ಮಾಣಿಕ್‍ಷಾ ಮೈದಾನದಲ್ಲಿ ಮೇಳೈಸಿದ ಸಾಂಸ್ಕೃತಿಕ ಹಾಗೂ ಸಾಹಸ ಕಾರ್ಯಕ್ರಮಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.26- 71ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್‍ಷಾ ಮೈದಾನದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಅವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಹೆಲಿಕಾಪ್ಟರ್‍ನಿಂದ ಪುಷ್ಪವೃಷ್ಟಿ ಮಾಡಲಾಯಿತು. ಇದರೊಂದಿಗೆ ಆರಂಭವಾ ಗಣರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಸಾಂಸ್ಕøತಿಕ ಹಾಗೂ ಸಾಹಸ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ನಾಡಿನ ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಪೊಲೀಸ್ ತುಕಡಿಗಳು ನಡೆಸಿದ ಪ್ರದರ್ಶನಗಳು ಕಣ್ಮನ ಸೆಳೆದವು. ಕಿಕ್ಕಿರಿದು ನೆರೆದಿದ್ದ ಮೈದಾನದಲ್ಲಿ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಗರದ ವಿವಿಧ ಸರ್ಕಾರಿ ಶಾಲಾ ಮಕ್ಕಳು ನಾಡಗೀತೆ ಸೇರಿದಂತೆ ದೇಶ ಪ್ರೇಮದ ಸಂಕೇತವಾದ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿದರು.

ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ನಡೆಸಿಕೊಡಲಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ತಾವರೆಕೆರೆ ಎಇಎಸ್ ಮಾಡಲ್ ಕಾನ್ವೆಂಟ್ ಶಾಲೆಯ 600 ಮಕ್ಕಳು ನಡೆಸಿಕೊಟ್ಟ ಹಮಾರ ಭಾರತ್ ಮಹಾನ್ ಎಂಬ ಕಾರ್ಯಕ್ರಮ ಭಾರತದ ಹೆಗ್ಗಳಿಕೆಯನ್ನು ಎತ್ತಿ ಹಿಡಿಯಿತು.

ಚಾಮರಾಜಪೇಟೆ, ಪಾದರಾಯನಪುರ, ಕಸ್ತೂರಿಬಾ ನಗರದ ಬಿಬಿಎಂಪಿ ಪ್ರೌಢಶಾಲೆಗಳ 600 ಮಕ್ಕಳು ಪ್ರದರ್ಶಿಸಿದ ಕಲ್ಯಾಣ ಕ್ರಾಂತಿ ಎಂಬ ನೃತ್ಯ ಕನ್ನಡ ನಾಡಿನ ಇತಿಹಾಸದಲ್ಲಿ 12ನೇ ಶತಮಾನವನ್ನು ವಚನಕಾರರು ಹಾಗೂ ಶಿವಶರಣರ ತತ್ವ ನಿಷ್ಠೆಗಳಿಂದ ಉಂಟಾದ ಕಲ್ಯಾಣ ಕ್ರಾಂತಿ ಆದಾಗ ಶರಣ ವಿರೋಧಿಗಳ ಸೈನ್ಯವು ಹಿಂಸೆಗಳನ್ನು ಹಿಮ್ಮೆಟ್ಟಿಸಿ ನಡೆದ ಅಭಿವ್ಯಕ್ತಿ ಹೋರಾಟದ ಚಿತ್ರಣ ಮೂಡಿಬಂತು.

ಬೆಂಗಳೂರು ಉತ್ತರ ಜಿಲ್ಲೆಯ ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳು ನಡೆಸಿಕೊಟ್ಟ ಭಾರತ ಭಾಗ್ಯವಿದಾತ ಎಂಬ ಕಾರ್ಯಕ್ರಮದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಯಶೋಗಾಧೆ ಅಡಕವಾಗಿತ್ತು. ನೊಂದವರ ದನಿಯಾಗಿ ನಿಂತ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಆತ್ಮ ಚರಿತ್ರೆಯ ವಿಷಯಗಳು ರೋಮಾಂಚನ ಮೂಡಿಸಿತು.

ರಾಜ್ಯದ ಆಂತರಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನಾ ನಿಗ್ರಹ ದಳ ಮತ್ತು ನಕ್ಸಲ್ ನಿಗ್ರಹ ಪಡೆಗಳ ಕಾರ್ಯಾಚರಣೆ ಹೆಚ್ಚಿನ ನೀಡಲು ಬಳಸುತ್ತಿರುವ ಬೆಲ್ಜಿಯಂ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನಗಳ ವಿಶೇಷ ಪ್ರದರ್ಶನ ನಡೆಯಿತು.  ದಿ ಆರ್ಮಿ ಸರ್ವೀಸ್ ಕಾಪ್ರ್ಸ್‍ನ 20 ಸದಸ್ಯರ ತಂಡ ಪ್ರಸ್ತುತಪಡಿಸಿದ ದಿ ಟೊರ್ನಾಡಸ್(ಮೋಟರ್ ಸೈಕಲ್ ಪ್ರದರ್ಶನ)ನಲ್ಲಿ ಬೈಕ್ ಸವಾರರು ನೀಡಿದ ಅಮೋಘ ಪ್ರದರ್ಶನ ಬೆರಗುಗೊಳಿಸಿತು. ಸಾಹಸ ದೃಶ್ಯಗಳು ಮೈನವಿರೇಳಿಸಿತು.

ಕರ್ನಾಟಕ ರಾಜ್ಯ ಪೊಲೀಸ್ ಆಂತರಿಕ ಭದ್ರತಾ ವಿಭಾಗ ಗರುಡ ಪಡೆಯ ಅಣುಕು ಪ್ರದರ್ಶನ 27 ಸದಸ್ಯರ ತಂಡದಿಂದ ಮೂಡಿಬಂತು. ಭಯೋತ್ಪಾದನಾ ದಾಳಿಯ ನಿಗ್ರಹ ಕಾರ್ಯಾಚರಣೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಶಸ್ತ್ರ ಸಜ್ಜಿತ ತರಬೇತಿ ಹೊಂದಿದ ಗರುಡಾ ಪಡೆ ಬಸ್‍ನ್ನು ಭಯೋತ್ಪಾದಕರ ಹಿಡಿದಿಟ್ಟಾಗ ಅವರಿಂದ ರಕ್ಷಿಸುವ ಅಣಕು ಪ್ರದರ್ಶನವನ್ನು ನೀಡಿತು. ಇಂತಹ ಸಂದರ್ಭದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಕಾರ್ಯಕ್ರಮ ನಡೆಯಿತು.

Facebook Comments