ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪಾಕ್ ಸಂಚು, ದೇಶಾದ್ಯಂತ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.23- ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪಾಕ್ ಬೆಂಬಲಿತ ಭಯೋತ್ಪಾದಕರ ವಿಧ್ವಂಸಕ ಕೃತ್ಯಗಳ ಸಾಧ್ಯತೆಯ ಆತಂಕ ಈ ಬಾರಿ ಹಿಂದೆಂದಿಗಿಂತಲೂ ಆಘಾತಕಾರಿಯಾಗಿದ್ದು, ಸಂಭವನೀಯ ದಾಳಿಗಳನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ದೇಶಾದ್ಯಂತ ವ್ಯಾಪಕ ವಿರೋಧ ಮತ್ತು ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿಷಯದಲ್ಲಿ ಪ್ರತಿಭಟನೆಗಳು ಮುಂದುವರೆದಿರುವ ಸಂದರ್ಭದಲ್ಲೇ ಪರಿಸ್ಥಿತಿಯ ದುರ್ಲಾಭ ಪಡೆದು ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ದೆಹಲಿ, ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನದ ಉಗ್ರಗಾಮಿಗಳು ಸಜ್ಜಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ಬಹಿರಂಗಗೊಳಿಸಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಹಿಜ್ಬುಲ್ ಮುಜಾಹಿದ್ದೀನ್ (ಎಚ್‍ಎಂ) ಉಗ್ರಗಾಮಿಗಳ ಜತೆಗಿದ್ದು, ಭಾರೀ ಆತಂಕ ಸೃಷ್ಟಿಸಿದ್ದ ಡಿವೈಎಸ್‍ಪಿ ದೇವೇಂದ್ರಸಿಂಗ್ ಮತ್ತು ಇಬ್ಬರು ಭಯೋತ್ಪಾದಕರ ಬಂಧನದ ನಂತರ ಕೆಲವು ಆಘಾತಕಾರಿ ಸಂಗತಿಗಳು ಬಯಲಾಗಿವೆ. ಡಿವೈಎಸ್‍ಪಿ ಜತೆ ಬಂಧಿತನಾದ ಕುಖ್ಯಾತ ಭಯೋತ್ಪಾದಕ ನವೀದ್‍ಬಾಬು ಗಣರಾಜ್ಯೋತ್ಸವ ದಿನದಂದು ದೆಹಲಿ ಮತ್ತು ಕಾಶ್ಮೀರದ ಹಲವೆಡೆ ಬಾಂಬ್ ಸ್ಫೋಟಗಳನ್ನು ನಡೆಸಲು ಸಜ್ಜಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ಸ್ಫೋಟಕಗಳನ್ನು ಪೂರೈಸಲು ಭಾರೀ ಸಿದ್ದತೆ ನಡೆಸಿದ್ದ ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಈ ಬಗ್ಗೆ ರಕ್ಷಣಾ ಗುಪ್ತಚರ ಸಂಸ್ಥೆ (ಡಿಐಎ) ಕೆಲವು ಆತಂಕಕಾರಿ ಸಂಗತಿಗಳನ್ನು ಬಹಿರಂಗಗೊಳಿಸಿದೆ. ಶ್ರೀನಗರ, ಫುಲ್ವಾಮಾ, ಝದುರಾ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹಾಗೂ ದೆಹಲಿಯ ಕೆಲವು ಕಡೆ ಬಾಂಬ್ ಸ್ಫೋಟ ಮತ್ತು ವಿಧ್ವಂಸಕ ಕೃತ್ಯವೆಸಗಲು ಎಚ್‍ಎಂ ಉಗ್ರರಿಗೆ ನವೀದ್ ಬಾಬು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸಿದ್ಧತೆಯಲ್ಲಿದ್ದಾಗಲೇ ಪೊಲೀಸರು ಆತನನ್ನು ಬಂಧಿಸಿರುವುದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ಈತ ದಕ್ಷಿಣ ಮತ್ತು ಮಧ್ಯ ಕಾಶ್ಮೀರದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥನಾಗಿದ್ದ. ಸ್ಥಳೀಯ ಉಗ್ರರನ್ನು ನೇಮಕ ಮಾಡಿಕೊಳ್ಳುವಲ್ಲಿ ಅತ್ಯಂತ ಚತುರನಾಗಿದ್ದ ಈತನನ್ನು ಐಇಡಿ ಎಕ್ಸ್‍ಫೋರ್ಟ್ (ಅತ್ಯಾಧುನಿಕ ಸುಧಾರಿತ ಸ್ಫೋಟಗಳ ಪರಿಣಿತ) ಎಂದೇ ಭಯೋತ್ಪಾದಕರ ವಲಯದಲ್ಲಿ ಗುರುತಿಸಲಾಗಿತ್ತು.

