ನಾಳೆಯಿಂದ ಷರತ್ತುಗಳೊಂದಿಗೆ ದೇವರ ದರ್ಶನ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.7- ದೇವರ ದರ್ಶನಕ್ಕೆ ಕಾತರರಾಗಿರುವ ಭಕ್ತರಿಗೆ ನಾಳೆಯಿಂದ ದರ್ಶನ ಭಾಗ್ಯ ಸಿಗಲಿದೆ. ಆದರೆ, ಸಾಮಾಜಿಕ ಅಂತರ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಿಯೇ ದೇವರ ದರ್ಶನ ಪಡೆಯಬೇಕಿದೆ.  ಕಂಟೈನ್ಮೆಂಟ್ ವಲಯಗಳಲ್ಲಿರುವ ದೇವಾಲಯಗಳನ್ನು ಹೊರತುಪಡಿಸಿ ಎಲ್ಲ ದೇವಸ್ಥಾನಗಳನ್ನೂ ಭಕ್ತರ ದರ್ಶನಕ್ಕೆ ತೆರೆಯಲಾಗಿದೆ.

ಪ್ರತಿಷ್ಠಿತ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಬಾದಾಮಿ ಬನಶಂಕರಿ ದೇವಾಲಯ, ಮಲೆ ಮಹದೇಶ್ವರ, ಮೈಸೂರಿನ ಚಾಮುಂಡೇಶ್ವರಿ, ಹುಬ್ಬಳ್ಳಿಯ ಸಿದ್ಧಾರೂಢ ಮಠ, ನಂಜನಗೂಡಿನ ನಂಜುಂಡೇಶ್ವರ, ರೇಣುಕಾದೇವಿ ದೇವಸ್ಥಾನ ಸೇರಿದಂತೆ ಬಹುತೇಕ ಎಲ್ಲ ದೇವಸ್ಥಾನಗಳೂ ತೆರೆಯಲಿದ್ದು, ಈಗಾಗಲೇ ಭಕ್ತರು ದೇವಾಲಯಗಳತ್ತ ತೆರಳಿದ್ದಾರೆ.

ನಾಳೆ ಸ್ನಾನ ಮಾಡಿ ಮಡಿಯುಟ್ಟು ದೇವರ ದರ್ಶನಕ್ಕೆ ತೆರಳುವುದರ ಜತೆಗೆ ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಜರ್‍ನಿಂದ ಕೈ ತೊಳೆದು ಸಾಮಾಜಿಕ ಅಂತರ ಕಾಯ್ದುಕೊಂಡು ದೇವಸ್ಥಾನಕ್ಕೆ ತೆರಳಬೇಕು. ನಾಳೆ ದೇವಾಲಯಗಳಲ್ಲಿ ಭಗವಂತನ ದರ್ಶನ ಮಾತ್ರವಿರುತ್ತದೆ. ಯಾವುದೇ ಸೇವೆಗಳಿಗೆ ಅವಕಾಶವಿರುವುದಿಲ್ಲ. ಅನ್ನದಾನ, ಪ್ರಸಾದ ವಿನಿಯೋಗ, ಯಾವುದೇ ಪೂಜೆ-ಪುನಸ್ಕಾರಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ. ತಾವು ತಮ್ಮವರೊಂದಿಗೆ ದೇವಾಲಯಕ್ಕೆ ತೆರಳಿ ಭಗವಂತನ ದರ್ಶನ ಮಾಡಿಕೊಂಡು ಬರಬೇಕು.

ಪ್ರತಿದಿನ ದೇವಸ್ಥಾನಗಳಲ್ಲಿ ಪೂಜೆ, ಹೋಮ-ಹವನ, ವಿಶೇಷ ಪೂಜೆಗಳು ಜರುಗುತ್ತಿದ್ದವು. ಆದರೆ, ತಾತ್ಕಾಲಿಕವಾಗಿ ಎಲ್ಲವನ್ನೂ ಸ್ಥಗಿತಗೊಳಿಸಿ ದೇವಾಲಯವನ್ನು ಮಾತ್ರ ತೆರೆಯಲಾಗಿದೆ.  ನಾಳೆ ಬರುವ ಭಕ್ತರಿಗಾಗಿ ಎಲ್ಲ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳು, ಖಾಸಗಿ ದೇವಾಲಯಗಳ ಟ್ರಸ್ಟ್ ಹಾಗೂ ಆಡಳಿತ ಮಂಡಳಿಯವರು ಯಾವುದೇ ತೊಂದರೆಯಾಗದಂತೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ.

