ಇದ್ದಕ್ಕಿದ್ದಂತೆ ಪ್ರಹ್ಲಾದ್ ಜೋಷಿ ಭೇಟಿಯಾದ ರೇಣುಕಾಚಾರ್ಯ..!
ಬೆಂಗಳೂರು,ಜ.19- ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲ ಬಿಕ್ಕಟ್ಟು ನಿವಾರಣೆಯಾಗಿದೆ ಎನ್ನುವಷ್ಟರಲ್ಲೇ ಸಂಪುಟದಲ್ಲಿ ಸ್ಥಾನಮಾನ ಸಿಗದ ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೋಮವಾರ ದೆಹಲಿಗೆ ತೆರಳಿದ್ದು ಕುತೂಲಹಕ್ಕೆ ಎಡೆ ಮಾಡಿತ್ತು. ಏಕಾಏಕಿ ಸೋಮವಾರ ದೆಹಲಿಗೆ ತೆರಳಿದ್ದ ಅವರು, ಕೇಂದ್ರದ ಸಚಿವರು ಹಾಗೂ ಪಕ್ಷದ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಇತರೆ ನಾಯಕರನ್ನು ಭೇಟಿಯಾಗಿ ಪ್ರಸಕ್ತ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ನವದೆಹಲಿಯಲ್ಲಿರುವ ಪ್ರಹ್ಲಾದ್ ಜೋಷಿ ಅವರ ನಿವಾಸದಲ್ಲಿ ಭೇಟಿಯಾದ ರೇಣುಕಾಚಾರ್ಯ ಅವರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದರು. ಸಚಿವ ಸಂಪುಟ ವಿಸ್ತರಣೆಯಲ್ಲಿ ಉಂಟಾಗಿರುವ ವ್ಯತ್ಯಾಸ, ಯೋಗೇಶ್ವರ್ಗೆ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಿರುವುದು ಹಾಗೂ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರ ವಿರುದ್ಧ ಟೀಕೆ ಮಾಡುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನಕ್ಕೆ ಆದ್ಯತೆ ನೀಡಿಲ್ಲ. ವಿಶೇಷವಾಗಿ ಮಧ್ಯ ಕರ್ನಾಟಕ, ಕರಾವಳಿ ಭಾಗ, ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ.ಪಕ್ಷ ನಿಷ್ಠರಿಗೆ ತೀವ್ರ ಅಸಮಾಧಾನವಾಗಿದೆ ಎಂದು ಸಚಿವ ಜೋಷಿ ಅವರ ಗಮನಕ್ಕೆ ತಂದಿದ್ದಾರೆ. 3, 4 ಹಾಗೂ 5 ಬಾರಿ ಗೆದ್ದಿರುವ ಶಾಸಕರನ್ನು ಕಡೆಗಣಿಸಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿರುವುದು ನನ್ನನ್ನು ಸೇರಿದಂತೆ ಅನೇಕರಿಗೆ ನೋವುಂಟಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಇಲ್ಲದಿದ್ದರೆ ಪಕ್ಷದ ಸಂಘಟನೆಗೆ ಹಿನ್ನಡೆಯಾಗುತ್ತದೆ ಎಂದು ರೇಣುಕಾಚಾರ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇನ್ನು ಹಾದಿಬೀದಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಅವರ ಹೇಳಿಕೆಯಿಂದಾಗಿ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ವಿರೋಧ ಪಕ್ಷದ ನಾಯಕರಿಗೆ ನಮ್ಮ ವಿರುದ್ಧ ಟೀಕೆ ಮಾಡಲು ಅಸ್ತ್ರ ಸಿಕ್ಕಂತಾಗಿದೆ. ಕೂಡಲೇ ಮಧ್ಯಪ್ರವೇಶಿಸಿ ಯತ್ನಾಳ್ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದರು.
ಎಲ್ಲವನ್ನು ಸಹನೆಯಿಂದಲೇ ಆಲಿಸಿದ ಜೋಷಿ ಅವರು ಪಕ್ಷದ ನಾಯಕರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆತುರದ ನಿರ್ದಾರ ಕೈಗೊಳ್ಳಬಾರದು. ಪಕ್ಷದ ವಿರುದ್ದವೂ ಮಾತನಾಡಬಾರದೆಂದು ಸಲಹೆ ಮಾಡಿದರು. ನಾವು ಪಕ್ಷ ವಿರೋಧಿ ಚಟುವಟಿಕೆ ಸಹಿಸೊಲ್ಲ. ಆಗಿರುವ ಅನ್ಯಾಯವನ್ನು ನಿಮ್ಮ ಗಮನಕ್ಕೆ ತಂದಿದ್ದೇವೆ. ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ಪರಿಹರಿಸಬೇಕೆಂದು ಕೋರಿದ್ದಾರೆ.
