ಗಣರಾಜ್ಯೋತ್ಸವದಂದು ಭಾರೀ ವಿಧ್ವಂಸಕ ಕೃತ್ಯಕ್ಕೆ ಪಾಕ್ ಉಗ್ರರ ಬಿಗ್ ಪ್ಲಾನ್ ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.15- ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನದ ವಕ್ರದೃಷ್ಟಿ ಭಾರತದ ಮೇಲೆ ಬೀಳುತ್ತದೆ. ಈ ಬಾರಿಯೂ ಕೂಡ ಗಣತಂತ್ರ ದಿನಾಚರಣೆಯಂದು ಭಾರೀ ವಿಧ್ವಂಸಕ ಕೃತ್ಯ ನಡೆಸಲು ಪಾಕ್ ಬೆಂಬಲಿತ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭಿಸಿದ್ದು , ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಗಣರಾಜ್ಯೋತ್ಸವ ವೇಳೆ ರಾಷ್ಟ್ರ ರಾಜಧಾನಿ ದೆಹಲಿ ಅಥವಾ ಗುಜರಾತಿನಲ್ಲಿ ಇಸಿಸ್ ಉಗ್ರರನ್ನು ಬಳಸಿ ರಕ್ತಪಾತ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಸಂಚು ರೂಪಿಸಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲೂ ಕೆಲ ದಿನ ನೆಲೆಸಿದ್ದ ಈಗ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಖ್ವಾಜಾ ಮೊಯಿದ್ದೀನ್ ಒಳಗೊಂಡ ಆರು ಮಂದಿಯ ತಂಡದಲ್ಲಿದ್ದ ಇಬ್ಬರು ತಪ್ಪಿಸಿಕೊಂಡಿದ್ದು , ಈ ದಾಳಿಯಲ್ಲಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಗಂಭೀರ ಸಂಗತಿಯಿಂದ ಎಚ್ಚೆತ್ತುಕೊಂಡಿರುವ vಲೀಸರು ಹೈ ಅಲರ್ಟ್ ಆಗಿದ್ದಾರೆ.

ಈ ಇಬ್ಬರು ಕುಖ್ಯಾತ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದು,ಅಗತ್ಯವಾದ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಇಸಿಸ್ ಉಗ್ರರಿಂದ ದಾಳಿ ನಡೆಸುವ ಮೂಲಕ ಆ ದಾಳಿಯ ಹೊಣೆಯನ್ನು ಇಸಿಸ್ ತಲೆಗೆ ಕಟ್ಟುವುದು ಪಾಕಿಸ್ತಾನದ ಐಎಸ್‍ಐ ಹುನ್ನಾರವಾಗಿದೆ. ಆದರೆ ಈ ದಾಳಿಯ ಹಿಂದಿನ ಸೂತ್ರಧಾರ ಅದೇ ಸಂಸ್ಥೆ ಎಂದು ಮೂಲಗಳು ಮಾಹಿತಿ ನೀಡಿವೆ. ಪಾಕಿಸ್ತಾನ ಸೇನೆಯೇ ಉಗ್ರರಿಗೆ ಭಾರತದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲು ನೇರ ನೆರವು ನೀಡುತ್ತಿರುವುದರಿಂದ ಈ ಭಾರಿ ಹಿಂದಿಗಿಂತಲೂ ಪರಿಸ್ಥಿತಿ ಭಿನ್ನವಾಗಿದ್ದು , ಬಿಗಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ.

ತಮಿಳುನಾಡಿನ ತಿರುವಳ್ಳೂವರ್ ಜಿಲ್ಲೆಯ ಹಿಂದೂ ಸಂಘಟನೆಯ ನಾಯಕ ಕೆ.ಪಿ.ಸುರೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಆರು ಮಂದಿ ಉಗ್ರರು ತಮಿಳುನಾಡಿನಿಂದ ಪರಾರಿಯಾಗಿದ್ದರು.ಈ ಗುಂಪು ಹತ್ಯೆ ಬಳಿಕ ಬೆಂಗಳೂರಿನಲ್ಲಿ ನೆಲೆ ನಿಂತು, ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಿತ್ತು. ಅಲ್ಲಿಂದ ನೇಪಾಳಕ್ಕೆ ಪ್ರಯಾಣಿಸಿ, ಮತ್ತೆ ಭಾರತ ಪ್ರವೇಶಿಸಿತ್ತು. ಈ ಪೈಕಿ ಖ್ವಾಜಾ ಮೊಯಿದ್ದೀನ್ ಅಬ್ದುಲ್ ಸಮದ್ ಸೇರಿ ಮೂವರನ್ನು ದೆಹಲಿಯಲ್ಲಿ ಹಾಗೂ ನಾಲ್ಕನೆಯವನನ್ನು ಗುಜರಾತಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನಕ್ಕೊಳಪಡಿಸಿದ್ದಾರೆ.

ಈ ಗುಂಪಿನಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಅವರು ಜ.26ರಂದು ದೆಹಲಿ ಅಥವಾ ಗುಜರಾತ್ ರಾಜ್ಯದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ. ಆ ದಾಳಿ ಜಂಟಿಯಾಗಿ ಬೇಕಾದರೂ ನಡೆಯಬಹುದು. ಇಬ್ಬರೂ ಏಕಾಂಗಿಯಾಗಿ ಬೇರೆ ಕಡೆ ದಾಳಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಇಬ್ಬರೂ ಉಗ್ರರಿಗೆ ವಿದೇಶ ನಿಯಂತ್ರಕರೊಬ್ಬರಿಂದ ಸಹಾಯ ಸಿಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಜ.26ಕ್ಕೆ ಮುನ್ನ ಬೃಹತ್ ದಾಳಿಯನ್ನು ನಡೆಸುವಂತೆ ತನಗೆ ಸೂಚನೆ ಇದ್ದು ಎಂದು ನಾಲ್ಕನೇ ಆರೋಪಿ ಹೇಳಿದ್ದಾರೆ. ಈತ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದು, ಆತನಿಂದ ಮಾಹಿತಿ ಹೆಕ್ಕಲು ತಮಿಳು ತರ್ಜುಮೆಕಾರನನ್ನು ಪೊಲೀಸರು ಬಳಸಿಕೊಂಡಿದ್ದಾರೆ.

ಪ್ರತಿ ವರ್ಷ ಜ.26ರ ಈ ಗಣತಂತ್ರ ದಿವಸ್‍ದಂದು ವಿದೇಶಗಳ ಗಣ್ಯಾತಿಗಣ್ಯರು ಹಾಗೂ ಅಸಂಖ್ಯಾತ ಮಂದಿ ದೆಹಲಿಯಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ವ್ಯಾಪಕ ಭದ್ರತೆ ವಹಿಸುವುದು ಭದ್ರತಾ ಪಡೆಗಳು ಮತ್ತು ಪೊಲೀಸರಿಗೆ ಸವಾಲಿನ ಕಾರ್ಯವಾಗಿರುವಾಗಲೇ ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

Facebook Comments

Sri Raghav

Admin