ಕಳೆದ ವರ್ಷ ಕಾಶ್ಮೀರ ಕಣಿವೆಯಲ್ಲಿ ಪೊಲೀಸರು, ಯೋಧರು ಮತ್ತು ಸಾರ್ವಜನಿಕರನ್ನು ಹತ್ಯೆ ಮಾಡಿದ 11ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದ. ಅಲ್ಲದೆ, ಸೇನಾ ಕ್ಯಾಂಪ್‍ಗಳ ಮೇಲೆ ದಾಳಿ ನಡೆಸಿ ಬಂದೂಕು, ಸ್ಫೋಟಕಗಳು ಮತ್ತು ಇತರ ಮದ್ದುಗುಂಡುಗಳನ್ನು ಅಪಹರಿಸಿದ ಪ್ರಕರಣಗಳಲ್ಲೂ ಈತನ ಕೈವಾಡವಿದೆ.

ಡಿವೈಎಸ್‍ಪಿ ಸಿಂಗ್ ಜತೆ ನವೀದ್ ಬಾಬು ಮತ್ತು ಅಕ್ರಂ ಆಷಿಕ್ ಬಂಧನದ ನಂತರ ಲಭಿಸಿದ ಖಚಿತ ಸುಳುವಿನ ಮೇರೆಗೆ ಈಗಾಗಲೇ ಮತ್ತಿತರ ಕಡೆ ಯೋಧರು ದಾಳಿ ನಡೆಸಿ ಎಕೆ47, ಎಕೆ56, ಸ್ಫೋಟಕಗಳು ಹಾಗೂ ಭಾರೀ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಹರಣ ನಿಗ್ರಹ ದಳದ ಡಿವೈಎಸ್‍ಪಿಯಾಗಿದ್ದ ಸಿಂಗ್ ಹಿಜ್ಬುಲ್ ಉಗ್ರರೊಂದಿಗೆ ಶಾಮೀಲಾಗಿರುವುದು ದೃಢಪಟ್ಟಿದ್ದು, ಆತನಿಂದ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಸಿಂಗ್ ಕರ್ತವ್ಯ ನಿರ್ವಹಣೆಯಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಏರ್‍ಫೋರ್ಟ್‍ಗೆ ನುಸುಳಲು ಅವಕಾಶ ನೀಡಿದ್ದ ವರದಿಗಳ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ನವೀದ್‍ಬಾಬು ಸಂಪರ್ಕಹೊಂದಿರುವ ಫುಲ್ವಾಮಾದ ಉಗ್ರರು ಈಗಾಗಲೇ ದೆಹಲಿಗೆ ನುಸುಳಿರುವ ಸಾಧ್ಯತೆ ಬಗ್ಗೆಯೂ ವರದಿಗಳು ಇರುವುದರಿಂದ ಶಂಕಿತರಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ದೆಹಲಿ ಮತ್ತು ದೇಶದಾದ್ಯಂತ ಗಣರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳು ನಡೆಯದಂತೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಭದ್ರತಾ ಪಡೆಗಳ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

Facebook Comments