# ಯಡಿಯೂರಪ್ಪ ಕರೆ:
ಇನ್ನು ದೆಹಲಿಗೆ ತೆರಳಿದ್ದ ರೇಣುಕಾಚಾರ್ಯ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಯಾವುದೇ ಅಸಮಾಧಾನವಿದ್ದರೂ ತಮ್ಮ ಬಳಿ ಬಂದು ಚರ್ಚೆ ನಡೆಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯಿಂದ ಬಂದ ತಕ್ಷಣ ತಮ್ಮನ್ನು ಭೇಟಿಯಾಗಬೇಕು. ಏನೇ ಸಮಸ್ಯೆಗಳಿದ್ದರೂ ಇತ್ಯರ್ಥಪಡಿಸುತ್ತೇನೆ. ನಿಮಗೆ ಅನ್ಯಾಯವಾಗಿದ್ದರೆ ನ್ಯಾಯ ಒದಗಿಸಲು ನಾನು ಬದ್ದ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಇದರ ಜೊತೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಕೂಡ ಕರೆ ಮಾಡಿ ಅಸಮಾಧಾನವಾಗಿದ್ದರೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಪರಿಹರಿಸಿಕೊಳ್ಳಿ. ನಾವು ಕೂಡ ನಿಮ್ಮ ಬೆಂಬಲಕ್ಕೆ ಇರುತ್ತೇವೆ. ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
# ಯೋಗೇಶ್ವರ್ ವಿರುದ್ಧ ವಾಗ್ದಾಳಿ:
ಕೆಲವರು ನನ್ನ ಪರಿಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹೇಳುತ್ತಿದ್ದಾರೆ. ಮೊದಲು ತಮ್ಮ ಜಿಲ್ಲೆಯಲ್ಲಿ ಬಿಜೆಪಿಯನ್ನು ಎಷ್ಟು ಸಂಘಟಿಸಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಸಚಿವ ಯೋಗೇಶ್ವರ್ ವಿರುದ್ಧವೂ ಎಂಪಿಆರ್ ವಾಗ್ದಾಳಿ ನಡೆಸಿದರು. ನಾವು ಯಾವುದೇ ವ್ಯಕ್ತಿಯ ವಿರುದ್ಧವಾಗಲಿ ಅಥವಾ ಪಕ್ಷದ ವಿರುದ್ಧವಾಗಿ ದೂರು ಕೊಡಲು ಬಂದಿಲ್ಲ. ನಮಗೆ ಅಸಮಾಧಾನವಾಗಿದೆ. ನಮ್ಮ ನಾಯಕರ ಮುಂದೆ ನೋವು ತೋಡಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಯಾರೊಬ್ಬರ ವಿರುದ್ಧ ದೂರು ಕೊಡುವ ಅಗತ್ಯವೂ ಇಲ್ಲ. ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದೇನೆ. ಪಕ್ಷದ ಪ್ರಮುಖರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವ ಯಾವ ಭಾಗಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಮಾಹಿತಿಯನ್ನೂ ನೀಡಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಚುನಾವಣೆಯಲ್ಲಿ ಸೋತವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ಉಂಟಾಗಿರುವುದು ನಿಜ. ಐದಾರು ಬಾರಿ ಗೆದ್ದವರು, ಪಕ್ಷಕ್ಕೆ ದುಡಿದವರಿಗೆ ಕೊಡಬೇಕಿತ್ತು. ಕರಾವಳಿ ಭಾಗ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕಕ್ಕೂ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು.
ನಾವು ಬ್ಲಾಕ್ಮೇಲ್ ಮಾಡುವುದಿಲ್ಲ. ಅಥವಾ ಸಿ.ಡಿಯನ್ನು ತೆಗೆದುಕೊಂಡು ಬಂದಿಲ್ಲ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ. ನಾನು ಈ ಹಿಂದೆ ತಪ್ಪು ಮಾಡಿದ್ದೆ. ಮುಂದೆ ಅಂತಹ ತಪ್ಪು ಮಾಡುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಜನರಿಂದ ಆಯ್ಕೆಯಾಗದ ವ್ಯಕ್ತಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಿದ್ದು, ಸರಿಯಾದ ಕ್ರಮವಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಯಡಿಯೂರಪ್ಪ, ಸಂಘಪರಿವಾರ ಹಾಗೂ ಪಕ್ಷದ ಪ್ರಮುಖರ ಪರಿಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.