ಸಿದ್ದು ಅಹಿಂದ ಆಟ ನಡೆಯಲ್ಲ : ಎಂ.ಪಿ.ರೇಣು ಕಾಚಾರ್ಯ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.17- ಬಿಜೆಪಿಯಲ್ಲಿ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡಿರುವುದರಿಂದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಹಿಂದ ಅಥವಾ ಅಹಿಂದ ಯಾವುದೂ ನಡೆಯುವುದಿಲ್ಲ ಎಂದು ರಾಜ್ಯದ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣು ಕಾಚಾರ್ಯ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ತತ್ವದಡಿ ಪ್ರಧಾನಿ ನರೇಂದ್ರಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‍ನ ಅಹಿಂದ ನಾಟಕವನ್ನು ಜನರು ನಂಬುವುದಿಲ್ಲ. ರಾಜ್ಯದ ಜನತೆ ನಮ್ಮ ಜೊತೆ ಇರುವಾಗ ಇಂತಹ ನಾಟಕಗಳಿಗೆ ಸೊಪ್ಪು ಹಾಕುವುದಿಲ್ಲ ಎಂದರು.

12ನೇ ಶತಮಾನದ ಬಸವಣ್ಣನವರ ಸಾಮಾಜಿಕ ನ್ಯಾಯದಂತೆ ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರು ಸಂಪುಟದಲ್ಲಿ ಪ್ರತಿಯೊಂದು ಸಮಾಜಕ್ಕೂ ನ್ಯಾಯ ಒದಗಿಸಿದ್ದಾರೆ. ದಲಿತ ಸಮಾಜದಿಂದ ಗೋವಿಂದ ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆ ಸಮುದಾಯದಿಂದ ಯಾರು ಡಿಸಿಎಂ ಆಗಿದ್ದರು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನ ನಾಟಕವನ್ನು ಜನತೆ ನೋಡಿ ಸುಮ್ಮನಾಗಿದ್ದಾರೆ. ಮೊದಲು ಅಹಿಂದ ಎಂದವರು, ಈಗ ಅ ತೆಗೆದು ಹಿಂದ ಸಮಾವೇಶಗಳನ್ನು ನಡೆಸಿದರೆ ಜನರೇನೂ ದಡ್ಡರಲ್ಲ. ರಾಜ್ಯದ ಜನತೆ ಬಿಜೆಪಿ ಪರವಾಗಿದೆ.ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುವ ಕಾತುರದಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಮತದಾರರು ಇವರನ್ನು ನಂಬುವುದಿಲ್ಲ. ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಅಕ್ಕಿ ಕೊಡುವ ಕಥೆ ಆಮೇಲಿರಲಿ ಮೊದಲು ನೀವು ಅಧಿಕಾರಕ್ಕೆ ಬರಬೇಕಲ್ಲವೇ ಎಂದು ವ್ಯಂಗ್ಯವಾಡಿದರು. ಮೀಸಲಾತಿ ಹೆಚ್ಚಳ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೆಲವು ಸಮುದಾಯಗಳು ನಡೆಸುತ್ತಿರುವ ಹೋರಾಟ ತಪಲ್ಲು. ಪ್ರತಿಯೊಂದು ಸಮುದಾಯಕ್ಕೆ ಸಂವಿಧಾನಬದ್ಧವಾಗಿ ಮೀಸಲಾತಿ ಕೇಳುವ ಅಧಿಕಾರವಿದೆ ಎಂದು ಸಮರ್ಥಿಸಿಕೊಂಡರು.

ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎ ಗೆ ಪಟ್ಟಿಗೆ ಸೇರಿಸುವಂತೆ ಪಾದಯಾತ್ರೆ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲವಿದೆ. ಸಿಎಂ ಯಡಿಯೂರಪ್ಪನವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯಿತ ಸಮುದಾಯವನ್ನು ಎಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂಬುದಕ್ಕೂ ನನ್ನ ಸಹಮತವಿದೆ. ಸಂವಿಧಾನ ಬದ್ದವಾಗಿ ಯಾರಿಗೆ ಯಾವ ಮೀಸಲಾತಿ ಸಿಗಬೇಕೋ ಅದನ್ನುಕೊಡಲೇಬೇಕು. ಯಡಿಯೂರಪ್ಪನವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಯಾರಿಗೂ ಕೂಡ ಅನುಮಾನ ಬೇಡ ಎಂದು ಹೇಳಿದರು.

ಖಂಡನೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಗ್ರಹಣ ಮಾಡುತ್ತಿರುವ ನಿಧಿ ಕುರಿತಂತೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪವನ್ನು ರೇಣುಕಾಚಾರ್ಯ ಅವರು ತೀವ್ರವಾಗಿ ಖಂಡಿಸಿದರು. ಆರ್‍ಎಸ್‍ಎಸ್ ಅಥವಾ ಯಾವುದೇ ಸಂಘಟನೆಗಳು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಲೇಬೇಕೆಂದು ಯಾರ ಮೇಲೂ ಒತ್ತಡ ಹಾಕಿಲ್ಲ.

ಇದು ಶತಕೋಟಿ ಭಾರತೀಯರ ಕನಸ್ಸಾಗಿದೆ. ಜಾತಿ, ಮತ, ಧರ್ಮ, ಪಂಥ ಎಲ್ಲವನ್ನೂ ಮರೆತು ಕೋಟ್ಯಂತರ ಭಕ್ತರು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಯಾರಿಗೂ ಇಲ್ಲದ ಅನುಮಾನ ಕುಮಾರಸ್ವಾಮಿಯವರಿಗೆ ಏಕೆ ಬಂತು ಎಂದು ಪ್ರಶ್ನಿಸಿದರು. ನಾನು ಮಹಾನ್ ದೈವ ಭಕ್ತ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಅವರುಗಳಿಗೆ ಶ್ರೀರಾಮನ ಬಗ್ಗೆ ಇಂತಹ ತಾತ್ಸಾರ ಮನೋಭಾವನೆ ಏಕೆ? ಎಂದು ಪ್ರಶ್ನಿಸಿದರು.

Facebook Comments