ದೇವಾಲಯಗಳಿಗೆ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ. ಬರುವ ಭಕ್ತರು ದೇವಸ್ಥಾನ ಪ್ರವೇಶಕ್ಕೂ ಮುನ್ನ ಸ್ಯಾನಿಟೈಜರ್‍ನಿಂದ ಕೈ ತೊಳೆದು ಒಳ ಪ್ರವೇಶಿಸಬೇಕು. ಭಕ್ತರು ಹಣ್ಣು-ಕಾಯಿ, ಊದುಗಡ್ಡಿ, ಹರಕೆಗೆ ಸಂಬಂಧಿಸಿದ ಯಾವುದೇ ಪದಾರ್ಥಗಳನ್ನು ತರದಂತೆ ಸೂಚಿಸಲಾಗಿದೆ. ಅದೇ ರೀತಿ ದೇವಾಲಯಗಳಲ್ಲಿ ಅಳವಡಿಸಿರುವ ಕಂಬಿಗಳನ್ನೂ ಸ್ಪರ್ಶಿಸದಂತೆ, ಗಂಟೆ ಬಾರಿಸಲು ಸಹ ಅವಕಾಶ ನೀಡಲಾಗಿಲ್ಲ ಸೂಚನೆ ನೀಡಲಾಗಿದೆ.

ಕಳೆದ 70 ದಿನಗಳಿಂದ ರಾಜ್ಯಾದ್ಯಂತ ಎಲ್ಲ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಬೀದರ್‍ನಿಂದ ಕೋಲಾರದವರೆಗೆ ಇರುವ ಎಲ್ಲ ದೇವಾಲಯಗಳೂ ಮುಚ್ಚಿದ್ದವು. ನಾಳೆಯಿಂದ ಎಲ್ಲವನ್ನೂ ತೆರೆಯಲು ನಿರ್ಧರಿಸಲಾಗಿದ್ದು, ಬರುವ ಭಕ್ತರಿಗಾಗಿ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಸಂಗೀತ, ಭಜನೆಯಂತಹ ಕಾರ್ಯಕ್ರಮಗಳು ಇರುತ್ತವೆ. ಅದನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಪೂಜಾ ಕಾರ್ಯಕ್ರಮಗಳು ಇರುವುದಿಲ್ಲ. ಕೇವಲ ಸರದಿ ಸಾಲಿನಲ್ಲಿ ನಿಂತು ಭಗವಂತನ ದರ್ಶನ ಮಾಡಿ ಬರಬೇಕು. ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಹಂತ ಹಂತವಾಗಿ ವ್ಯವಸ್ಥೆಗಳನ್ನು ಬದಲಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.

ಲಾಕ್‍ಡೌನ್ ಸಡಿಲಗೊಳಿಸಿ ಎಲ್ಲ ದೇವಾಲಯಗಳನ್ನೂ ತೆರೆಯಲಾಗಿದೆ. ಆದರೆ, ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿಲ್ಲ. ದೇವಾಲಯಗಳಿಗೆ ಬರುವ ಭಕ್ತರು ಸ್ವಯಂ ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಆಗುತ್ತದೆ. ಸರ್ಕಾರ ರೂಪಿಸಿರುವ ಎಲ್ಲ ಮಾರ್ಗಸೂಚಿಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು.

ಹೊರನಾಡು ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾ ಪರಮೇಶ್ವರಿ, ಮಂತ್ರಾಲಯದ ರಾಯರ ದೇಗುಲವನ್ನು ನಾಳೆ ತೆರೆಯುವುದಿಲ್ಲ. ಬೇರೆ ಬೇರೆ ಕಡೆಯಿಂದಲೂ ಭಕ್ತರು ಈ ದೇಗುಲಗಳಿಗೆ ಬರುವುದರಿಂದ ಸೂಕ್ತ ವ್ಯವಸ್ಥೆ ಕೈಗೊಂಡು ದರ್ಶನಕ್ಕೆ ಅವಕಾಶ ನೀಡಬೇಕಿದ್ದು, ಅದಕ್ಕಾಗಿ ಇದೇ 15ರ ನಂತರ ಈ ದೇವಾಲಯಗಳನ್ನು ತೆರೆಯಲು ಆಡಳಿತ ಮಂಡಳಿಯವರು ತೀರ್ಮಾನಿಸಿದ್ದಾರೆ.

ಮಠ-ಮಂದಿರಗಳಲ್ಲೂ ಸಿದ್ಧತೆ: ದೇವಾಲಯಗಳಂತೆ ಮಠ-ಮಂದಿರಗಳನ್ನೂ ನಾಳೆಯಿಂದ ತೆರೆಯಲಿದ್ದು, ಶ್ರೀಗಳ ಗದ್ದುಗೆ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.ತುಮಕೂರಿನ ಶ್ರೀ ಸಿದ್ಧಗಂಗಾ ಮಠ, ಹುಬ್ಬಳ್ಳಿಯ ಮೂರುಸಾವಿರ ಮಠ ಸೇರಿದಂತೆ ರಾಜ್ಯದ ಮಠ-ಮಂದಿರಗಳು ನಾಳೆಯಿಂದ ಭಕ್ತರಿಗೆ ತೆರೆದುಕೊಳ್ಳಲಿವೆ. ಅಲ್ಲೂ ಕೂಡ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Facebook Comments