನೀಚ ಕೆಲಸ ಮಾಡುತ್ತಿದ್ದೀಯಾ? ಇಂತಹ ನಕಲಿ ನಾಯಕನನ್ನು ನಂಬಬಾರದು ಎಂದು ರೈತರಲ್ಲಿ ಮನವಿ ಮಾಡಿದರು.

ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಪ್ರಧಾನಿಯವರು ಫಸಲ್‍ಭೀಮಾ ಯೋಜನೆ ಜಾರಿಗೆ ತಂದು ವರ್ಷಕ್ಕೆ ಆರು ಸಾವಿರ ಆರ್ಥಿಕ ನೆರವು ಕೊಡುತ್ತಿದ್ದಾರೆ. ಇದೇ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹೆಚ್ಚುವರಿ 4 ಸಾವಿರ ಕೊಡುತ್ತಿದ್ದಾರೆ. ಬೆಂಬಲ ಬೆಲೆಯನ್ನು ಸಹ ಘೋಷಣೆ ಮಾಡಿದ್ದಾರೆ. ರೈತರಿಗೆ ನಮ್ಮ ಸರ್ಕಾರ ಮಾಡಿರುವಷ್ಟು ನೆರವನ್ನು ಯಾವ ಸರ್ಕಾರವೂ ನೀಡಿಲ್ಲಎಂದರು.

ಇನ್ನು ಮುಂದಾದರೂ ಹಸಿರು ಶಾಲು ಹಾಕಿಕೊಂಡು ರೈತರಿಗೆ ವಂಚನೆ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಹೇಳಿದರು. ರೈತರು ಏನೆ ಸಮಸ್ಯೆಗಳಿದ್ದರೂ ನೇರವಾಗಿ ಸರ್ಕಾರದ ಜೊತೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಬೇಕು. ಕೋಡಿಹಳ್ಳಿಯಂತಹ ನಕಲಿ ನಾಯಕರನ್ನು ನಂಬಿ ಮೋಸಹೋಗಬೇಡಿ. ಯಡಿಯೂರಪ್ಪ ಕೂಡ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು, ಅವರ ಜೊತೆ ಚರ್ಚೆ ಮಾಡಿ. ಡೋಂಗಿ ನಾಯಕರನ್ನು ನಂಬಬಾರದು ಎಂದು ಕೋರಿದರು.

Facebook Comments