” ಚುನಾವಣೆಯಲ್ಲಿಸೋತಿದ್ರೆ ನನಗೂ ಮಂತ್ರಿ ಸ್ಥಾನ ಸಿಗುತ್ತಿತ್ತೇನೋ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13-ಕೊನೆ ಕ್ಷಣದವರೆಗೂ ಸಂಪುಟಕ್ಕೆ ಸೇರ್ಪಡೆಯಾಗಲು ಸರ್ವ ಪ್ರಯತ್ನ ನಡೆಸಿ ವಿಫಲರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿರುವುದು ನೋವು ತಂದಿದೆ. ಅತಿಯಾದ ನಿಷ್ಠೆ ನನಗೆ ಮುಳುವಾಯ್ತು ಎಂದು ಪರೋಕ್ಷವಾಗಿ ಸಿಎಂ ಹೆಸರು ಹೇಳದೆ ನೋವು ಹೊರಹಾಕಿದರು.

ನನಗೆ ಬೇರೆಯವರ ರೀತಿ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುವುದು ಬರುವುದಿಲ್ಲ. ನೇರ, ನಿಷ್ಠೂರವಾಗಿ ಮಾತನಾಡಿದ್ದೇ ನನಗೆ ಮುಳುವಾಯ್ತು. ನಾನು ಕೂಡ ಚುನಾವಣೆಯಲ್ಲಿ ಸೋತಿದ್ದರೆ ಮಂತ್ರಿಯಾಗುತ್ತಿದ್ದೇವೇನೊ? ಸೋತವರನ್ನೇ ಸಂಪುಟಕ್ಕೆ ತೆಗೆದುಕೊಂಡರೆ ಹಿರಿಯರ ಗತಿಯೇನು ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಮಂತ್ರಿಸ್ಥಾನ ನೀಡದಿದ್ದರೂ ಚಿಂತೆಯಿಲ್ಲ. ಆದರೆ ಐದಾರು ಬಾರಿ ಗೆದ್ದಿರುವ ಹಿರಿಯ ಶಾಸಕರಿದ್ದಾರೆ. ಅಂಥವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕಿತ್ತು. ಲಾಬಿ ಮಾಡಿದವರು ಇಂದು ಸಚಿವರಾಗುತ್ತಿದ್ದಾರೆ. ನಾನು ಲಾಬಿ ಮಾಡಲಿಲ್ಲ.ಇದು ನನ್ನ ಸ್ವಯಂಕೃತ ಅಪರಾಧ. ನಾನು ಸಚಿವ ಸ್ಥಾನ ಕೊಡಿ ಎಂದು ಅರ್ಜಿ ಹಾಕಿರಲಿಲ್ಲ ಎಂದು ವ್ಯಂಗ್ಯವಾಡಿದರು.

ಈಗಿನ ಸರ್ಕಾರ ಬೆಂಗಳೂರು ಮತ್ತು ಬೆಳಗಾವಿಗೆ ಸೀಮಿತವಾಗಿದೆ. ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ನಮ್ಮ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಿದ್ದೇವೆ. ನಮ್ಮ ಅಸಮಾಧಾನವನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ನಾನು ಸ್ವಾಭಿಮಾನ ಬಿಟ್ಟು ಬದುಕುವ ವ್ಯಕ್ತಿಯಲ್ಲ.ನನ್ನನ್ನು ಈ ಮಟ್ಟಕ್ಕೆ ತಂದ ಹೊನ್ನಾಳಿ-ನ್ಯಾಮತಿ ಕ್ಷೇತ್ರದ ಜನತೆ ಹೇಳುವಂತೆ ಕೇಳುವ ವ್ಯಕ್ತಿ. ಯಾರ ಬಳಿ ಲಾಬಿ ಮಾಡುವುದಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು. ಮಧ್ಯ ಕರ್ನಾಟಕಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನವಿದೆ.

ದಾವಣಗೆರೆ , ಚಿತ್ರದುರ್ಗ, ಉಡುಪಿ, ಮಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಅವರಿಗಾದರೂ ಮಂತ್ರಿ ಸ್ಥಾನ ಕೊಡಬಹುದಿತ್ತು. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಕಡೆಗಣಿಸುವುದು ಸರಿಯಲ್ಲ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕೆಲವು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಹೇಳಿದರು.

Facebook Comments