ಸಂಭ್ರಮದ ಗಣರಾಜ್ಯೋತ್ಸವಕ್ಕೆ ಸರ್ವ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.24- ಈ ಬಾರಿಯ 71ನೆ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭಾನುವಾರ ಬೆಳಗ್ಗೆ 8.58ಕ್ಕೆ ಸರಿಯಾಗಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಗಣರಾಜ್ಯೋತ್ಸವದಲ್ಲಿ 44 ತುಕಡಿಗಳು ಹಾಗೂ 1750 ವಿದ್ಯಾರ್ಥಿಗಳಿಂದ ಕವಾಯತು ಮತ್ತು ಪಥ ಸಂಚಲನ ನಡೆಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದರು.

ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮದ ವೀಕ್ಷಣೆಗೆ 10 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿ-2 ಪ್ರವೇಶದ್ವಾರದ ಮೂಲಕ ಆಗಮಿಸುವ ಅತಿಗಣ್ಯ ವ್ಯಕ್ತಿಗಳಿಗಾಗಿ 2000, ಜಿ-1 ಪ್ರವೇಶದ ಮೂಲಕ ಆಗಮಿಸುವ ರಕ್ಷಣಾ ಇಲಾಖೆ ಮತ್ತಿತರ ಅಧಿಕಾರಿಗಳಿಗಾಗಿ 2000, ಜಿ-3 ಪ್ರವೇಶದ್ವಾರದ ಮೂಲಕ ಆಗಮಿಸುವ ನಿವೃತ್ತ ಸೇನಾಧಿಕಾರಿಗಳು ಮತ್ತು ಇತರ ಇಲಾಖೆ ಅಧಿಕಾರಿಗಳಿಗೆ 2000 ಹಾಗೂ ಜಿ-4 ಪ್ರವೇಶದ್ವಾರದ ಮೂಲಕ ಆಗಮಿಸುವ ಸಾರ್ವಜನಿಕರಿಗೆ 4000 ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಧ್ವಜಾರೋಹಣದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಇದೇ ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರಿಂದ ಸ್ವಚ್ಛ ಭಾರತ್ ಅಭಿಯಾನ ಜಾಗೃತಿ ಕುರಿತ ಪಥ ಸಂಚಲನ ಹಾಗೂ ಶ್ವಾನದಳ ಪ್ರಮುಖ ಆಕರ್ಷಣೆಯಾಗಲಿದೆ. ಮೂರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿವಿಧ ಶಾಲೆಗಳ 2000 ಮಕ್ಕಳು ಪಾಲ್ಗೊಳ್ಳಲಿದ್ದು, ಆಕರ್ಷಕ ಮೋಟಾರ್ ಬೈಕ್ ಸ್ಟಂಟ್, ರಾಜ್ಯ ಪೊಲೀಸ್ ಗರುಡ ಪಡೆಯಿಂದ ಅಣಕು ಪ್ರದರ್ಶನದ ಜತೆಗೆ ಇದೇ ಮೊದಲ ಬಾರಿಗೆ ಪರೇಡ್‍ನಲ್ಲಿ ಗೋವಾ ಪೊಲೀಸರು ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಸಾಂಸ್ಕøತಿಕ ಕಾರ್ಯಕ್ರಮ: ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ, ತಾವರೆಕೆರೆಯ ವಿಇಎಸ್ ಮಾಡೆಲ್ ಕಾನ್ವೆಂಟ್ ಶಾಲೆಯ 600 ಮಕ್ಕಳಿಂದ ಹಮಾರಾ ಭಾರತ್ ಮಹಾನ್ ಕಾರ್ಯಕ್ರಮ, ಚಾಮರಾಜಪೇಟೆ ಬಿಬಿಎಂಪಿ ಶಾಲೆಯ 600 ಮಕ್ಕಳಿಂದ ಕಲ್ಯಾಣ ಕ್ರಾಂತಿ, ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳಿಂದ ಭಾರತ ಭಾಗ್ಯವಿಧಾತ ಕಾರ್ಯಕ್ರಮ ನಡೆಯಲಿದೆ.

ದ ಆರ್ಮಿ ಸರ್ವೀಸ್‍ನ 20 ಸದಸ್ಯರಿಂದ ದ ಟೋರ್ನಾಡಸ್ (ಮೋಟರ್ ಸೈಕಲ್ ಪ್ರದರ್ಶನ) ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಆಂತರಿಕ ಭದ್ರತಾ ವಿಭಾಗದ ಗರುಡ ಪಡೆಯ 27 ಸದಸ್ಯರಿಂದ ಬಸ್ ಇಂಟರ್ವೆನ್ಷನ್ ಕುರಿತ ಅಣಕು ಪ್ರದರ್ಶನ ನೆರವೇರಲಿದೆ.

ನಿಷಿದ್ಧ: ಗಣರಾಜ್ಯೋತ್ಸವ ನಡೆಯುವ ಸ್ಥಳಕ್ಕೆ ಸಿಗ ರೇಟ್, ಬೆಂಕಿಪೊಟ್ಟಣ, ಕರಪತ್ರಗಳು, ಹರಿತವಾದ ವಸ್ತುಗಳು, ಚಾಕು-ಚೂರಿ, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮೆರಾ, ಮೊಬೈಲ್, ಹೆಲ್ಮೆಟ್, ಕೊಡೆ, ನೀರಿನ ಬಾಟಲ್, ಕ್ಯಾನ್, ಶಸ್ತ್ರಾಸ್ತ್ರಗಳು, ಮದ್ಯದ ಬಾಟಲ್, ತಿಂಡಿ-ತಿನಿಸು, ಬಾವುಟಗಳು, ಪಟಾಕಿ ಮತ್ತಿತರ ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ. ನಿಷೇಧಿತ ವಸ್ತುಗಳನ್ನು ಹೊಂದಿರುವ ವ್ಯಕ್ತಿಗಳು ಮೈದಾನ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಭಾಸ್ಕರ್‍ರಾವ್ ತಿಳಿಸಿದರು.

