ವಲಸಿಗ ಶಾಸಕರಿಗೆ ಟಾಂಗ್ ಕೊಟ್ಟ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ರಾಜ್ಯದಲ್ಲಿ 105 ಮಂದಿ ಬಿಜೆಪಿಯಿಂದ ಗೆದ್ದು ಶಾಸಕರಾಗಿ ರುವುದರಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಯಾರೊಬ್ಬರೂ ಮರೆಯಬಾರದೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ಪರೋಕ್ಷವಾಗಿ 17 ಶಾಸಕರಿಗೆ ತಿರುಗೇಟು ನೀಡಿದ್ದಾರೆ.

ನಮಗೆ 17 ಶಾಸಕರ ಬಗ್ಗೆ ಅಪಾರ ಗೌರವವಿದೆ. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನವನ್ನು ಕೊಡಲಾಗಿದೆ. ಆದರೆ 105 ಮಂದಿ ಗೆದ್ದಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಅರಿವಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ನನ್ನಿಂದಲೇ ಬಿಜೆಪಿ ಸರ್ಕಾರ ಬಂದಿದೆ ಎಂದು ಹೇಳುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಪಕ್ಷದ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ನಾಯಕರ ಸಂಘಟನೆಯ ಪರಿಣಾಮವಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಜೆಡಿಎಸ್‍ನಿಂದ ಬೇಸತ್ತು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೂ ಕೂಡ ಸೂಕ್ತವಾದ ಸ್ಥಾನಮಾನ ಕಲ್ಪಿಸಲಾಗಿದೆ ಎಂದರು. 105 ಶಾಸಕರು ಇಲ್ಲದೇ ಇದ್ದಿದ್ದರೆ ಸರ್ಕಾರ ಹೇಗೆ ಅಧಿಕಾರಕ್ಕೆ ಬರುತ್ತಿತ್ತು. ಮೊದಲು 105 ಶಾಸಕರು ಆಮೇಲೆ ಉಳಿದವರು ಎನ್ನುವ ಮೂಲಕ ಕಾಂಗ್ರೆಸ್-ಜೆಡಿಎಸ್‍ನಿಂದ ಬಂದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ 105 ಶಾಸಕರು ಗೆದ್ದಿದ್ದೇವೆ. ಇದನ್ನು ಯಾರೂ ಕೂಡ ಮರೆಯಬಾರದು ಎಂದು ಹೇಳಿದರು. ಚುನಾವಣೆಯಲ್ಲಿ ಪರಾಭವ ಗೊಂಡಿದ್ದ ಸಿ.ಪಿ.ಯೋಗೇಶ್ವರ್‍ಗೆ ಮಂತ್ರಿಸ್ಥಾನ ಕೊಡಬೇಕೆಂಬ ರಮೇಶ್ ಜಾರಕಿ ಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಅದು ಅವರ ವೈಯಕ್ತಿ ಅಭಿಪ್ರಾಯ.

ಯಾರಿಗೆ ಯಾವ ಸ್ಥಾನ ಕೊಡಬೇಕೆಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷಕ್ಕಿಂತ ಯಾರು ದೊಡ್ಡವರು ಅಲ್ಲ ಎಂದರು. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕೆಂಬುದು ಅವರ ವೈಯಕ್ತಿಕ ಅಭಿಪ್ರಾಯ. ನಾವು ಕೂಡ ಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿಯಾದಾಗ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಎಂದರು.

ಜನರಿಂದ ಆಯ್ಕೆಯಾದವರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ನನ್ನ ಹೇಳಿಕೆಗೆ ಈಗಲೂ ನಾನು ಬದ್ದವಾಗಿದ್ದೇನೆ. ಅದು ಶಿಷ್ಟಾಚಾರವೂ ಹೌದು. ಇಂದು ನಾವು 10 ಮಂದಿ ಶಾಸಕರು ಒಟ್ಟಿಗೆ ಸೇರಿದ್ದೆವು. ನಮ್ಮ ಮನೆಯಲ್ಲಿ ಉಪಹಾರವನ್ನೂ ಸೇವಿಸಿದೆವು. ನಾವೇನು ಹೋಟೆಲ್ ಅಥವಾ ರೆಸಾರ್ಟ್‍ಗೆ ಹೋಗಿಲ್ಲ. ಆದಷ್ಟು ಬೇಗ ನಮ್ಮ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರುವುದಾಗಿ ಹೇಳಿದರು.

Facebook Comments