‘ಅಪವಿತ್ರ’ ಹೇಳಿಕೆಯಿಂದ ವಿಧಾನಸಭೆಯಲ್ಲಿ ಕಿಚ್ಚು ಹಚ್ಚಿದ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

Renukacharya

ಬೆಂಗಳೂರು, ಜು.6- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಪವಿತ್ರವಾಗಿದೆ ಎಂದು ಆರೋಪಿಸಿದ ಬಿಜೆಪಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಯಾಗಲು ಕಾರಣರಾದರು. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡುತ್ತಿದ್ದ ರೇಣುಕಾಚಾರ್ಯ, ಚುನಾವಣೆಗೆ ಮೊದಲು, ಚುನಾವಣೆಗೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾರೆ. ಸದನದ ಒಳಗೆ ಇದು ಪವಿತ್ರ ಮೈತ್ರಿ ಎನ್ನುತ್ತಾರೆ. ಸದನದ ಹೊರಗೆ ನೀಡಿರುವ ಹೇಳಿಕೆಗಳನ್ನು ನೋಡಿದರೆ
ಆಶ್ಚರ್ಯವಾಗುತ್ತದೆ.

ಮೈತ್ರಿ ಸರ್ಕಾರದ ಹೊಂದಾಣಿಕೆ ಸಂಪೂರ್ಣ ಅಪವಿತ್ರ ಎಂದು ಆರೋಪಿಸಿದರು. ಇದಕ್ಕೆ ಜೆಡಿಎಸ್‍ನ ಶಾಸಕರಾದ ಶ್ರೀನಿವಾಸ್‍ಗೌಡ, ಕೆ.ಅನ್ನದಾನಿ, ಸಚಿವರಾದ ಬಂಡೆಪ್ಪ ಕಾಶಂಪೂರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮೈತ್ರಿಯ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.

ತಮ್ಮ ಮಾತು ಮುಂದುವರೆಸಿದ ರೇಣುಕಾಚಾರ್ಯ ಅವರು, ಲಿಂಗಾಯಿತ, ವೀರಶೈವ ಧರ್ಮವನ್ನು ಒಡೆಯಲು ಹಿಂದಿನ ಸರ್ಕಾರ ಸಂಚು ರೂಪಿಸಿತ್ತು. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿದ್ದರಿಂದ ಧರ್ಮ ಒಡೆಯುವ ಪ್ರಯತ್ನ ನಡೆಸಿದ್ದರು ಎಂದು ದೂರಿದರು.
ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗೇ ಆಗುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.

ಕುಮಾರಸ್ವಾಮಿ ಅವರು ಹಿಂದೆ ಕಾಂಗ್ರೆಸ್ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಡಿವೈಎಸ್‍ಪಿ ಎಂ.ಕೆ.ಗಣಪತಿ, ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಹೋರಾಟ ಮಾಡಿದ್ದರು. ಆಗ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ಹೆಸರು ಈ ಎರಡೂ ಪ್ರಕರಣಗಳಲ್ಲೂ ಕೇಳಿ ಬಂದಿತ್ತು. ಈಗ ಅದೇ ಜಾರ್ಜ್ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇದು ಯಾವ ನೈತಿಕತೆ ಎಂದು ತರಾಟೆಗೆ ತೆಗೆದುಕೊಂಡರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆದಿದೆ. ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ರನ್‍ವೇ ಬಿಟ್ಟು ವಿಮಾನ ಹಾರಾಟವೇ ನಡೆಸಿಲ್ಲ. ರನ್‍ವೇಯ ತುಂಬೆಲ್ಲಾ ಭಾರೀ ನೆಲಬಾಂಬುಗಳೇ ಹುದುಗಿವೆ ಎಂದು ರೇಣುಕಾಚಾರ್ಯ ವಿಶ್ಲೇಷಿಸಿದರು. ಎಸಿಬಿಯನ್ನು ಮುಚ್ಚಿ ಲೋಕಾಯುಕ್ತವನ್ನು ಬಲಪಡಿಸುವುದಾಗಿ ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಹೇಳಿದ್ದರು. ಆದರೆ, ಮುಖ್ಯಮಂತ್ರಿಯಾದ ಮೇಲೆ ಎಸಿಬಿಯನ್ನು ಮುಚ್ಚುವುದಿಲ್ಲ ಎಂದು ಹೈಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮೀರ್‍ಅಹಮ್ಮದ್‍ಖಾನ್ ಅವರು ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ತಲೆ ಕಡಿದುಕೊಳ್ಳುತ್ತೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರು ಶಾಂತಿವನದಲ್ಲಿ ಕೂತು ಸರ್ಕಾರ ಕೆಡವಲು ಪ್ರಯತ್ನ ನಡೆಸಿದ್ದರು. ಒಟ್ಟಾರೆ ಈ ಸರ್ಕಾರ ರಾಜ್ಯದ ಆರೂವರೆ ಕೋಟಿ ಜನರ ಪರವಾಗಿಲ್ಲ. ನಾಲ್ಕು ಜಿಲ್ಲೆಗಳು ಮತ್ತು 37 ಮಂದಿ ಶಾಸಕರಿಗಾಗಿ ಇದೆ ಎಂದು ರೇಣುಕಾಚಾರ್ಯ ಟೀಕಿಸಿದರು.

Facebook Comments

Sri Raghav

Admin