ದೆಹಲಿಯಲ್ಲಿ ಕಣ್ಮನ ಸೆಳೆದ ವಿಜಯನಗರ ವೈಭವದ ಸ್ತಬ್ಧಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.27- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೋಡುಗರ ಕಣ್ಮನ ಸೆಳೆದದ್ದು ಕರ್ನಾಟಕದ ಸ್ತಬ್ಧಚಿತ್ರ. ವಿಜಯನಗರದ ಸಾಮ್ರಾಜ್ಯವನ್ನು ನೆನಪಿಸುವ ಈ ಸ್ತಬ್ಧಚಿತ್ರ ಪ್ರಮುಖ ಆಕರ್ಷಣೆಯಾಗಿತ್ತು. ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿ ಯಲ್ಲಿ ನಡೆಯುವ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಕರ್ನಾಟಕದ ವಿಜಯನಗರದ ಪರಿಕಲ್ಪನೆ ಅತ್ಯದ್ಭುತವಾಗಿತ್ತು ಎಂಬುದು ಬಹುತೇಕ ಜನರ ಅನಿಸಿಕೆ.

ವಿಜಯನಗರ-ವಿಜಯದ ನಗರ ಎಂಬ ಪರಿಕಲ್ಪನೆಯೊಂದಿಗೆ ಕರ್ನಾಟಕವೂ ಗಣರಾಜ್ಯೋತ್ಸವ ದಿನಾಚರಣೆಯ ಸ್ತಬ್ಧಚಿತ್ರವನ್ನು ನಿರ್ಮಿಸಿತ್ತು. ಕಲಾವಿದ ಶಶಿಧರ ಹಡಪ ಅವರ ನಿರ್ದೇಶನದಲ್ಲಿ, ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆಯಲ್ಲಿ ಸ್ತಬ್ಧಚಿತ್ರ ಮೂಡಿಬಂದಿತ್ತು. ಶಿವಮೊಗ್ಗದ ರಂಗಾಯಣದ 12 ಮಂದಿ ಕಲಾವಿದರನ್ನು ಬಳಸಿಕೊಳ್ಳಲಾಗಿತ್ತು.

ವಿಜಯನಗರದ ಹಂಪಿ ಎಂದ ಕೂಡಲೇ ಥಟ್ಟನೆ ಕಣ್ಣಿಗೆ ಕಟ್ಟುವುದು ಉಗ್ರ ನರಸಿಂಹಮೂರ್ತಿ. ಆ ಮೂರ್ತಿಯನ್ನು ಸ್ತಬ್ಧಚಿತ್ರದ ಮುಂಭಾಗದಲ್ಲಿ ಅಳವಡಿಸಲಾಗಿತ್ತು. ಭಗವಾನ್ ಹನುಮನ ಜನ್ಮಸ್ಥಳವೆಂದೇ ಹೇಳಲಾಗುವ ಅಂಜನಾದ್ರಿಯ ಬೆಟ್ಟದಲ್ಲಿರುವ ಆಂಜನೇಯಸ್ವಾಮಿಯನ್ನು ಕೂಡ ಸ್ತಬ್ಧಚಿತ್ರದಲ್ಲಿ ಅಳವಡಿಸಲಾಗಿತ್ತು.

ಹನುಮ ಕನ್ನಡಿಗರೆಂಬ ಪ್ರತೀತಿಯೂ ಇದೆ. ವಿಜಯನಗರ ಸಾಮ್ರಾಜ್ಯದ ಸರ್ವಶ್ರೇಷ್ಠ ಸಾಮ್ರಾಟ ಶ್ರೀ ಕೃಷ್ಣದೇವರಾಯರಿಗೆ 1509ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭ ಮತ್ತು ಹಜಾರರಾಮ ದೇವಾಲಯದ ಭಿತ್ತಿಚಿತ್ರಗಳನ್ನು ಸ್ತಬ್ಧಚಿತ್ರವು ಬಿಂಬಿಸುತ್ತಿತ್ತು. ವಿಜಯ-ವಿಠಲ ದೇವಾಲಯದ ಸಂಗೀತ ಕಂಬಗಳು ಕೂಡ ಬಿಂಬಿತವಾಗಿದ್ದವು. ತುಂಗಭದ್ರಾ ನದಿ ದಡದಲ್ಲಿ ಪ್ರವರ್ಧಮಾನಕ್ಕೆ ಬಂದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ವಿಜಯನಗರವನ್ನು ಸ್ತಬ್ಧಚಿತ್ರ ನೆನಪಿಸುವಂತೆ ಬಿಂಬಿಸಲಾಗಿತ್ತು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಒತ್ತು ಕೊಡಬೇಕು ಹಾಗೂ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಳವೆಂದು ಗುರುತಿಸಿರುವ ಹಂಪಿಯನ್ನು ಸ್ತಬ್ಧಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಮಹೇಶ್ವರರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದನ್ನು ಇಲಾಖೆ ಆಯುಕ್ತರಾದ ಡಾ.ಹರ್ಷ ಅವರು ಅನುಷ್ಠಾನಕ್ಕೆ ತಂದರು.

ಕಾಕತಾಳೀಯವೆಂಬಂತೆ ಬಳ್ಳಾರಿ ಜಿಲ್ಲೆಯಿಂದ ವಿಭಜನೆಯಾದ ವಿಜಯನಗರವು ರಾಜ್ಯದ 31ನೆ ಜಿಲ್ಲೆಯಾಗಿ ಡಿಸೆಂಬರ್‍ನಲ್ಲಿ ರಾಜ್ಯ ಸರ್ಕಾರದಿಂದ ಅಧಿಸೂಚಿಸಲ್ಪಟ್ಟಿದೆ.
ಸ್ಪಷ್ಟನೆ: ಸ್ತಬ್ಧಚಿತ್ರದಲ್ಲಿ ಕನ್ನಡವಿರಲಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ಸ್ತಬ್ಧಚಿತ್ರದ ಮುಂಭಾಗದಲ್ಲಿ ಹಿಂದಿ ಭಾಷೆಯಲ್ಲಿ, ಹಿಂಭಾಗದಲ್ಲಿ ಆಂಗ್ಲ ಭಾಷೆಯಲ್ಲಿ ಸ್ತಬ್ಧಚಿತ್ರದ ಎಡ-ಬಲ ಬದಿಯಲ್ಲಿ ಕರ್ನಾಟಕ ಎಂದು ಕನ್ನಡ ಭಾಷೆಯಲ್ಲಿ ರಾಜ್ಯದ ಹೆಸರನ್ನು ಬರೆಯಲಾಗಿದೆ. ಕೃಷ್ಣದೇವರಾಯರ ಕಾಲದಲ್ಲಿ ಇದ್ದ ಕೇಸರಿ ಬಣ್ಣದ ಧ್ವಜವನ್ನೇ ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Facebook Comments