ಪ್ರತಿಭಟನೆಗೆ ಅವಕಾಶವಿಲ್ಲ: ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬವಾಗಿರುವುದರಿಂದ ಆ ದಿನ ನಗರದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಯಾರೂ ರಾಷ್ಟ್ರೀಯ ಹಬ್ಬದಂದು ಪ್ರತಿಭಟನೆ ಮಾಡಬಾರದು. ಸಮಯಕ್ಕೆ ಸರಿಯಾಗಿ ದೇಶಭಕ್ತಿಯೊಂದಿಗೆ ಮೈದಾನಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಪ್ರವೇಶದ್ವಾರದಲ್ಲಿ ಪೆÇಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ನಿಗದಿಪಡಿಸಿದ ಸ್ಥಳದಲ್ಲಿ ಕುಳಿತು ಸಮಾರಂಭ ವೀಕ್ಷಿಸುವಂತೆ ಭಾಸ್ಕರ್‍ರಾವ್ ಮನವಿ ಮಾಡಿಕೊಂಡರು.

ವಿವಿಧ ಪಾಸ್: ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ನಾಲ್ಕು ಬಗೆಯ ಪಾಸ್ ವಿತರಣೆ ಮಾಡಲಾಗಿದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದರು. ಹಳದಿ ಮತ್ತು ಬಿಳಿ ಪಾಸ್ ಹೊಂದಿರುವವರಿಗೆ ಪರೇಡ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಿಂಕ್‍ಪಾಸ್ ಹೊಂದಿರುವವರು ಸಫೀನಾ ಫ್ಲಾಜಾ, ಆರ್ಮಿ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬಹುದು. ಹಸಿರು ಪಾಸ್ ಹೊಂದಿರುವವರು ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಬೇಕಾಗಿದೆ.

ಇಲ್ಲಿ ವಾಹನ ನಿಲುಗಡೆ ಇಲ್ಲ: ಮಾಣಿಕ್ ಷಾ ಮೈದಾನದ ಸುತ್ತಮುತ್ತಲ ಪ್ರದೇಶಗಳಾದ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ಸರ್ಕಲ್‍ನಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್‍ರಸ್ತೆ, ಸಿಟಿಒ ವೃತ್ತದಿಂದ ಕೆಆರ್ ರಸ್ತೆ ಮತ್ತು ಕಬ್ಬನ್‍ರಸ್ತೆ ವರೆಗೆ, ಎಂಜಿ ರೋಡ್, ಅನಿಲ್‍ಕುಂಬ್ಳೆ ರಸ್ತೆಯಿಂದ ಕ್ವೀನ್ಸ್ ವೃತ್ತದವರೆಗೂ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ರವಿಕಾಂತೇಗೌಡ ಹೇಳಿದರು.

#ಬದಲಿ ಮಾರ್ಗ: ಭಾನುವಾರ ಎಂಜಿ ರಸ್ತೆ ಹಾಗೂ ಕಬ್ಬನ್ ರಸ್ತೆಯ ಕೆಲ ಭಾಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಪ್ರಯಾಣಿಕರು ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 8 ರಿಂದ 10.30ರ ವರೆಗೆ ಕಬ್ಬನ್‍ರಸ್ತೆಯ ಬಿಆರ್‍ವಿ ಜಂಕ್ಷನ್‍ನಿಂದ ಕಾಮರಾಜ ಜಂಕ್ಷನ್‍ವರೆಗೂ ಎರಡು ಪಥಗಳಲ್ಲೂ ಸಂಚಾರ ನಿರ್ಬಂಧಿಸಲಾಗಿದೆ.

ಕಬ್ಬನ್‍ಪಾರ್ಕ್, ಬಿಆರ್‍ವಿ ಜಂಕ್ಷನ್ ಕಡೆಯಿಂದ ಮಣಿಪಾಲ್ ಕಡೆಗೆ ಸಂಚರಿಸುವ ವಾಹನಗಳು ಇನ್‍ಫೆಂಟ್ರಿ ರಸ್ತೆಗೆ ಬಂದು ಸಫೀನಾ ಫ್ಲಾಜಾದ ಬಳಿ ಎಡತಿರುವು ಪಡೆದು ಮೈನ್‍ಗಾಡ್ ರಸ್ತೆ-ಆಲಿ ಅಸ್ಗರ್ ವೃತ್ತ-ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ಜಂಕ್ಷನ್ ಮೂಲಕ ಮಣಿಪಾಲ್ ಸೆಂಟರ್‍ಗೆ ತೆರಳಬಹುದು.
ಮಣಿಪಾಲ್ ಸೆಂಟರ್ ಕಡೆಯಿಂದ ಡಿಆರ್‍ವಿ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಎಂಜಿ ರಸ್ತೆಗೆ ತೆರಳಿ ಅನಿಲ್‍ಕುಂಬ್ಳೆ ವೃತ್ತದಲ್ಲಿ ಎಡಕ್ಕೆ ತಿರುವು ಪಡೆದು ಸಾಗಬಹುದು.

ಗಣರಾಜ್ಯೋತ್ಸವದಂದು ಎಂಜಿ ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರು ಸಾರ್ವಜನಿಕ ಹಿತದೃಷ್ಟಿಯಿಂದ ಸಮೂಹ ಸಾರಿಗೆ ಇಲ್ಲವೆ ಮೆಟ್ರೋ ರೈಲು ಸಂಚಾರವನ್ನು ಬಳಕೆ ಮಾಡಿಕೊಳ್ಳುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

Facebook Comments