ನೂರಕ್ಕೆ ನೂರರಷ್ಟು ‘ವಿಶ್ವಾಸ’ ಗೆದ್ದೇ ಗೆಲ್ತಿವಿ : ಶಾಸಕ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.27-ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿರುವ ವಿಶ್ವಾಸ ಮತಯಾಚನೆಯಲ್ಲಿ ನಮಗೆ ನೂರಕ್ಕೆ ನೂರರಷ್ಟು ಗೆಲುವು ಸಿಗಲಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತಯಾಚನೆಯಲ್ಲಿಗೆ ಗೆಲ್ಲುವ ಬಗ್ಗೆ ನಮಗೆ ಎಳ್ಳಷ್ಟು ಆತಂಕವಿಲ್ಲ. ನೂರಕ್ಕೆ 100ರಷ್ಟು ಗೆಲ್ಲುವುದು ಖಚಿತ. ಸರ್ಕಾರಕ್ಕೆ ಯಾವ ಅಡ್ಡಿ ಆತಂಕಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನು ಮುಖ್ಯಮಂತ್ರಿ ಹಾಗೂ ಕೇಂದ್ರ ವರಿಷ್ಠರು ತೀರ್ಮಾನಿಸುತ್ತಾರೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಹೇಳಿದರು.

ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಜೆಡಿಎಸ್‍ನಿಂದ ಬೆಂಬಲ ಪಡೆಯಬೇಕೇ ಬೇಡವೇ ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ.  ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ.

ಪಕ್ಷ ವಹಿಸುವ ಕೆಲಸವನ್ನು ನಿಭಾಯಿಸುವುದಷ್ಟೇ ನನ್ನ ಜವಾಬ್ದಾರಿ. ಮುಖ್ಯಮಂತ್ರಿ ಯಡಿಯೂರಪ್ಪ ಏನೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಿದ್ಧ. ಆದರೆ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಡ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ರಾಜ್ಯದ ಜನತೆಗೆ ಆಶ್ವಾಸನೆ ನೀಡಿದಂತೆ ಉತ್ತಮವಾದ ಆಡಳಿತ ನೀಡಬೇಕು. ನಿನ್ನೆ ಯಡಿಯೂರಪ್ಪನವರು ಮೊದಲ ಸಂಪುಟದಲ್ಲಿ ಪ್ರಧಾನಿ ಕಿಸಾನ್ ಯೋಜನೆಯಡಿ ರೈತರಿಗೆ ನಾಲ್ಕು ಸಾವಿರ ಹಾಗೂ ನೇಕಾರರ 100 ಕೋಟಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ನಮ್ಮ ಸರ್ಕಾರದಿಂದ ಇನ್ನಷ್ಟು ಹೊಸ ಹೊಸ ಯೋಜನೆಗಳನ್ನು ನೀಡಬೇಕೆಂಬ ನಿರೀಕ್ಷೆ ಇದೆ. ರೈತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ದೀನದಲಿತರು ಸೇರಿದಂತೆ ಪ್ರತಿಯೊಬ್ಬರಿಗೂ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವುದೇ ನಮ್ಮ ಉದ್ದೇಶ ಎಂದರು.

ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಮುಂದಿನ ದಿನಗಳಲ್ಲಿ ಬಿಜೆಪಿ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದೆ. ಯಡಿಯೂರಪ್ಪನವರ ನಾಯಕತ್ವ, ಕೇಂದ್ರ ಸರ್ಕಾರದ ಸಹಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ನಮಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ಘಂಟೆಯಲ್ಲೇ ಯಡಿಯೂರಪ್ಪನವರು ಎರಡು ಮಹತ್ವದ ನಿರ್ಧಾರಗಳನ್ನು ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲೂ ನಮ್ಮ ಸರ್ಕಾರದ ವತಿಯಿಂದ ಇನ್ನಷ್ಟು ಯೋಜನೆಗಳನ್ನು ನೀಡಲಿದ್ದೇವೆ. ಸಂಕಷ್ಟದಲ್ಲಿರುವ ರೈತನ ನೆರವಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.

Facebook Comments

Sri Raghav

Admin